ಚಿತ್ರದ ಶೀರ್ಷಿಕೆಯಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಟಾಕ್ ಆಗುತ್ತಿರುವ ಸಿನಿಮಾ ಮ್ಯಾಕ್ಸ್. ವಿಕ್ರಾಂತ್ ರೋಣ ಚಿತ್ರದ ಬಳಿಕ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಇದಾಗಿದೆ. ಹೀಗಾಗಿ ಕಿಚ್ಚನ ಅಭಿಮಾನಿ ಬಳಗ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ. ಇತ್ತೀಚೆಗೆ ರಿವೀಲ್ ಆದ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಿಚ್ಚನ ಮ್ಯಾಕ್ಸ್ ಸಿನಿಮಾ ಈಗಾಗಲೇ ಬಿಡುಗಡೆ ಆಗಬೇಕಿತ್ತು.
ಆದರೆ ಈ ಚಿತ್ರದ ಗ್ರಾಫಿಕ್ಸ್ ಹಾಗು ವಿಎಫ್ಎಕ್ಸ್ ಕೆಲಸ ಮುಗಿಯದ ಕಾರಣ ಮ್ಯಾಕ್ಸ್ ಚಿತ್ರದ ಬಿಡುಗಡೆ ತಡವಾಗುತ್ತಿದೆ. ಇನ್ನೇನು 2024ನೇ ವರ್ಷ ಮುಗಿಯೋದಿಕ್ಕೆ ಬಂತು, ಯಾವಾಗ ಮ್ಯಾಕ್ಸ್ ಚಿತ್ರ ಬಿಡುಗಡೆ ಆಗುತ್ತೆ ಎಂದು ಸುದೀಪ್ ಅಭಿಮಾನಿಗಳು ಎದುರು ನೋಡ್ತಾ ಇದ್ದಾರೆ. ಇದರ ಬೆನ್ನಲ್ಲೇ ಮ್ಯಾಕ್ಸ್ ಚಿತ್ರತಂಡ ಸಣ್ಣ ಟೀಸರ್ ಮೂಲಕ ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ಸದ್ಯ ಅನಾವರಣಗೊಂಡಿರುವ ಮ್ಯಾಕ್ಸ್ ಟೀಸರ್ ನೋಡಿದರೆ ಇದೊಂದು ಪಕ್ಕಾ ಮಾಸ್ ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಆ್ಯಕ್ಷನ್ ಸಿನಿಮಾ ಇದಾಗಿದ್ದು, ಕಿಚ್ಚ ಮಾಸ್ ಅವತಾರದಲ್ಲಿ ಅಬ್ಬರಿಸಿರೋದು ಟೀಸರ್ನಲ್ಲಿ ಗೊತ್ತಾಗಿದೆ. ಆದ್ರೆ ಈ ಸಿನಿಮಾದಲ್ಲಿ ಕಿಚ್ಚ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿರೋದು ಈ ಚಿತ್ರದ ಹೈಲೆಟ್ಸ್.
ಇನ್ನು ಚಿತ್ರದಲ್ಲಿ ಸುದೀಪ್ ಭರ್ಜರಿ ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಈ ಟೀಸರ್ ಸಾಕ್ಷಿ. ಆ್ಯಕ್ಷನ್ ದೃಶ್ಯಗಳು ಮೈಜುಂ ಎನ್ನಿಸುವಂತಿದ್ದು, ಅಭಿಮಾನಿಗಳ ಕಣ್ಮನ ಸೆಳೆದಿದೆ. ಟೀಸರ್‌ನ ಕೊನೆಯಲ್ಲಿ ಬರುವ ಸುದೀಪ್ ಡ್ಯಾನ್ಸ್ ದೃಶ್ಯವು ಥಿಯೇಟರ್‌ನಲ್ಲಿ ಫ್ಯಾನ್ಸ್‌ಗೆ ಭರ್ಜರಿ ಟ್ರೀಟ್ ಕೊಡುವಂತಿದೆ.
ಈ ಚಿತ್ರದಲ್ಲಿ ಸುದೀಪ್ ಜೊತೆ ವರಲಕ್ಷ್ಮೀ ಶರತ್‌ಕುಮಾರ್, ತೆಲುಗು ನಟ ಸುನೀಲ್, ಶರತ್ ಲೋಹಿತಾಶ್ವ, 'ಕಾಲಕೇಯ' ಪ್ರಭಾಕರ್, ಪ್ರಮೊದ್ ಶೆಟ್ಟಿ, ನರೇನ್, ಸಂಯಕ್ತಾ ಹೊರನಾಡು ಮುಂತಾದವರು ನಟಿಸಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್.ತನು ಅವರ ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬರೋಬ್ಬರಿ 50 ಕೋಟಿ ಬಜೆಟ್ನಲ್ಲಿ ಮ್ಯಾಕ್ಸ್ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸುದೀಪ್ ಚಿತ್ರದಲ್ಲಿ ಅಭಿನಯ ಅಷ್ಟೇ ಅಲ್ಲ, ಬಂಡವಾಳ ಹೂಡಿರುವ ಕಾರಣ ಚಿತ್ರದ ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ.
ಮ್ಯಾಕ್ಸ್ ಚಿತ್ರದ ಸಂಪೂರ್ಣ ಚಿತ್ರೀಕರಣವು ತಮಿಳುನಾಡಿನ ಮಹಾಬಲಿಪುರಂ ಬಳಿ ಹಾಕಿದ್ದ ಬೃಹತ್ ಸೆಟ್‌ನಲ್ಲಿ ಮಾಡಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಮ್ಯಾಕ್ಸ್ ಸಿನಿಮಾಗೆ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಇದೆ. ಇಷ್ಟೆಲ್ಲ, ಹೈಲೆಟ್ಸ್ ಇರುವ ಮ್ಯಾಕ್ಸ್ ಚಿತ್ರ ಡಿಸೆಂಬರ್ 25ಕ್ಕೆ ವರ್ಲ್ಡ್ ವೈಡ್ ಬಿಡುಗಡೆ ಆಗಲಿದೆ.
ಇದನ್ನೂ ಓದಿ: 'ನಿಮ್ಮನ್ನು ಬಿಗ್ ಬಾಸ್ನಿಂದ ಹೊರ ಕಳುಹಿಸುತ್ತೇನೆ': ಚೈತ್ರಾ ಕುಂದಾಪುರಗೆ ರಜತ್ ಟಾಂಗ್; ಹೋಗೋದ್ಯಾರು?