ಅಲ್ವಾರ್ (ರಾಜಸ್ಥಾನ) : ರಾಜಸ್ಥಾನದಲ್ಲಿ ಮನುಷ್ಯರಂತೆ ನಾಯಿಗಳು ಕೂಡ ರಕ್ತದಾನ ಮಾಡುತ್ತಿವೆ. ಇಲ್ಲಿನ ಫೋರ್ ಲೆಗ್ ಕೇರ್(4leg care) ಸಂಸ್ಥೆಯು ತಾನು ಸಾಕಿದ ನಾಯಿಗಳಿಂದ ರಕ್ತ ಪಡೆದು ಗಾಯಗೊಂಡ ಇತರ ಬೀದಿ ನಾಯಿಗಳಿಗೆ ನೀಡುತ್ತಿದೆ. ಸಂಸ್ಥೆ ಮತ್ತು ನಾಯಿಗಳ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದೊಂದು ಸರಪಳಿ ಮಾದರಿಯಲ್ಲಿ ರಕ್ತದಾನ ನಡೆಯುತ್ತಿದೆ. ಸಂಸ್ಥೆಯು ಸಾಕಿರುವ ಮೂರು ನಾಯಿಗಳ ದೇಹದಲ್ಲಿನ ರಕ್ತವನ್ನು ಪಡೆಯಲಾಗುತ್ತದೆ. ಗಾಯಾಳು ಬೀದಿ ನಾಯಿಗಳಿಗೆ ನೀಡಲಾಗುತ್ತದೆ. ತದನಂತರ ಗುಣಮುಖವಾದ ಈ ನಾಯಿಗಳಿಂದ ಅಗತ್ಯವಿರುವ ಬೇರೆ ನಾಯಿಗಳಿಗೆ ರಕ್ತ ಸರಬರಾಜು ಮಾಡಲಾಗುತ್ತದೆ.
'ಫೋರ್ ಲೆಗ್ ಕೇರ್' ಸಂಸ್ಥೆಯು ಅಲ್ವಾರ್‌ನ ಪಶುವೈದ್ಯಕೀಯ ಆಸ್ಪತ್ರೆ ಸಂಕೀರ್ಣದಲ್ಲಿ ದೀರ್ಘಕಾಲದಿಂದ ಈ ಚಿಕಿತ್ಸೆ ನೀಡುತ್ತಾ ಬರುತ್ತಿದೆ. ಅಪಘಾತ, ಥಳಿತದಿಂದ ಗಾಯಗೊಂಡ ಬೀದಿ ನಾಯಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಶ್ರೀರಕ್ಷೆಯಾಗಿದೆ. ಸಂಸ್ಥೆಯ ಸದಸ್ಯರ ಪ್ರಕಾರ, ನಾಯಿಗಳ ಜೊತೆಗೆ, ಕೋತಿ, ಬೆಕ್ಕು ಮತ್ತು ಪಾರಿವಾಳಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆಯಂತೆ.
ಮೂಕಪ್ರಾಣಿಗಳಿಗೆ ಜೀವದಾನ: ಸಂಸ್ಥೆಯ ಸದಸ್ಯ ದಿವಾಕರ್ ಮಾತನಾಡಿ, ಈ ಸಂಸ್ಥೆಯನ್ನು ನಗರದ ಕೆಲ ಯುವಕರು ಸೇರಿ ನಡೆಸುತ್ತಿದ್ದೇವೆ. ಅಪಾಯದಲ್ಲಿರುವ ಮೂಕಪ್ರಾಣಿಗಳಿಗೆ ಚಿಕಿತ್ಸಾ ಸೇವೆ ಒದಗಿಸುತ್ತಿದ್ದೇವೆ. ಗಾಯಗೊಂಡ ಬೀದಿ ನಾಯಿಗಳನ್ನು ಸಂಸ್ಥೆಯ ಸಿಬ್ಬಂದಿ ಇಲ್ಲಿಗೆ ಕರೆತಂದು ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಾರೆ. ಬಳಿಕ ಅದನ್ನು ಮೂಲ ಸ್ಥಳಕ್ಕೆ ಬಿಡಲಾಗುತ್ತದೆ. ಹಾಗೊಂದು ವೇಳೆ ಗುಣಮುಖವಾಗದೆ ಹೋದಲ್ಲಿ ಅಂತಹ ಪ್ರಾಣಿಗಳನ್ನು ಸಂಸ್ಥೆಯೇ ಆರೈಕೆ ಮಾಡುತ್ತದೆ ಎಂದು ತಿಳಿಸಿದರು.
ರಸ್ತೆ ಅಪಘಾತಗಳಿಂದ ಪ್ರಾಣಿಗಳು ಬೆನ್ನುಮೂಳೆ, ಕಾಲು ಮುರಿತಕ್ಕೆ ಒಳಗಾಗುತ್ತವೆ. ಹುಟ್ಟಿನಿಂದ ಕುರುಡು ಸಮಸ್ಯೆಯಿಂದ ಬಳಲುವ ನಾಯಿಗಳಿಗೂ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಮುಖವಾಗುವವರೆಗೆ ಆರೈಕೆ ಮಾಡಲಾಗುತ್ತದೆ. ಸಂಸ್ಥೆಯ ಯುವಕರು ತಮ್ಮ ನಿತ್ಯದ ಕೆಲಸದ ಜೊತೆಗೆ ಪ್ರಾಣಿ ಸೇವೆಗೂ ಸಮಯ ಮೀಸಲಿಡುತ್ತಿದ್ದಾರೆ ಎಂದರು.
ಜನರ ದೇಣಿಗೆಯಲ್ಲಿ ಚಿಕಿತ್ಸೆ: ಚಿಕಿತ್ಸೆಗೆ ಬೇಕಾಗುವ ಖರ್ಚು ವೆಚ್ಚಗಳನ್ನು ಭರಿಸಲು ಜನರಿಂದ ದೇಣಿಗೆ ಸಂಗ್ರಹಿಸಲಾಗುತ್ತದೆ. ಸಮಾಜದ ಬೆಂಬಲದಿಂದ ಈ ಸಾಮಾಜಿಕ ಕಾರ್ಯ ಮಾಡಲಾಗುತ್ತಿದೆ. ಜನರು ಕೂಡ ಈ ಸಂಘಟನೆಯನ್ನು ಬೆಂಬಲಿಸುತ್ತಿದ್ದಾರೆ. ಇದರಿಂದಾಗಿ ನಾಯಿ, ಬೆಕ್ಕು, ಮಂಗ ಮತ್ತು ಪಾರಿವಾಳಗಳಿಗೆ ಆಹಾರ, ನೀರು ಮತ್ತು ಔಷಧ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಇಲ್ಲಿಯವರೆಗೂ 85 ಕ್ಕೂ ಹೆಚ್ಚು ನಾಯಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಗಾಯಗೊಂಡ ನಾಯಿಗಳ ಬಗ್ಗೆ ಯಾರು ಬೇಕಾದರೂ ಮಾಹಿತಿ ನೀಡಬಹುದು. ಅಲ್ಲಿಗೆ ತೆರಳುವ ನಮ್ಮ ಸಿಬ್ಬಂದಿ ಅದನ್ನು ಆಸ್ಪತ್ರೆಗೆ ಕರೆತರುತ್ತಾರೆ. ಇಲ್ಲಿ ಚಿಕಿತ್ಸೆ, ಆರೈಕೆ ಮಾಡಿ ಮರಳಿಸಲಾಗುತ್ತದೆ. 50 ಕ್ಕೂ ಹೆಚ್ಚು ನಾಯಿಗಳು ಚಿಕಿತ್ಸೆ ಪಡೆದು ಚೇತರಿಸಿಕೊಂಡಿವೆ ಎಂದು ತಿಳಿಸಿದರು.
ಆರೋಗ್ಯವಂತ ನಾಯಿಗಳಿಂದ ರಕ್ತದಾನ: ತಮ್ಮಲ್ಲಿರುವ ಮೂರು ನಾಯಿಗಳು ತಲಾ ಆರು ಬಾರಿ ರಕ್ತದಾನ ಮಾಡಿ ಇತರ ಪ್ರಾಣಿಗಳಿಗೆ ಜೀವದಾನ ಮಾಡಿವೆ. ಇನ್ನೊಂದು ನಾಯಿಗೆ ರಕ್ತ ಬೇಕಾದಾಗ, ಆರೋಗ್ಯವಂತ ನಾಯಿಯಿಂದ ಪಡೆದು ವರ್ಗಾಯಿಸಲಾಗುತ್ತದೆ. ಲಸಿಕೆ, ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಇದರಿಂದ ಅವು ದುರ್ಬಲವಾಗುವುದಿಲ್ಲ ಎಂದರು.
ಓದಿ: ಶ್ವಾನಗಳು ನಿಜವಾಗಿಯೂ ಆತ್ಮಗಳನ್ನು ನೋಡ್ತಾವಾ? ರಾತ್ರಿ ಅವು ಊಳಿಡುವುದಕ್ಕೆ ವಿಜ್ಞಾನ ಬಿಚ್ಚಿಟ್ಟಿದೆ ಕಾರಣ!
ಓದಿ: ಶಿವಮೊಗ್ಗ: ಮನೇಕಾ ಗಾಂಧಿ ಎಂಟ್ರಿ, ಬೀದಿ ನಾಯಿಯನ್ನು ಕ್ರೂರವಾಗಿ ಕೊಂದ ಆಟೋ ಚಾಲಕನ ಬಂಧನ