ಬೆಂಗಳೂರು: ಒಂದೆಡೆ ವಕ್ಪ್ ಆಸ್ತಿ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಜನಜಾಗೃತಿ ಅಭಿಯಾನ ನಡೆಸುತ್ತಿದ್ದರೆ, ಮತ್ತೊಂದೆಡೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣದ ನಿಷ್ಠರು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದಾರೆ.
ನಗರದ ಸದಾಶಿವನಗರದಲ್ಲಿರುವ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಬುಧವಾರ ಈ ಕುರಿತು ಸಭೆ ಸೇರಿದ್ದ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್, ಮಾಜಿ ಶಾಸಕರಾದ ಎಂ.ವೈ.ಸಂಪಂಗಿ, ಎಂ.ಡಿ.ಲಕ್ಷ್ಮಿನಾರಾಯಣ, ತಿಪ್ಪರಾಜು ಹಾಗೂ ಬಸವರಾಜ್ ಚರ್ಚೆ ನಡೆಸಿ ದಾವಣಗೆರೆಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.
ಯಾವುದೇ ವ್ಯಕ್ತಿಯ ಇಲ್ಲವೇ ಬಣದ ಪರವಾಗಿ ಸಮಾವೇಶ ನಡೆಸದೇ, ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಿ ಹೊಸ ಹುರುಪು ತುಂಬಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಶಾಸಕ ರಮೇಶ್ ಜಾರಕಿಹೊಳಿ ಮತ್ತಿತರರು ಪಕ್ಷದ ಅಧ್ಯಕ್ಷರ ಅನುಮತಿ ಪಡೆಯದೆ ಚಿಹ್ನೆಯನ್ನು ಬಳಸದೆ ಜನಜಾಗೃತಿ ಅಭಿಯಾನಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ತಕ್ಷಣವೇ ವರಿಷ್ಠರು ಮಧ್ಯಪ್ರವೇಶಿಸಿ ಅಭಿಯಾನ ನಡೆಸದಂತೆ ಸ್ಪಷ್ಟ ಸೂಚನೆ ನೀಡಬೇಕೆಂದು ಪ್ರಮುಖರು ಒತ್ತಾಯಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ''ಕೆಲವರು ಪಕ್ಷಕ್ಕಿಂತ ನಾನೇ ದೊಡ್ಡವರೆಂದು ಬಿಂಬಿಸಿಕೊಂಡು ನಾಲ್ಕಾರು ಜನರ ಮೂಲಕ ಅಭಿಯಾನ ನಡೆಸುತ್ತಿದ್ದಾರೆ. ಇದು ಪಕ್ಷದ ಹಿತಕ್ಕಿಂತ ಸ್ವಾರ್ಥವೇ ಹೆಚ್ಚಾಗಿದೆ'' ಎಂದು ವಾಗ್ದಾಳಿ ನಡೆಸಿದರು.
''ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿರುವುದು ಈಗ ಪಾದಯಾತ್ರೆ ನಡೆಸುತ್ತಿರುವವರಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಂಪೂರ್ಣವಾಗಿ ಬೆಂಬಲ ಕೊಟ್ಟಿದ್ದಾರೆ. ಆದರೆ ಉದ್ದೇಶಪೂರ್ವಕವಾಗಿಯೇ ಪಕ್ಷದೊಳಗೆ ಬೆಂಬಲ ಸೂಚಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ'' ಎಂದು ಯತ್ನಾಳ್ ಹಾಗೂ ತಂಡದ ವಿರುದ್ದ ಕಿಡಿಕಾರಿದರು.
ಯಡಿಯೂರಪ್ಪ, ವಿಜಯೇಂದ್ರರನ್ನು ಟೀಕಿಸಿದರೆ ಮೋದಿ, ಶಾ ಅವರನ್ನು ಟೀಕಿಸಿದಂತೆ: ''ನೀವು ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಟೀಕಿಸಿದರೆ ಮೋದಿ, ಮತ್ತು ಅಮಿತ್ ಶಾ ಅವರನ್ನು ಟೀಕಿಸಿದಂತೆ. ಯಡಿಯೂರಪ್ಪ ರಾಜಕೀಯಕ್ಕೆ ಬಂದಾಗ ಕೆಲವರು ಇನ್ನೂ ಕಣ್ಣೇ ಬಿಟ್ಟಿರಲಿಲ್ಲ. ಅಂಥವರು ಕೂಡ ನಾಲ್ಕು ಮಂದಿ ಕಟ್ಟಿಕೊಂಡು ಪ್ರಚಾರಕ್ಕಾಗಿ ಅಭಿಯಾನ ಮಾಡುತ್ತಿದ್ದಾರೆ. ಇದಕ್ಕೆ ಕವಡೆಕಾಸಿನ ಕಿಮ್ಮಿತ್ತಿನ ಬೆಲೆ ಇಲ್ಲ'' ಎಂದರು.
''ದಾವಣಗೆರೆಯಲ್ಲಿ ನಾವು ಯಾವುದೇ ವ್ಯಕ್ತಿ ಅಥವಾ ಬಣದ ಪರವಾಗಿ ಸಮಾವೇಶ ಮಾಡುತ್ತಿಲ್ಲ. ಸಂಘಟನೆ ಪ್ರಬಲವಾಗಬೇಕು. ಕಾರ್ಯಕರ್ತರಲ್ಲಿ ನವಚೈತನ್ಯ ಮೂಡಿಸಬೇಕು ಇದು ನಮ್ಮ ಉದ್ದೇಶವಾಗಿದೆ'' ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
''ಯತ್ನಾಳ್ ಅವರೇ ನಿಮ್ಮ ಹೋರಾಟ ಯಾರ ವಿರುದ್ಧ, ಕಾಂಗ್ರೆಸ್ ವಿರುದ್ಧ ಇರಬೇಕು. ಮುಹಮ್ಮದ್ ಬಿನ್ ತುಘಲಕ್ ತರ ಪ್ರವಾಸ ಹೊರಟಿದ್ದಾರೆ. ಸಿದ್ದರಾಮಯ್ಯ ಅಡಿಯಾಳಾಗಿ ಕೆಲಸ ಮಾಡ್ತಿದ್ದಾರೆ. ನಮ್ಮಲ್ಲಿ ಸಿಎಂ ಆಗುತ್ತಾರೆ ಎಂದು ಹೇಳಲು ಯತ್ನಾಳ್‍ಗೆ ಏನು ಅಧಿಕಾರ ಇದೆ. ಯಡಿಯೂರಪ್ಪ ಅವರಿಗೂ ಅಧಿಕಾರ ಇಲ್ಲ. ಸ್ವಾರ್ಥಕ್ಕಾಗಿ ಕೆಟ್ಟ ಉದ್ದೇಶದಿಂದ ಕೆಲಸ ಮಾಡ್ತಾರೆ. ಯಡಿಯೂರಪ್ಪ ರಕ್ಷಣೆಗೆ ಏಕೆ ನಿಲ್ಲುತ್ತಿಲ್ಲ ಎಂದು ನಮ್ಮನ್ನು ಕಾರ್ಯಕರ್ತರು ಕೇಳುತ್ತಿದ್ದಾರೆ. ಅವರಿಗೆ ಉತ್ತರ ಹೇಳುವ ಜವಾಬ್ದಾರಿ ನಮ್ಮ ಮೇಲಿದೆ'' ಎಂದರು.
''ನೀವು ನಡೆಸುತ್ತಿರುವ ಹೋರಾಟ ಸಿದ್ದರಾಮಯ್ಯ ಮೋರ್ಚಾ ಎಂದು ಹಿರಿಯ ಮುತ್ಸದ್ಧಿ ವಿಶ್ವನಾಥ್ ಅವರೇ ಹೇಳಿದ್ದಾರೆ. ನರಿ ಕಥೆ ನಿಮಗೆ ಗೊತ್ತಿಲ್ಲವೇ? ಕೋಲಾರದ ಮುಳಬಾಗಿಲು ಭೇಟಿ ಬಳಿಕ ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದು ಬಿಜೆಪಿ ಬಲವರ್ಧನೆಗಾಗಿ, ಅಲ್ಲಿಂದ ಮುರುಡೇಶ್ವರ ದರ್ಶನ ಪಡೆದು ರವೀಂದ್ರನಾಥ್ ಪಾಟೀಲ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸುತ್ತೇವೆ. ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತೇವೆ'' ಎಂದು ರೇಣುಕಾಚಾರ್ಯ ಹೇಳಿದರು.
ವಿಜಯೇಂದ್ರ ಸಾರಥ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು - ಬಿ ಸಿ ಪಾಟೀಲ್: ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ''ವಿಜಯೇಂದ್ರ ಸಾರಥ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಇದು ಕಾರ್ಯಕರ್ತರ ಒಕ್ಕೋರಲ ಅಭಿಪ್ರಾಯವಾಗಿದೆ. ಕೆಲವರು ಆಗಲೇ ನಮ್ಮ ಬಣದವರೇ ಮುಖ್ಯಮಂತ್ರಿಯಾಗಲಿ, ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರ ಆಸೆ ಈಡೇರುವುದಿಲ್ಲ'' ಎಂದು ಪರೋಕ್ಷವಾಗಿ ಯತ್ನಾಳ್‍ಗೆ ತಿರುಗೇಟು ಕೊಟ್ಟರು.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ''ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸೋಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಹೊಣೆ ಎಂದು ಹೇಳಿದ್ದಾರೆ. ಅವರು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ'' ಎಂದು ದೂರಿದರು.
''ಯಡಿಯೂರಪ್ಪ ರಾಜಕಾರಣಕ್ಕೆ ಬಂದಾಗ ಇವರು ಕಣ್ಣೇ ಬಿಟ್ಟಿರಲಿಲ್ಲ. ಕೇವಲ ನಾಲ್ಕೈದು ಜನರು ಸೇರಿ ರಾಜ್ಯಾಧ್ಯಕ್ಷರನ್ನು ಇಳಿಸುತ್ತೇವೆ ಎಂದು ಹೋದರೆ ಅದು ಅವರ ಭ್ರಮೆ. ಯತ್ನಾಳ್ ಟೀಮ್ ಜೊತೆ ಹೋಗಿ ಯುದ್ದ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಅವರ ಟೀಕೆಗೆ ನಾವು ತಕ್ಕ ಉತ್ತರ ಕೊಡಬೇಕು. ಯತ್ನಾಳ್ ಪ್ರತ್ಯೇಕ ಹೋರಾಟದಿಂದ ಪಕ್ಷದಲ್ಲಿ ತೊಂದರೆಯಾಗಿದೆ. ಕಾರ್ಯಕರ್ತರು ಎಲ್ಲರು ಪ್ರಶ್ನೆ ಮಾಡುತ್ತಿದ್ದಾರೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಾನು ಯಾರನ್ನೂ ವಿರೋಧಿಸಲ್ಲ, ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ: ಸಿಎಂ ಸಿದ್ದರಾಮಯ್ಯ