ಲಕ್ನೋ(ಉತ್ತರ ಪ್ರದೇಶ): ಇಸ್ರೇಲ್ನಲ್ಲಿ ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡಲು ಉತ್ತರ ಪ್ರದೇಶದಿಂದ 5,600 ಕಾರ್ಮಿಕರನ್ನು ಈಗಾಗಲೇ ಕಳುಹಿಸಲಾಗಿದ್ದು, ಮತ್ತೆ 5,000 ಕಾರ್ಮಿಕರನ್ನು ಕಳುಹಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಅನಿಲ್ ರಾಜ್ಬರ್ ಇಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಶಾಸಕ ಪ್ರಭು ನಾರಾಯಣ್ ಯಾದವ್ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾಗರೋತ್ತರ ಕಾರ್ಮಿಕರ ಉದ್ಯೋಗಾವಕಾಶ ರಾಜ್ಯದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದರು.
ಇಸ್ರೇಲ್ನಲ್ಲಿ ನಮ್ಮ ಕಾರ್ಮಿಕರ ಕೊಡುಗೆ ಗಣನೀಯ. ಇದು ರಾಜ್ಯದ ಆರ್ಥಿಕತೆ ಮೇಲೂ ಒಳ್ಳೆಯ ಪರಿಣಾಮ ಬೀರುತ್ತಿದೆ. ವಾರ್ಷಿಕವಾಗಿ 1,000 ಕೋಟಿ ರೂ ವಿದೇಶಿ ಹಣವನ್ನು ಕಾರ್ಮಿಕರು ತಮ್ಮ ಕುಟುಂಬಗಳಿಗೆ ಕಳುಹಿಸುತ್ತಿದ್ದಾರೆ. ಇಸ್ರೇಲ್ನಲ್ಲಿ 11,000 ಪಾಲನೆ (ಕೇರ್ಗಿವರ್) ಕಾರ್ಮಿಕರಿಗೂ ಬೇಡಿಕೆ ಇದೆ ಎಂದರು.
ಸಾಗರೋತ್ತರ ಪ್ರದೇಶದಲ್ಲಿ ಉದ್ಯೋಗಾವಕಾಶಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನವನ್ನು ರಾಜ್ಯದಲ್ಲಿ ಸುಗಮಗೊಳಿಸಲಾಗುತ್ತಿದೆ. ಹಾಗೆಯೇ ಜರ್ಮನಿಯಲ್ಲಿ ತಿಂಗಳಿಗೆ 2.5 ಲಕ್ಷ ರೂ ಸಂಭಾವನೆ ಒದಗಿಸುವ 5,000 ನರ್ಸ್ಗಳಿಗೆ ಬೇಡಿಕೆ ಇದೆ. ಜಪಾನ್ನಲ್ಲೂ ಕೂಡ ಮಾಸಿಕ 1.25 ಲಕ್ಷ ರೂ ವೇತನದ 12,000 ಕೇರ್ಗಿವರ್ಗೆ ಬೇಡಿಕೆ ಇದೆ. ಈ ಅರ್ಜಿಗಳ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ರಾಜ್ಯ ಕೌಶಲ್ಯವಿರುವ ಕಾರ್ಮಿಕರೊಂದಿಗೆ ಈ ಬೇಡಿಕೆ ಪೂರೈಸಲು ಮುಂದಾಗಿದೆ ಎಂದು ಹೇಳಿದರು.
ಉದ್ಯೋಗ ಮೇಳ, ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸುವುದು, ಸೇವಾ ಮಿತ್ರ ವ್ಯವಸ್ಥೆ, ವೃತ್ತಿ ಸಮಾಲೋಚನೆ, ಹೊರಗುತ್ತಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಉದ್ಯೋಗಾವಕಾಶವನ್ನು ನೀಡುವ ಕಾರ್ಯಕ್ಕೆ ಮುಂದಾಗಿದ್ದೇವೆ. ಹಾಗೆಯೇ ಸರ್ಕಾರ ಬೆಂಬಲಿತ ಸಂಸ್ಥೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕಾರ್ಪೊರೇಷನ್ ಜೊತೆಯಲ್ಲೂ ಸರ್ಕಾರ ಉದ್ಯೋಗ ಉಪಕ್ರಮವನ್ನು ವಿಸ್ತರಿಸಿದೆ ಎಂದು ಸಚಿವರು ತಿಳಿಸಿದರು.
ಕಳೆದ ಎರಡು ವರ್ಷಗಳಲ್ಲಿ ಬಿಎ, ಡಿಪ್ಲೊಮಾ, ಬಿಟೆಕ್, ಎಂಟೆಕ್, ಪಿಎಚ್‌ಡಿ ಹೊಂದಿರುವ 5,68,062 ಜನರು ಉದ್ಯೋಗ ಬಯಸಿದ್ದು, 2022ರ ಏಪ್ರಿಲ್ 1ರಿಂದ 2024 ಮಾರ್ಚ್ 31ರ ವರೆಗೆ ಉದ್ಯೋಗ ಮೇಳಗಳ ಮೂಲಕ 4,75,510 ಅಭ್ಯರ್ಥಿಗಳು ಖಾಸಗಿ ವಲಯದಲ್ಲಿ ಉದ್ಯೋಗಕ್ಕಾಗಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಸಂಭಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಬರಹ: ವಿಕಿಪೀಡಿಯಾದ ನಾಲ್ವರು ಸಂಪಾದಕರ ವಿರುದ್ಧ FIR
ಇದನ್ನೂ ಓದಿ: ಪಿಎಂ-ಕಿಸಾನ್ ಯೋಜನೆ: 19ನೇ ಕಂತಿನ 22,000 ಕೋಟಿ ಹಣ ಸೋಮವಾರ ಬಿಡುಗಡೆ