ಹೈದರಾಬಾದ್:ಬೋಲ್ಡ್ ನಟನೆಯಿಂದ 'ಲೇಡಿ ಸೂಪರ್ಸ್ಟಾರ್' ಪಟ್ಟ ಗಿಟ್ಟಿಸಿಕೊಂಡಿರುವ ನಟಿ ನಯನತಾರಾ ಇನ್ಸ್ಟಾಗ್ರಾಮ್ ಖಾತೆಯ ಸುತ್ತ ಇದೀಗ ಎಲ್ಲರ ಕಣ್ಣು ಬಿದ್ದಿದೆ. ನಯನತಾರಾ ತಮ್ಮ ಪತಿ, ಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಅವರನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಇದರಿಂದ ಈ ತಾರೆಗಳ ಸುಂದರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ನಯನತಾರಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೇಸರದ ಪೋಸ್ಟ್‌ವೊಂದನ್ನು ಹಾಕಿರುವುದು ಇದಕ್ಕೆ ಕಾರಣ. "ಅವಳು ತನ್ನ ಕಣ್ಣೀರಿನೊಂದಿಗೆ 'ನನಗಿದು ದೊರಕಿತು' ಎಂದು ಶಾಶ್ವತವಾಗಿ ಹೇಳುತ್ತಾಳೆ" ("She’s gonna forever say ‘I got this’ even with tears in her eyes.") ಎಂದು ಬರೆದಿದ್ದರು. ಈ ರಹಸ್ಯ ಸಂದೇಶ ತಮ್ಮ ದಾಂಪತ್ಯ ಜೀವನದ ಬಗ್ಗೆಯೇ ಅಥವಾ ಮುಂದಿನ ಪ್ರಾಜೆಕ್ಟ್ ಬಗ್ಗೆ ಹಿಂಟ್ ನೀಡಿದ್ದಾರಾ? ಎಂಬ ಹಲವು ಗೊಂದಲಗಳೆದ್ದಿವೆ.
ಆದರೆ ಸದ್ಯ ಇಬ್ಬರ ಖಾತೆಗಳನ್ನು ಪರಿಶೀಲಿಸಲಾಗಿದ್ದು, ಇಬ್ಬರೂ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಒಮ್ಮೆ ಅನ್‌ಫಾಲೋ ಮಾಡಿದ ನಯನತಾರಾ ಅಭಿಮಾನಿಗಳ ಗಮನಿಸುವಿಕೆಯ ನಂತರ ಮತ್ತೆ ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ವಿಘ್ನೇಶ್ ಶಿವನ್ ತಮ್ಮ ಇನ್ಸ್‌ಟಾ ಸ್ಟೋರಿಯಲ್ಲಿ ನಯನತಾರಾ ಅವರ ಮುಂಬರುವ 'ಶೀ ಬ್ಯೂಟಿ ಅವಾರ್ಡ್ 9 ಸ್ಕಿನ್' ಕಾರ್ಯಕ್ರಮದ ಪೋಸ್ಟ್ ಹಾಕುವ ಮೂಲಕ ಎಲ್ಲಾ ಗಾಸಿಪ್ಗಳಿಗೆ ತೆರೆ ಎಳೆದಿದ್ದಾರೆ.
ವಿಘ್ನೇಶ್ ಶಿವನ್ ಇನ್ಸ್ಟಾ ಸ್ಟೋರಿ ನಯನತಾರಾ ಮತ್ತು ವಿಘ್ನೇಶ್ ಶಿವನ್ 2022 ಜೂನ್ 9ರಂದು ಹಸೆಮಣೆ ಏರಿದ್ದರು. ಏಳು ವರ್ಷದ ಪ್ರೀತಿಗೆ ಅಂದು ಮದುವೆಯ ಮುದ್ರೆ ಒತ್ತಿದ್ದರು. ಅದೇ ವರ್ಷ ಅಕ್ಟೋಬರ್ನಲ್ಲಿ ಬಾಡಿಗೆ ತಾಯ್ತನದ ಮೂಲಕ ದಂಪತಿ ಮುದ್ದಾದ ಅವಳಿ ಮಕ್ಕಳನ್ನು ಪಡೆದರು. ಮಕ್ಕಳ ಕುರಿತಾದ ಪೋಸ್ಟ್ಗಳನ್ನು ಆಗಾಗ್ಗೆ ವಿಘ್ನೇಶ್ ಶಿವನ್ ಹಾಗು ನಯನತಾರಾ ಹಂಚಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ:ವಿಡಿಯೋ: ಪತ್ನಿ ಉಪಾಸನಾ ಬಗ್ಗೆ ಕಾಳಜಿ ವಹಿಸಿದ ರಾಮ್ಚರಣ್ಗೆ ಫ್ಯಾನ್ಸ್ ಮೆಚ್ಚುಗೆ