ಬೆಂಗಳೂರು: ಖಾಸಗಿ ಕೆಲಸಗಳಿಗಾಗಿ ದೆಹಲಿ ಪ್ರವಾಸ ಮಾಡಿದ್ದೇನೆ. ಯಾವುದೇ ರಾಜಕೀಯದ ಕಾರ್ಯಕ್ರಮ ಇಟ್ಟುಕೊಂಡಿರಲಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಎಐಸಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಹೊಸ ಕಚೇರಿ ನೋಡಲು ಹೋಗಿದ್ದೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದೇನೆ. ಅವರನ್ನು ಹೊರತುಪಡಿಸಿ ಬೇರೆ ಯಾರನ್ನು ಸಹ ಭೇಟಿ ಮಾಡಿಲ್ಲ. ರಾಜಕೀಯದ ಅಜೆಂಡಾ ಇಟ್ಟುಕೊಂಡು ದೆಹಲಿಗೆ ಹೋಗಿರಲಿಲ್ಲ. ರಾಜಕೀಯ ವಿಚಾರದ ಬಗ್ಗೆ ಯಾವುದನ್ನು ಅವರೊಂದಿಗೆ ಮಾತನಾಡಿಲ್ಲ. ಜನ ಸಮುದಾಯಕ್ಕೆ ಗೊತ್ತಾಗುವಂತ ವಿಚಾರಗಳೇ ರಾಜಕೀಯ. ಮುಚ್ಚಿಡುವಂಥ ವಿಚಾರಗಳು ಏನು ಇಲ್ಲ ಎಂದರು.
ನಾನು ಒಂದು ವೇಳೆ ಅಜೆಂಡಾ ಇಟ್ಟುಕೊಂಡು ದೆಹಲಿಗೆ ಹೋಗಿದ್ದರೆ, ಆ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಇರಬಹುದು ಅಥವಾ ಮುಖ್ಯಮಂತ್ರಿ ವಿಚಾರ ಇರಬಹುದು ಯಾವುದನ್ನು ಎಲ್ಲಿಯೂ ಮಾತನಾಡಿಲ್ಲ. ಇದು ನಿಮ್ಮ ಗಮನಕ್ಕೆ ಇರಲಿ. ಶೋಷಿತ ಸಮಾವೇಶದ ಬಗ್ಗೆಯೂ ಮಾತನಾಡಿಲ್ಲ. ಯಾವುದೇ ರಾಜಕೀಯ ವಿಚಾರಗಳನ್ನು ಮಾತನಾಡಿಲ್ಲ. ಆ ರೀತಿ ಅಜೆಂಡಾಗಳಿದ್ದರೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ದೆ ಎಂದು ಸ್ಪಷ್ಟೀಕರಣ ನೀಡಲು ಬಯಸುತ್ತೇನೆ ಎಂದು ಹೇಳಿದರು.
ಮುಡಾ ಕೇಸ್‌ನಲ್ಲಿ ಸಿಎಂ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಬಿಜೆಪಿ ಆರೋಪಗಳ ಕುರಿತು ಪ್ರತಿಕ್ರಿಯಿಸುತ್ತಾ, ಮುಡಾ ಪ್ರಕರಣವನ್ನು ಲೋಕಾಯುಕ್ತ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಬಿಐಗೆ ಕೊಡುವ ಅಗತ್ಯವಿಲ್ಲ. ಒಂದೇ ಪ್ರಕರಣವನ್ನು ಎರಡು ಸಂಸ್ಥೆಗಳು ತನಿಖೆ ಮಾಡುವುದು ಆಗಬಾರದು. ಇದು ಕಾನೂನಿಗೆ ವಿರುದ್ಧ ಎಂಬುದನ್ನು ಹೈಕೋರ್ಟ್ ಹೇಳಿದೆ. ಬಿಜೆಪಿಯವರು ಲೋಕಾಯುಕ್ತ ತನಿಖೆಯನ್ನೇ ಪ್ರಶ್ನಿಸುತ್ತಿದ್ದಾರೆ. ತನಿಖೆಯಲ್ಲಿ ಸಿಕ್ಕಿದ್ದ ಸಾಕ್ಷ್ಯಾಧಾರಗಳ ಮೇಲೆ ತೀರ್ಮಾನ ಮಾಡಿದ್ದಾರೆ. ಸಾಕ್ಷ್ಯ, ಪುರಾವೆಗಳಿಲ್ಲ ಎಂದ ಮೇಲೆ ತೀರ್ಪು ಕೊಟ್ಟಿದ್ದಾರೆ. ಲೋಕಾಯುಕ್ತ ತನಿಖೆಯನ್ನು ಪ್ರಶ್ನಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಬಿಜೆಪಿಯವರು ಯೋಚಿಸಲಿ. ಬಿಜೆಪಿಯವರಿಗೆ ಪರವಾದ ತೀರ್ಪು ಬಂದಾಗ ತನಿಖಾ ಸಂಸ್ಥೆ ಸರಿ ಇರುತ್ತದೆ. ವಿರುದ್ಧವಾದ ತೀರ್ಪು ಬಂದಾಗ ಸರಿ ಇರುವುದಿಲ್ಲ. ಇದೆಂತ ರಾಜಕೀಯ ಎಂದು ಪ್ರಶ್ನಿಸಿದರು.
ಮುಡಾ ಪ್ರಕರಣದಲ್ಲಿ ಆರೋಪ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ಮಾಡುವಂತೆ ಲೋಕಾಯುಕ್ತಕ್ಕೆ ಸೂಚಿಸಿತ್ತು. ಆ ರೀತಿ ಏನು ಇಲ್ಲ ಎಂಬುದು ತನಿಖೆಯಲ್ಲಿ ಬಂದಿದೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆ. ಅದರ ಕೆಲಸ ಕಾರ್ಯಗಳಲ್ಲಿ ಸರ್ಕಾರ ಏನಾದರೂ ನಿರ್ದೇಶನ ನೀಡುತ್ತದೆಯೇ?. ಈ ರೀತಿಯಾಗಿ ನಡೆದುಕೊಳ್ಳುವಂತೆ ಹೇಳಲು ಆಗುತ್ತದೆಯೇ? ಎಂದು ಪರಮೇಶ್ವರ್ ಪ್ರಶ್ನಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೆ ಅಂತಾನೇ ನಾವೆಲ್ಲ ಭಾವಿಸಿದ್ದೇವೆ: ಸಚಿವ ಜಿ.ಪರಮೇಶ್ವರ್
ಇದನ್ನೂ ಓದಿ: ರಾಜಣ್ಣ ದೊಡ್ಡವರು, ಅವರ ಬಗ್ಗೆ ನಾನು ಮಾತನಾಡಲ್ಲ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನದ ಬಳಿಕ ಡಿಸಿಎಂ ಮಾತು