ಮಂಡ್ಯ: ದೇವೇಗೌಡರ ಕುಟುಂಬವನ್ನು ನಿಂದಿಸಿದರೆ ಗೂಟದ ಕಾರು ಸಿಗುತ್ತದೆ ಅನ್ನುವ ಭ್ರಮೆಯಲ್ಲಿ ಸಿ.ಪಿ.ಯೋಗೇಶ್ವರ್ ಇದ್ದಾರೆ. ಜೆಡಿಎಸ್ ಮುಗಿಸುವ ರೀತಿ ಮಾತನಾಡುವ ಯೋಗೇಶ್ವರ್ ಅವರೇ ಎಚ್ಚರಿಕೆ ಇರಲಿ. ನಿಮ್ಮ ನಡವಳಿಕೆ ಸರಿಪಡಿಸಿಕೊಳ್ಳದಿದ್ದರೆ, ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ನಿಮ್ಮ ಬಗ್ಗೆ ಮಾತನಾಡಿರುವ ರೆಕಾರ್ಡ್ ಇದೆ. ಅದನ್ನು ಹಾದಿ ಬೀದಿಯಲ್ಲಿ ಹೇಳಿ ಮಾನ ಹರಾಜು ಹಾಕುತ್ತೇವೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೆಲುವಿನ ಮದದಿಂದ ದೇವೇಗೌಡರನ್ನು ಮನೆಯಲ್ಲಿರಿ ಅನ್ನೋದು, ಕುಮಾರಣ್ಣ ಅವರನ್ನು ರಣಹೇಡಿ ಅನ್ನೋದು ಯೋಗೇಶ್ವರ್ ಅವರಿಗೆ ಶೋಭೆ ತರುವುದಿಲ್ಲ. ರಾಜಕಾರಣಕ್ಕೆ ದೇವೇಗೌಡರು ಬೀದಿಯಲ್ಲಿ ಓಡಾಡಲಿಲ್ಲ, ರೈತರ ಸಮಸ್ಯೆಗಳ ನಿವಾರಣೆಗಾಗಿ ಹೋರಾಟ ನಡೆಸಿದ್ದಾರೆ. ರೈತರು ಒಪ್ಪಿರುವುದಕ್ಕೆ ಗೌಡರು ಇನ್ನೂ ಗೌಡರಾಗಿದ್ದಾರೆ ಎಂದು ಹೇಳಿದರು.
ಯೋಗೇಶ್ವರ್ ಕೂಡ ಚುನಾವಣೆಯಲ್ಲಿ ಹಲವಾರು ಬಾರಿ ಸೋತಿದ್ದಾರೆ. ಈ ಬಾರಿ ಚುನಾವಣೆ ಇನ್ನೆರಡು ದಿನ ಇರುವಾಗಲೇ ರಣಹೇಡಿ ತರಹ ಯೋಗೇಶ್ವರ್ ಓಡಿ ಹೋದರು. ಈಗ ಗೆದ್ದಿರುವುದನ್ನು ಸ್ವಾಗತಿಸುತ್ತೇವೆ. ಚನ್ನಪಟ್ಟಣ ಮತದಾರರನ್ನು ಯೋಗೇಶ್ವರ್ ಗೌರವಿಸುವುದನ್ನು ಕಲಿಯಬೇಕು. ಲಘುವಾಗಿ ಮಾತನಾಡಿದರೆ ಎರಡೂ ಪಕ್ಷದ ಕಾರ್ಯಕರ್ತರು, ರೈತರು ತಕ್ಕ ಪಾಠ ಕಲಿಸುತ್ತಾರೆ ಎಂದು ಕುಟುಕಿದರು.
ರಾಮನಗರಕ್ಕೆ ನೀರು ಒದಗಿಸಲು ಮಳವಳ್ಳಿಯ ಸತ್ತೇಗಾಲದಿಂದ ಕಾವೇರಿ ನೀರು ತೆಗೆದುಕೊಂಡು ಬರಲು ಯೋಜನೆ ಮಾಡಿದ್ದು ಹೆಚ್.ಡಿ.ಕುಮಾರಸ್ವಾಮಿ. ಅವರು ಸಿಎಂ ಆಗಿದ್ದಾಗ ರಾಮನಗರ ಜಿಲ್ಲೆಗೆ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇಷ್ಟಿದ್ದರೂ ನೀನು ಅದ್ಯಾವುದೋ ಕೆಲವು ಕೆರೆಗಳಿಗೆ ನೀರು ಹರಿಸಿಬಿಟ್ಟು ಇಷ್ಟೊಂದು ಮಾತನಾಡುತ್ತೀಯಾ? ಎಂದು ಪ್ರಶ್ನಿಸಿದರು.
ನಿಖಿಲ್ ಕುಮಾರಸ್ವಾಮಿ ಅವರನ್ನು 2019 ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಅನಿವಾರ್ಯವಾಗಿ ನಿಲ್ಲಿಸಿದ್ವಿ. ಜಿಲ್ಲೆಯೊಂದಿಗೆ ಅಂಬರೀಶ್‌ಗೆ ಅವಿನಾಭಾವ ಸಂಬಂಧವಿದ್ದ ಕಾರಣ ನಿಖಿಲ್‌ಗೆ ಸೋಲಾಯಿತು. ಜನಾಭಿಪ್ರಾಯದ ಮುಂದೆ ನಾವು ಯಾರೂ ಅಲ್ಲ ಎಂದರು.
ಇದನ್ನೂ ಓದಿ: ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶಿಸಲು ಮುಂದಾದ ಬಿಜೆಪಿ ನಿಷ್ಠರ ಬಣ: ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ