ಬೆಂಗಳೂರು: ಮಕ್ಕಳಿಗೆ ಬಾಲ್ಯವಿವಾಹ ಮಾಡುವ ಪೋಷಕರ ವಿರುದ್ಧ ದಂಡನಾ ಕ್ರಮ ಜರುಗಿಸುವ ಮೂಲಕ ಅವರನ್ನು ಸಂವೇದನಶೀಲರನ್ನಾಗಿ ರೂಪಿಸುವ ಅಗತ್ಯವಿದ್ದು, ಪೋಷಕರ ನಡೆಯಿಂದ ಮಕ್ಕಳು ಪೋಕ್ಸೋ ಪ್ರಕರಣ ಎದುರಿಸುವಂತಾಗಿದೆ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಪ್ರಾಪ್ತೆಯನ್ನು ಮದುವೆಯಾದ ಕಾರಣಕ್ಕೆ ಆಕೆಯ ಪತಿ ಹಾಗೂ ಪೋಷಕರ ವಿರುದ್ಧ ಪೋಕ್ಸೋ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆ ಸೇರಿದಂತೆ ಮತ್ತಿತರ ಆರೋಪಗಳ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣಾ ಪೊಲೀಸರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಸಂತ್ರಸ್ತೆಯ ಪತಿ ಮತ್ತು ಪೋಷಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮದುವೆ ವಿಚಾರವಾಗಿ ಕಠಿಣ ಕ್ರಮದ ಅವಶ್ಯಕತೆ: ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, 18 ವರ್ಷ ತುಂಬುವ ಮುನ್ನವೇ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಪೋಷಕರ ಕ್ರಿಮಿನಲ್ ಪ್ರಕರಣ ರದ್ದುಪಡಿಸಲೇಬಾರದು. ಆಗಷ್ಟೇ ಬಾಲ್ಯ ವಿವಾಹ ಪ್ರಕರಣಗಳು ನಿಲ್ಲುತ್ತವೆ ಎಂದು ಅಭಿಪ್ರಾಯಟ್ಟಿದೆ.
ಅಂತಿಮವಾಗಿ, ಅರ್ಜಿದಾರರ ಪರ ವಕೀಲರ ಮನವಿ ಮೇರೆಗೆ ಕೇವಲ ಸಂತ್ರಸ್ತೆಯ ಪತಿಯ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಇದು ಪೋಕ್ಸೋ ಪ್ರಕರಣವಾಗಿದೆ. ಮೊದಲ ಅರ್ಜಿದಾರ ಸಂತ್ರಸ್ತೆಯ ಗಂಡ. ಉಳಿದ ಮೂರು ಅರ್ಜಿದಾರರು ಸಂತ್ರಸ್ತೆಯ ಪೋಷಕರಾಗಿದ್ದಾರೆ. ಮದುವೆಯಾದಾಗ ಸಂತ್ರಸ್ತೆ ಆಪ್ರಾಪ್ತೆಯಾಗಿದ್ದರು. ಪ್ರಕರಣದ ವರದಿಯಾದ ವೇಳೆ ಆಕೆಗೆ 17 ವರ್ಷ 4 ತಿಂಗಳಾಗಿತ್ತು. ಆದರೆ, ಅಧೀನ ನ್ಯಾಯಾಲಯದ ಮುಂದೆ ದಾಖಲಿಸಿದ ಸ್ವಯಿಚ್ಛೆ ಹೇಳಿಕೆಯಲ್ಲಿ ಮದುವೆಯಾದಾಗ ತನಗೆ 16 ವರ್ಷವಾಗಿತ್ತು ಎಂಬುದಾಗಿ ತಿಳಿಸಿದ್ದಾಳೆ. ಮದುವೆ ನಂತರ ಆಕೆಗೆ ಮಗು ಜನಿಸಿದೆ'' ಎಂದು ವಿವರಿಸಿದರು.
ಪ್ರಕರಣದಿಂದ ಪೋಷಕರನ್ನು ಕೈ ಬಿಡಲ್ಲ: ಸರ್ಕಾರಿ ಅಭಿಯೋಜಕರು, ''ಇದೊಂದು ಬಾಲ್ಯವಿವಾಹ ಪ್ರಕರಣ'' ಎಂದು ಮಾಹಿತಿ ನೀಡಿದರು. ಈ ವೇಳೆ ನ್ಯಾಯಪೀಠ, ''ಮದುವೆಯಾಗಿ ಎರಡು ವರ್ಷದ ನಂತರ ಪ್ರಕರಣ ದಾಖಲಾಗಿದೆ. ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಿ ಪೊಲೀಸರು ಸರಿಯಾದ ಕ್ರಮ ಜರುಗಿಸಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಆಕೆಯ ಪತಿ ವಿರುದ್ಧ ದೂರು ರದ್ದುಪಡಿಸಿದರೂ, ಪೋಷಕರನ್ನು ಮಾತ್ರ ಪ್ರಕರಣದಿಂದ ಕೈ ಬಿಡುವುದಿಲ್ಲ'' ಎಂದು ತಿಳಿಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ''ಪೋಷಕರು ಅನಕ್ಷರಸ್ಥರಾಗಿದ್ದಾರೆ. ಹಳ್ಳಿಯಲ್ಲಿ ಅವಿದ್ಯಾವಂತರೇ ಹೆಚ್ಚು. ಮಗಳು ವಯಸ್ಕಳಾಗಿದ್ದಾರೆ ಎಂದು ಭಾವಿಸಿ ಮದುವೆ ಮಾಡಿದ್ದಾರೆ. ಸಂತ್ರಸ್ತೆ ಸಹ 10ನೇ ತರಗತಿಯೇ ಶಾಲೆಯನ್ನು ಬಿಟ್ಟಿದ್ದು, ವ್ಯಾಸಂಗ ಮುಂದುವರಿಸುತ್ತಿರಲಿಲ್ಲ. ಮೊದಲ ಅರ್ಜಿದಾರ ತನ್ನ ಅಕ್ಕನ ಮಗಳನ್ನೇ ಮದುವೆಯಾಗಿರುವುದು'' ಎಂದು ಸಮಜಾಯಿಷಿ ನೀಡಿದರು.
ಪ್ರಕರಣಕ್ಕೆ ಪೋಷಕರೇ ಜವಾಬ್ದಾರಿ: ಇದಕ್ಕೆ ಸಿಟ್ಟಾದ ನ್ಯಾಯಪೀಠ, ''ಇದು ಕಟು ವಾಸ್ತವದ ಸಂಗತಿ. ಈ ಪರಿಸ್ಥಿತಿ ಬದಲಾಗಬೇಕಿದೆ. 18ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಬಾರದು ಎನ್ನುವುದನ್ನು ಪೋಷಕರು ತಿಳಿಯಬೇಕು. ಪೋಷಕರು ಸಣ್ಣ ವಯಸ್ಸಿಗೆ ಮಕ್ಕಳಿಗೆ ಮದುವೆ ಮಾಡುತ್ತಾರೆ. ಇದರಿಂದ ಮಕ್ಕಳು ಪೋಕ್ಸೋ ಪ್ರಕರಣ ಎದುರಿಸುವಂತಾಗಿದೆ. ಇಡೀ ಪ್ರಕರಣಕ್ಕೆ ಪೋಷಕರೇ ಜವಾಬ್ದಾರಿ'' ಎಂದು ಖಾರವಾಗಿ ಹೇಳಿತು.
''18 ವರ್ಷ ತುಂಬುವ ಮುನ್ನವೇ ಅಪ್ರಾಪ್ತ ಮಕ್ಕಳನ್ನು ಮದುವೆಯಾಗುವಂತೆ ಪೋಷಕರು ಏಕೆ ಬಲವಂತ ಮಾಡಬೇಕು. ಅಂತಹ ಪೋಷಕರನ್ನು ಸಹಿಸಲು ಸಾಧ್ಯವೇ ಇಲ್ಲ. ದಂಡನಾ ಕ್ರಮ ಜರುಗಿಸಿ ಪೋಷಕರನ್ನು ಸಂವೇದನಶೀಲರಾಗಿ ಮಾಡಲು ಇದು ಸಕಾಲ. ಮತ್ತೊಂದು ಪ್ರಕರಣದಲ್ಲಿ ಬಾಲಕಿಯೊಬ್ಬಳು ತನಗೆ 18 ವರ್ಷ ತುಂಬಿಲ್ಲ. ಮದುವೆ ಮಾಡಬೇಡಿ ಎಂದು ಕೇಳಿ ಕೊಂಡರೂ ಪೋಷಕರು ಮದುವೆ ಮಾಡಿದ್ದಾರೆ. ಹಾಗಾಗಿ, ದಂಪತಿ ವಿರುದ್ಧ ಪ್ರಕರಣ ರದ್ದುಪಡಿಸೋಣ. ಆದರೆ, ಪೋಷಕರು ಮಾತ್ರ ಬಾಲ್ಯವಿವಾಹ ತಡೆ ಕಾಯ್ದೆಯಡಿ ನ್ಯಾಯಾಲಯದ ವಿಚಾರಣೆ ಎದುರಿಸಲಿ. ಒಂದೆರಡು ಕ್ರಮ ಜರುಗಿಸಿದರೆ ಬಾಲ್ಯವಿವಾಹ ಮಾಡಬಾರದು ಎಂಬುದಾಗಿ ಪೋಷಕರಿಗೆ ಜ್ಞಾನೋದಯವಾಗುತ್ತದೆ'' ಎಂದು ತಿಳಿಸಿದ ಪೀಠ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ವಕೀಲೆ ಎಸ್.ಜೀವಾ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಕೋರಿರುವ ಅರ್ಜಿ ತೀರ್ಪು ಶುಕ್ರವಾರ ಪ್ರಕಟ