ಬೆಂಗಳೂರು; ಬೇಸಿಗೆ ಕಾಲದಲ್ಲಿ ಎದುರಾಗುವ ಕುಡಿಯುವ ನೀರಿನ ಕೊರತೆ ನಿಭಾಯಿಸಲು ಬೆಂಗಳೂರು ಜಲಮಂಡಳಿ ಈಗಿನಿಂದಲೇ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಕ್ಕೆ ತರತೊಡಗಿದೆ. ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಿ ಬಿಡಬ್ಯು ಎಸ್ ಎಸ್ ಬಿ ಇಂದು ಆದೇಶ ಹೊರಡಿಸಿದೆ.
ಅಂತರ್ಜಲಮಟ್ಟ ಕುಸಿತದ ಹಿನ್ನೆಲೆ ಕ್ರಮ: ನಗರದಲ್ಲಿ ಪ್ರತಿದಿನ ಉಷ್ಣಾಂಶ ಹೆಚ್ಚಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಕುಸಿದಿದೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರು ವ್ಯರ್ಥ ಮಾಡುವುದನ್ನು ತಡೆಗಟ್ಟುವುದು ಅವಶ್ಯವಾಗಿದೆ. ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು ಎಂದು ತಿಳಿಸಿರುವ ಜಲಮಂಡಳಿ ಅಧ್ಯಕ್ಷರು ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರನ್ನು ಪೋಲು ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
![BWSSB Ban on non-potable water use in Bengaluru](https://etvbharatimages.akamaized.net/etvbharat/prod-images/18-02-2025/bwssborder_18022025213901_1802f_1739894941_368.jpg)
ಈ ಎಲ್ಲ ಉದ್ದೇಶಗಳಿಗೆ ಈ ಎಲ್ಲ ಕಡೆ ಬೇರೆ ಉದ್ದೇಶಗಳಿಗೆ ನೀರು ಬಳಸುವಂತಿಲ್ಲ: ವಾಹನಗಳ ಸ್ವಚ್ಛತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನರಂಜನೆಯ ಉದ್ದೇಶದ ಕಾರಂಜಿಗಳಿಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿ ಕುಡಿಯುವ ಉದ್ದೇಶ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಹಾಗೂ ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಸಹ ಕುಡಿಯುವ ನೀರಿನ ಬಳಕೆಯನ್ನ ನಿಷೇಧಿಸಲಾಗಿದೆ ಎಂದು ಜಲಮಂಡಳಿಯ ಆದೇಶದಲ್ಲಿ ವಿವರಿಸಲಾಗಿದೆ.
ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದೆ - 1964 ರ ಕಲಂ 33 ಮತ್ತು 34ರ ಪ್ರಕಾರ ಕುಡಿಯುವ ನೀರನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಜಲಮಂಡಳಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಡಿಯುವ ನೀರನ್ನು ಅನ್ಯ ಉದ್ದೆಶಗಳ ಬಳಕೆಗೆ ಇರುವ ನಿಷೇಧ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರ ಪ್ರಕಾರ 5000 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ನಿಷೇಧದ ಉಲ್ಲಂಘನೆ ಮರುಕಳಿಸಿದರೆ 5000 ಸಾವಿರ ರೂಪಾಯಿ ದಂಡದ ಜೊತೆಗೆ ಹೆಚ್ಚುವರಿಯಾಗಿ ಪ್ರತಿದಿನ 500 ರೂಪಾಯಿ ದಂಡ ಹಾಕಲಾಗುತ್ತದೆ. ಸಾರ್ವಜನಿಕರು ಕುಡಿಯುವ ನೀರಿನ ದುರ್ಬಳಕೆ ಕಂಡುಬಂದಲ್ಲಿ ಕೂಡಲೇ ಕಾಲ್ ಸೆಂಟರ್ ನಂಬರ್ 1916 ಗೆ ಮಾಹಿತಿ ನೀಡಬಹುದಾಗಿದೆ ಎಂದು ಜಲಮಂಡಳಿ ಅಧ್ಯಕ್ಷರು ಹೇಳಿದ್ದಾರೆ.