ಮೈಸೂರು: "ಐದು ವರ್ಷವೂ ಈ ಸರ್ಕಾರ ಗಟ್ಟಿಯಾಗಿರುತ್ತದೆ. ಇದರಲ್ಲಿ ಅಲಗಾಡುತ್ತಿದೆ, ಖಾಲಿಯಾಗುತ್ತಿದೆ ಎಂಬ ಯಾವ ಚರ್ಚೆಯೂ ಬೇಡ. 2028ಕ್ಕೂ ನಮ್ಮದೇ ಸರ್ಕಾರ ಬರುತ್ತದೆ. ಆಗ ಬೇಕಾದರೆ ರೇಸಿನ ಬಗ್ಗೆ ಮಾತನಾಡೋಣ" ಎಂದು ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, "ರೇಸೇ ನಡೆಯದ ಮೇಲೆ ಆಕಾಂಕ್ಷಿ ಪ್ರಶ್ನೆಯೇ ಬರುವುದಿಲ್ಲ. ರೇಸ್ ಮುಗಿದಿದೆ, ನಾವು ಗುರಿ ತಲುಪಿದ್ದೇವೆ. ಆಡಳಿತ ಮಾಡುತ್ತಿದ್ದೇವೆ. ಸದ್ಯಕ್ಕೆ ಅವ್ಯಾವ ಪ್ರಶ್ನೆಗಳು ಇಲ್ಲ" ಎಂದು ತಿಳಿಸಿದರು.
ವಿಪಕ್ಷಗಳು ಸೋತಿವೆ: "ವಿಪಕ್ಷಗಳಿಗೆ ಸಂವಿಧಾನಿಕವಾಗಿ ಕೆಲಸ ಮಾಡಲು ಯಾವ ವಿಚಾರವೂ ಇಲ್ಲ. ಹಾಗಾಗಿ ಕಾರಣ ಇಲ್ಲದ ವಿಚಾರವನ್ನು ಇದೇ ಎನ್ನುವ ರೀತಿ ಮಾತನಾಡುತ್ತಿದ್ದಾರೆ. ವಿಪಕ್ಷಗಳು ತಮ್ಮ ಹುದ್ದೆ ನಿರ್ವಹಿಸುವಲ್ಲಿ ಸೋತಿವೆ. ಇಲ್ಲ ಅವರಿಗೆ ಆ ಹುದ್ದೆಯ ಮೆಚ್ಯೂರಿಟಿ ಬರುತ್ತಿಲ್ಲ ಅಷ್ಟೇ" ಎಂದು ವಿರೋಧ ಪಕ್ಷದ ವಿರುದ್ದ ವಾಗ್ದಾಳಿ ಮಾಡಿದರು.
ಹೈಕಮಾಂಡ್ ತೀರ್ಮಾನ ಅಂತಿಮ: ಕೆಪಿಸಿಸಿ ಅಧ್ಯಕ್ಷರ ವಿಚಾರವನ್ನೆಲ್ಲ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ವಿಚಾರದಲ್ಲಿ ನಾನು ಏನೂ ಹೇಳುವುದಿಲ್ಲ ಎಂದರು.
ಜಾತಿಗಣತಿ ವರದಿ ಬಗ್ಗೆ ಪ್ರತಿಕ್ರಿಯಿಸಿ, "ಇನ್ನೂ ಅಜೆಂಡಾ ನೋಡಿಲ್ಲ. ಜಾತಿಗಣತಿ ಆಗಬೇಕು ಎನ್ನುವ ಉದ್ದೇಶದಿಂದ ಸಮಿತಿ ರಚಿಸಿ, 150 ಕೋಟಿ ಖರ್ಚು ಮಾಡಿ ವರದಿ ಸಿದ್ಧವಾಗಿದೆ. ನಾಳೆ ಕ್ಯಾಬಿನೆಟ್ ಸಭೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಸೋಷಿಯಲ್, ಎಕಾನಮಿಕಲ್ ಸರ್ವೇ ಮಾಡಿಸಲಾಗಿದೆ. ಜನ ಹೇಗೆ ಬದುಕುತ್ತಿದ್ದಾರೆ ಎಂಬುದರ ಮೇಲೆ ಹಣಕಾಸು ಯೋಜನೆ ವಿನಿಯೋಗ ಮಾಡಬೇಕು ಎಂಬ ಉದ್ದೇಶ ಇದೆ" ಎಂದು ತಿಳಿಸಿದರು.
ದೇವರಾಜ ಮಾರುಕಟ್ಟೆ ಡೆಮಾಲಿಷ್: "ಅದು ಕಟ್ಟಡ, ಅಲ್ಲೊಂದು ಲೈಫ್ ಇರುತ್ತೆ. ಲೈಫ್ ಸೇಫಾಗಿದೆಯೋ, ಇಲ್ಲವೋ ನೋಡಬೇಕು. ಅದಕ್ಕಿಂತ ಮುಖ್ಯವಾಗಿ ಜನರ ಜೀವ ಮುಖ್ಯ. ಅಲ್ಲಿರುವವರನ್ನು ಒಕ್ಕಲೆಬ್ಬಿಸುವ ಉದ್ದೇಶ ನಮ್ಮಗಿಲ್ಲ. ನಾನೇ ಎರಡು ಮೂರು ಬಾರಿ ಹೋಗಿ ನೋಡಿದ್ದೇನೆ. ಕೋರ್ಟ್ ಡೆಮಾಲಿಷ್ ಮಾಡಿ ಎಂದು ಹೇಳಿದೆ. ಮುಂದೆ ತಾಂತ್ರಿಕ ಸಮಿತಿಗಳ ವರದಿ ನೋಡಿಕೊಂಡು ಮುಂದುವರೆಯುತ್ತೇವೆ" ಎಂದು ಉಸ್ತುವಾರಿ ಸಚಿವರು ಹೇಳಿದರು.
ಇದನ್ನೂ ಓದಿ: ಮುಖ್ಯಮಂತ್ರಿ ಹುದ್ದೆ ಬಗ್ಗೆ ಗೊಂದಲವೇನೂ ಇಲ್ಲ; ಸಚಿವ ಎಂ.ಬಿ. ಪಾಟೀಲ್