ಬೆಂಗಳೂರು: ಪರ ಸ್ತ್ರೀಯೊಂದಿಗೆ ಸಲುಗೆಯಿಂದ ಇರುವುದನ್ನು ಪ್ರಶ್ನಿಸಿದ್ದಕ್ಕೆ ತಾಯಿಗೆ ಮಗನೇ ಕಪಾಳಮೋಕ್ಷ ಮಾಡಿದ ಆರೋಪದಡಿ ರಾಮಮೂರ್ತಿನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಓರ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಲ್ಲೆಗೊಳಗಾದ ಮಂಗಳಮ್ಮ ಎಂಬುವರು ನೀಡಿದ ದೂರಿನ ಮೇರೆಗೆ ಪುತ್ರನಾಗಿರುವ ಪಿಎಸ್ಐ ಮಂಜುನಾಥ್ ಹಾಗೂ ಈತನ ಗೆಳತಿ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಮೂಲದ ಮಂಜುನಾಥ್ ರಾಮಮೂರ್ತಿನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಸಹ ನಗರದ ಸಂಚಾರ ಪೊಲೀಸ್ ಠಾಣೆಯೊಂದರಲ್ಲಿ ಇನ್ಸ್ಪೆಕ್ಟರ್ ಆಗಿದ್ದಾರೆ. ಇಬ್ಬರು ಪ್ರೀತಿಸಿ 2011ರಲ್ಲಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದೊಂದು ವರ್ಷದ ಹಿಂದೆ ಮಹಿಳೆಯೊಂದಿಗೆ ಮಂಜುನಾಥ್ ಸಲುಗೆ ಬೆಳೆಸಿಕೊಂಡಿದ್ದರು. ಈ ಬಗ್ಗೆ ಮಗನಿಗೆ ಬುದ್ಧಿ ಹೇಳಿದರೂ ಆ ಮಹಿಳೆಯ ಸಹವಾಸ ಬಿಟ್ಟಿರಲಿಲ್ಲ ಎಂದು ದೂರಿನಲ್ಲಿ ತಾಯಿ ಮಂಗಳಮ್ಮ ಆರೋಪಿಸಿದ್ದಾರೆ.
ಹಲವು ಬಾರಿ ಬುದ್ಧಿ ಹೇಳಿದರೂ ಮಗ ಮಾತು ಕೇಳದೆ ಸಲುಗೆ ಬೆಳೆಸಿಕೊಂಡಿದ್ದ. ಆ ಮಹಿಳೆಯ ಮನೆ ವಿಳಾಸ ಪತ್ತೆ ಹಚ್ಚಿ ಫೆ.16ರಂದು ಆಕೆಯ ನಿವಾಸಕ್ಕೆ ತೆರಳಿದ್ದೆ. ತಮ್ಮ ಮಗನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಆತನಿಂದ ದೂರವಿರುವಂತೆ ತಿಳಿ ಹೇಳಿದೆ. ಇದನ್ನು ತಿಳಿದುಕೊಳ್ಳದೇ ಆ ಮಹಿಳೆ ಕರೆ ಮಾಡಿ ಮಂಜುನಾಥನನ್ನ ಕರೆಯಿಸಿಕೊಂಡಿದ್ದಳು. ನಾನು ಬಂದಿರುವುದನ್ನ ಕಂಡು ಹೌಹಾರಿದ ಪುತ್ರ ಮಂಜುನಾಥ್, ನೀವು ಇಲ್ಲಿಗೇಕೆ ಬಂದಿದ್ದೀರಿ ಅಂತ ನನಗೆ ಕಪಾಳಮೋಕ್ಷ ಮಾಡಿದ. ಜಗಳ ಬಿಡಿಸಲು ಬಂದ ಮಕ್ಕಳ ಮೇಲೆಯೂ ಹಲ್ಲೆ ಮಾಡಿದ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಆ ಮಹಿಳೆ ಹಾಗೂ ಆಕೆಯ ಸಹೋದರ ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಾಯಿ ಮಂಗಳಮ್ಮ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೆ. ಆರ್. ಪುರ ಪೊಲೀಸರು ಪಿಎಸ್ಐ ಮಂಜುನಾಥ್ ಸೇರಿ ಮೂವರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಮೂರು ದಿನದೊಳಗಾಗಿ ಸಮಜಾಯಿಷಿ ನೀಡುವಂತೆ ನೋಟಿಸ್ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪರ ಸ್ತ್ರೀಯೊಂದಿಗೆ ಸಲುಗೆ: ಸುಪಾರಿ ನೀಡಿ ಗಂಡನ ಕಾಲು ಮುರಿಸಿದ ಪತ್ನಿ ಜೈಲಿಗೆ - SUPARI TO BREAK HUSBAND LEGS