ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ಅವರ ಪತಿ, ಖ್ಯಾತ ನಿರ್ದೇಶಕ ವಿಘ್ನೇಶ್ ಶಿವ ವಿರುದ್ಧ ತಮಿಳು ಸೂಪರ್ ಸ್ಟಾರ್ ಧನುಷ್ ಅವರ ನಿರ್ಮಾಣ ಸಂಸ್ಥೆ ವಂಡರ್ ಬಾರ್ ಮೂವೀಸ್ ಮದ್ರಾಸ್ ಹೈಕೋರ್ಟ್ನಲ್ಲಿ ಕಾಪಿರೈಟ್ ಉಲ್ಲಂಘನೆಯ ಮೊಕದ್ದಮೆ ಹೂಡಿದೆ.
ನೆಟ್ ಫ್ಲಿಕ್ಸ್ ಸಾಕ್ಷ್ಯಚಿತ್ರ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ನಲ್ಲಿ ವಂಡರ್ ಬಾರ್ ಮೂವೀಸ್ ನಿರ್ಮಿಸಿದ ನಾನುಮ್ ರೌಡಿ ಧಾನ್ ಚಲನಚಿತ್ರದ ದೃಶ್ಯಗಳನ್ನು ಬಳಸಿದ್ದು, ಇದು ಕೃತಿಸ್ವಾಮ್ಯದ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ನೆಟ್ ಫ್ಲಿಕ್ಸ್ ಸಾಕ್ಷ್ಯಚಿತ್ರದ ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲಿ ಧನುಷ್ ಈ ಹಿಂದೆ 10 ಕೋಟಿ ರೂ.ಗಳ ಪರಿಹಾರವನ್ನು ಕೋರಿದ್ದರು. ಟ್ರೇಲರ್ನಲ್ಲಿ ನಾನುಮ್ ರೌಡಿ ಧಾನ್ ಚಿತ್ರದ ಮೂರು ಸೆಕೆಂಡುಗಳ ತೆರೆಮರೆಯ ತುಣುಕುಗಳನ್ನು ಬಳಸಿಕೊಂಡಿರುವುದು ಕಂಡು ಬಂದಿದೆ.
ಮೊಕದ್ದಮೆ ಹೂಡಲು ಅನುಮತಿ ಕೋರಿದ ವಂಡರ್ ಬಾರ್ ಮೂವೀಸ್: ನೆಟ್ಫ್ಲಿಕ್ಸ್ನ ಮಾತೃ ಕಂಪನಿ ಲಾಸ್ ಗಾಟೋಸ್ ಪ್ರೊಡಕ್ಷನ್ ಸರ್ವೀಸಸ್ ಇಂಡಿಯಾ ಎಲ್ಎಲ್ಪಿಯ ವಿರುದ್ಧ ಮದ್ರಾಸ್ ಹೈಕೋರ್ಟ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿ ಮೊಕದ್ದಮೆ ಹೂಡಲು ಕೂಡ ವಂಡರ್ ಬಾರ್ ಮೂವೀಸ್ ನ್ಯಾಯಾಲಯದ ಅನುಮತಿಯನ್ನು ಕೋರಿದೆ.
ವಂಡರ್ ಬಾರ್ ಫಿಲ್ಮ್ಸ್ಗಾಗಿ ಧನುಷ್ ನಿರ್ಮಿಸಿದ ನಾನುಮ್ ರೌಡಿ ಧಾನ್ ಚಿತ್ರದಲ್ಲಿ ನಯನತಾರಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ತುಣುಕನ್ನು ನೆಟ್ ಫ್ಲಿಕ್ಸ್ ಸಾಕ್ಷ್ಯಚಿತ್ರದಲ್ಲಿ ತನ್ನ ಪೂರ್ವಾನುಮತಿಯಿಲ್ಲದೇ ಬಳಸಲಾಗಿದೆ ಎಂದು ಧನುಷ್ ಹೇಳಿದ್ದಾರೆ.
ವಿಚಾರಣೆ ಮುಂದೂಡಿದ ಕೋರ್ಟ್: ವಂಡರ್ ಬಾರ್ ಮೂವೀಸ್ ಸಲ್ಲಿಸಿದ ಸಿವಿಲ್ ಮೊಕದ್ದಮೆಯನ್ನು ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ನೇತೃತ್ವದ ನ್ಯಾಯಪೀಠದ ಮುಂದೆ ಬುಧವಾರ ಮಂಡಿಸಲಾಯಿತು. ನ್ಯಾಯಾಧೀಶರು ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವನ್ ಅವರಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದರು.
ವಂಡರ್ ಬಾರ್ ಮೂವೀಸ್ ಪರವಾಗಿ ವಾದಿಸಿದ ಹಿರಿಯ ವಕೀಲ ಪಿ.ಎಸ್.ರಾಮನ್ ಅವರು ಲಾಸ್ ಗಾಟೋಸ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವಂತೆ ಹೈಕೋರ್ಟ್ಗೆ ಮನವಿ ಮಾಡಿದರು.
ನಯನತಾರಾ ಮತ್ತು ನೆಟ್ಫ್ಲಿಕ್ಸ್ ಪರವಾಗಿ ವಕೀಲರಾದ ಸತೀಶ್ ಪರಾಶರನ್ ಮತ್ತು ಆರ್. ಪಾರ್ಥಸಾರಥಿ ಕ್ರಮವಾಗಿ ಹಾಜರಾಗಿದ್ದರು. ಲಾಸ್ ಗಾಟೋಸ್ ವಿರುದ್ಧ ಮೊಕದ್ದಮೆ ಹೂಡಲು ವಂಡರ್ ಬಾರ್ ಮೂವೀಸ್ನ ಮನವಿಯನ್ನು ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಈದೇ ಸಂದರ್ಭದಲ್ಲಿ ಪುರಸ್ಕರಿಸಿದರು. ಪ್ರಕರಣದ ಬಹುತೇಕ ಘಟನಾವಳಿಗಳು ಮದ್ರಾಸ್ ಹೈಕೋರ್ಟ್ ವ್ಯಾಪ್ತಿಯಲ್ಲಿ ಸಂಭವಿಸಿದ್ದರಿಂದ ಲಾಸ್ ಗಾಟೋಸ್ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿರುವುದಾಗಿ ನ್ಯಾಯಮೂರ್ತಿಗಳು ಹೇಳಿದರು.
ಇದನ್ನೂ ಓದಿ : ಮ್ಯಾಕ್ಸ್ ಚಿತ್ರತಂಡದಿಂದ ಅಭಿನಯ ಚಕ್ರವರ್ತಿಯ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್