Pregnancy Fatigue Reduce Tips: ಕೆಲವು ಮಹಿಳೆಯರು ಮನೆ ಕೆಲಸ ಹಾಗೂ ಇತರ ದೈನಂದಿನ ಕಾರ್ಯಗಳಿಂದ ಸುಸ್ತಾಗುತ್ತಾರೆ. ಆದ್ರೆ, ಗರ್ಭಾವಸ್ಥೆಯಲ್ಲಿ ಆಯಾಸವಾಗುವುದು ಕೂಡ ಸಾಮಾನ್ಯವಾಗಿದೆ. ಅನೇಕ ಗರ್ಭಿಣಿಯರು ಆಗಾಗ್ಗೆ ಆಯಾಸದ ತೊಂದರೆಗೆ ಒಳಗಾಗುತ್ತಿದ್ದಾರೆ. ಗರ್ಭಿಣಿಯರಲ್ಲಿ ಆಯಾಸಕ್ಕೆ ಕಾರಣಗಳೇನು? ಗರ್ಭಿಣಿಯರಲ್ಲಿ ಆಯಾಸವು ಯಾವಾಗ ಹೆಚ್ಚಾಗಿ ಕಂಡುಬರುತ್ತದೆ? ಇದರಿಂದ ಹೊರಬರಲು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದನ್ನು ವಿವರವಾಗಿ ತಿಳಿಯೋಣ.
ಗರ್ಭಧಾರಣೆಯ ನಂತರ, ಆರಂಭದ ತಿಂಗಳುಗಳಲ್ಲಿ ಅವರ ದೇಹವು ಗರ್ಭಧಾರಣೆಗೆ ಹೊಂದಿಕೊಳ್ಳಲು ತುಂಬಾ ಪ್ರಯತ್ನಿಸುತ್ತದೆ. ಭ್ರೂಣವು ಆರೋಗ್ಯವಾಗಿರಲು ಅನೇಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಯಾಕೆಂದರೆ, ಇದು ಸಾಕಷ್ಟು ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಒಂದೆಡೆ ಹಾರ್ಮೋನ್ಗಳಲ್ಲಿ ಬದಲಾವಣೆಯಾಗುವ ಮೂಲಕ ನಿದ್ರೆಗೆ ಅಡ್ಡಿಯಾಗುತ್ತದೆ. ಪ್ರೊಜೆಸ್ಟರಾನ್ ಹಾರ್ಮೋನ್ ಹೆಚ್ಚು ಬಿಡುಗಡೆಯಾಗುವುದು ಕೂಡ ಆಯಾಸಕ್ಕೆ ಕಾರಣ ಆಗುತ್ತದೆ. ಮತ್ತೊಂದೆಡೆ, ಗರ್ಭಾವಸ್ಥೆಯಲ್ಲಿ ದೇಹದಲ್ಲಿ ರಕ್ತದ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಇದರ ಪರಿಣಾಮ ಹೃದಯವು ಹೆಚ್ಚು ಕೆಲಸ ಮಾಡುತ್ತದೆ. ಇದರಿಂದ ಅರಿವಿಲ್ಲದೆ ಬಹಳಷ್ಟು ಶಕ್ತಿಯನ್ನು ಬಳಕೆ ಮಾಡುತ್ತದೆ. ಗರ್ಭಿಣಿಯರಲ್ಲಿ ಆಯಾಸಕ್ಕೆ ಮಾನಸಿಕ ಹಾಗೂ ಭಾವನಾತ್ಮಕ ಪ್ರಕ್ಷುಬ್ಧತೆಯು ಒಂದು ಕಾರಣ ಎಂದು ತಜ್ಞರು ತಿಳಿಸುತ್ತಾರೆ.
ಗರ್ಭಿಣಿಯರಿಗೆ ತಮ್ಮ ಮಕ್ಕಳನ್ನು ನೋಡುವ ಆಸೆಯಷ್ಟೇ ಅಲ್ಲ, ಹೇಗೆ ಹೆರಿಗೆ ಮಾಡಿಸಿಕೊಳ್ಳಬೇಕು ಹಾಗೂ ಯಾವ ಆಸ್ಪತ್ರೆಗೆ ಹೋಗಬೇಕು, ಎಷ್ಟು ಹಣ ಖರ್ಚು ಮಾಡಬೇಕು, ಮಕ್ಕಳನ್ನು ಹೇಗೆ ಸಾಕಬೇಕು ಎನ್ನುವ ಆಲೋಚನೆಗಳು ಅವರ ಮನಸ್ಸಿನಲ್ಲಿ ಇರುತ್ತವೆ. ಚಿಕ್ಕ ಕುಟುಂಬಗಳಲ್ಲಿ ಈ ವಿಚಾರಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತದೆ. ಇದರ ಪರಿಣಾಮವು ದೇಹದ ಮೇಲೆ ಬೀರುತ್ತದೆ. ದೇಹದಲ್ಲಿ ಅಸ್ವಸ್ಥತೆ, ಸಣ್ಣ ನೋವುಗಳು ಹಾಗೂ ರಾತ್ರಿಯಲ್ಲಿ ಮೂತ್ರ ವಿಸರ್ಜಿಸಲು ಹಲವಾರು ಬಾರಿ ಎಚ್ಚರಗೊಳ್ಳುವುದು ಕೂಡ ಆಯಾಸಕ್ಕೆ ಕಾರಣ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಯಾವಾಗ ಹೆಚ್ಚು ಆಯಾಸವಾಗುತ್ತೆ?:
ಸಾಮಾನ್ಯವಾಗಿ ಮೊದಲ ಮೂರು ತಿಂಗಳಲ್ಲಿ (ಮೊದಲನೇ ತ್ರೈಮಾಸಿಕ) ಆಯಾಸ ಸಮಸ್ಯೆ ಶುರುವಾಗುತ್ತದೆ. ಆರರಿಂದ ಎಂಟು ವಾರಗಳ ಮಧ್ಯೆ ಹೆಚ್ಚು ಆಯಾಸ ಕಂಡುಬರುತ್ತದೆ. ಕೆಲವರಿಗೆ ಈ ಅವಧಿಯು ಹಿಂದೆ, ಮುಂದೆ ಆಗಿರಬಹುದು. ಎರಡನೇ ತ್ರೈಮಾಸಿಕದಲ್ಲಿ ನಿಮ್ಮ ಆಯಾಸವು ಸ್ವಲ್ಪ ಕಡಿಮೆ ಇರುತ್ತದೆ. ಆದ್ರೆ, ಮೂರನೇ ತ್ರೈಮಾಸಿಕದಲ್ಲಿ ಆಯಾಸವು ಮತ್ತೆ ಕಾಣಿಸುತ್ತದೆ. ಮೊದಲ ಮೂರು ತಿಂಗಳಲ್ಲಿ ಹಾರ್ಮೋನುಗಳು ಇದಕ್ಕೆ ಕಾರಣವಾಗಿರುತ್ತದೆ. ಇನ್ನು ಮೂರನೇ ತ್ರೈಮಾಸಿಕದಲ್ಲಿ ನಿದ್ರೆಯ ಕೊರತೆ ಹಾಗೂ ಅಸ್ವಸ್ಥತೆ ಹೆಚ್ಚಾಗಿ ಆಯಾಸಕ್ಕೆ ಕಾರಣ ಆಗುತ್ತದೆ.
ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಆಯಾಸ ಕಡಿಮೆಯಾಗುತ್ತೆ:
ಸಮತೋಲಿತ ಆಹಾರ: ಗರ್ಭಾವಸ್ಥೆಯಲ್ಲಿ ಮಹಿಳೆಯರು ಸರಿಯಾಗಿ ಆಹಾರ ಸೇವಿಸದೇ ಇರುವುದು ಸಾಮಾನ್ಯವಾಗಿದೆ. ಆಯಾಸವಾದಾಗ, ಮುಖ್ಯವಾಗಿ ವಾಕರಿಕೆ ಅನುಭವಿಸಿದಾಗ ಆಹಾರ ಸೇವಿಸುವುದು ತುಂಬಾ ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ನೀವು ಆರೋಗ್ಯಕರ ಆಹಾರ ಸೇವಿಸಬೇಕಾಗುತ್ತದೆ. ಪ್ರಮುಖವಾಗಿ ಹಣ್ಣುಗಳು, ತರಕಾರಿಗಳು ಹಾಗೂ ನೇರ ಪ್ರೋಟೀನ್ಗಳನ್ನು ಸೇವಿಸಬೇಕಾಗುತ್ತದೆ. ಇವು ದೇಹಕ್ಕೆ ಪೋಷಣೆ ನೀಡುವುದಲ್ಲದೆ ಶಕ್ತಿ ಹೆಚ್ಚಿಸಲು ಪೂರಕವಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಸಾಕಷ್ಟು ನೀರು ಕುಡಿಯಿರಿ: ಗರ್ಭಿಣಿಯರು ಆಯಾಸ ಕಡಿಮೆ ಮಾಡಲು ಸಾಕಷ್ಟು ನೀರು ಕುಡಿಯಬೇಕು. ಇದರಿಂದ ತಾಯಿ, ಮಗು ಇಬ್ಬರಿಗೂ ತುಂಬಾ ಒಳ್ಳೆಯದು. ಗರ್ಭಾವಸ್ಥೆಯಲ್ಲಿ ನೀವು ಸಾಕಷ್ಟು ನೀರು ಸೇವಿಸಿದರೆ, ದೇಹದ ಎಲ್ಲಾ ಪ್ರಕ್ರಿಯೆಗಳು ಸರಾಗವಾಗಿ ಹಾಗೂ ಸುಲಭವಾಗಿ ನಡೆಯಲು ಸಾಧ್ಯವಾಗುತ್ತದೆ. ಕಡಿಮೆ ಶಕ್ತಿಯ ಬಳಕೆಯಾಗುತ್ತದೆ, ಮೂತ್ರವು ತಿಳಿ ಹಳದಿ ಬಣ್ಣದಲ್ಲಿದ್ದರೆ, ನೀವು ಸಾಕಷ್ಟು ನೀರು ಕುಡಿಯುತ್ತಿದ್ದೀರಿ ಎಂಬುದು ತಿಳಿಯುತ್ತದೆ. ಅದೇ ಮೂತ್ರದ ಬಣ್ಣವು ಗಾಢವಾದ ಹಳದಿ ಬಣ್ಣವಿದ್ದರೆ, ನೀವು ಸಾಕಷ್ಟು ನೀರು/ದ್ರವವನ್ನು ತೆಗೆದುಕೊಳ್ಳುತ್ತಿಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ.
ಕೆಫೀನ್ ಕಡಿಮೆ ಮಾಡಿದರೆ ಉತ್ತಮ: ಗರ್ಭಾವಸ್ಥೆಯಲ್ಲಿ ಕಡಿಮೆ ಕೆಫೀನ್ ಸೇವಿಸುವುದು ಒಳ್ಳೆಯದು. ಏಕೆಂದರೆ, ಕೆಫೀನ್ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿದರೆ ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತದೆ ಎನ್ನುವುದನ್ನು ಮರೆಯದಿರಿ. ಸಾಕಷ್ಟು ನೀರು/ ದ್ರವಗಳನ್ನು ತೆಗೆದುಕೊಳ್ಳದಿದ್ದರೆ ದೇಹದಲ್ಲಿನ ನೀರಿನ ಅಂಶವು ಕಡಿಮೆ ಆಗುತ್ತದೆ. ಇದರಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆಯು ಇದೆ ಎಂದು ತಜ್ಞರು ತಿಳಿಸುತ್ತಾರೆ.
ವ್ಯಾಯಾಮಗಳು: ನಿಜವಾಗಿಯೂ ದಣಿದಿದ್ದರೆ ನಾವು ವ್ಯಾಯಾಮಗಳನ್ನು ಏಕೆ ಮಾಡಬೇಕು ಎಂಬ ಪ್ರಶ್ನೆಯು ನಿಮಗೆ ಬರುತ್ತದೆ. ಆದರೆ, ಗರ್ಭಿಣಿಯರಿಗೆ ಸುರಕ್ಷಿತ ವ್ಯಾಯಾಮ ಮಾಡುವುದರಿಂದ ನಿಮ್ಮನ್ನು ಸಂತೋಷಪಡಿಸುವ ಎಂಡಾರ್ಫಿನ್ಗಳು ಹೆಚ್ಚು ಬಿಡುಗಡೆಯಾಗುತ್ತವೆ. ಹೀಗಾಗಿ ವೈದ್ಯರ ಸಲಹೆಯಂತೆ ಸೂಕ್ತ ವ್ಯಾಯಾಮ ಮಾಡುವುದರಿಂದ ಆಯಾಸವನ್ನು ಸುಲಭವಾಗಿ ಕಡಿಮೆ ಮಾಡಬಹುದು.
ಸಾಧ್ಯವಾದರೆ, ಹಗಲಿನಲ್ಲಿ 10ರಿಂದ 15 ನಿಮಿಷಗಳ ಕಾಲ ಕಿರುನಿದ್ರೆ ಮಾಡಿ. ಇದರೊಂದಿಗೆ ದೇಹಕ್ಕೆ ಶಕ್ತಿ ಮರಳಿ ಬರುತ್ತದೆ. ಇದು ದಿನವಿಡೀ ಎಚ್ಚರವಾಗಿರಲು ಸಹಾಯ ಮಾಡುತ್ತದೆ. ಮೇಯೊ ಕ್ಲಿನಿಕ್ ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕಂಡುಕೊಂಡಿರುವಂತಹ ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದರಿಂದ ಗರ್ಭಾವಸ್ಥೆಯಲ್ಲಿ ಉಂಟಾಗುವ ಆಯಾಸವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಲು ಸಾಧ್ಯವಿದೆ ಎಂದು ತಿಳಿದಿದೆ (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಇದನ್ನೂ ಓದಿ:
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು:
ಓದುಗರಿಗೆ ಪ್ರಮುಖ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.