ತ್ರಿಶೂರ್, ಕೇರಳ: 15 ವರ್ಷದ ಬಾಲಪರಾಧಿಯೊಬ್ಬ 17 ವರ್ಷದ ಬಾಲಪರಾಧಿಯನ್ನು ಥಳಿಸಿ ಕೊಲೆ ಮಾಡಿರುವ ಘಟನೆ ತ್ರಿಶೂರ್ನ ರಾಮವರ್ಮಪುರಂನಲ್ಲಿರುವ ಬಾಲಗೃಹದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಮೃತ ಬಾಲಕನನ್ನು ಉತ್ತರ ಪ್ರದೇಶದ ಇರಿಂಜಲಕುಡ ನಿವಾಸಿ 17 ವರ್ಷದ ಅಂಕಿತ್ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ 15 ವರ್ಷದ ಬಾಲಕನನ್ನು ವಿಯ್ಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ರಾತ್ರಿ ಇಬ್ಬರ ಮಧ್ಯೆ ಜಗಳವಾಗಿದ್ದು, ಮಾತುಕತೆ ಮೂಲಕ ಬಗೆಹರಿಸಲಾಗಿತ್ತು. ಆದರೆ, ಇಂದು ಬೆಳಗ್ಗೆ 15 ವರ್ಷದ ಬಾಲಕ ಅಂಕಿತ್ನನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ನಿನ್ನೆ ರಾತ್ರಿ ಜಗಳವಾದ ಸಮಯದಲ್ಲಿ ತುಟಿಗೆ ಗಾಯ ಮಾಡಿಕೊಂಡಿದ್ದ ಬಾಲಕ ಬೆಳಗ್ಗೆ ಎದ್ದು ಹಲ್ಲುಜ್ಜುವಾಗ ಅಸಹನೀಯ ನೋವು ಅನುಭವಿಸಿದ್ದಾನೆ. ಆಗ ಕಚೇರಿಯ ಕೊಠಡಿಯಿಂದ ಸುತ್ತಿಗೆ ತೆಗೆದುಕೊಂಡು ಬಂದು ಅಂಕಿತ್ ತಲೆಗೆ ಹೊಡೆದಿದ್ದಾನೆ. ಗಾಯಗೊಂಡ ಕೈದಿಯನ್ನು ತಕ್ಷಣ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ.
ಕೊಲೆ ನಡೆದ ಸಮಯದಲ್ಲಿ ಬಾಲಗೃಹದಲ್ಲಿ ಇಬ್ಬರು ಆರೈಕೆದಾರರು ಇದ್ದು, ಅವರ ಘಟನೆಯಲ್ಲಿ ಭಾಗಿಯಾಗಿದ್ದಾರೆಯೇ ಎನ್ನುವ ಕುರಿತು ತನಿಖೆ ನಡೆಸಲಾಗುವುದು. ತನಿಖೆಗೆ ಆದೇಶಿಸಲಾಗಿದೆ. ವಿಚಾರಣೆ ಪೂರ್ಣಗೊಂಡ ನಂತರ ಕ್ರಮದ ಬಗ್ಗೆ ನಾವು ನಿರ್ಧರಿಸುತ್ತೇವೆ ಎದು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ತಿಳಿಸಿದರು.
'ಕೊಲೆ ಮಾಡಿದ ಬಾಲಕನಿಗೆ ಇನ್ನೂ 18 ವರ್ಷ ಆಗಿಲ್ಲದ ಕಾರಣ, ಬಾಲ ನ್ಯಾಯ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ. ನಾವು ವೈಜ್ಞಾನಿಕ ಪರೀಕ್ಷೆಗಳು ಮತ್ತು ಸಾಕ್ಷ್ಯ ಸಂಗ್ರಹದ ಮೂಲಕ ಮುಂದುವರಿಯುತ್ತೇವೆ. ಕೊಲೆಗೆ ಬಾಲಕನೇ ಕಾರಣ. ಕಾನೂನು ಬದ್ಧವಾಗಿ, ಕೊಲೆಯ ಜವಾಬ್ದಾರಿ ಆರೈಕೆದಾರರ ಮೇಲೆ ವರ್ಗಾವಣೆಯಾಗುವುದಿಲ್ಲ' ಎಂದು ನಗರ ಪೊಲೀಸ್ ಆಯುಕ್ತ ಆರ್. ಇಳಂಗೊ ಹೇಳಿದರು.
ಕೊಲೆಯಾದ ಅಂಕಿತ್ 2023ರಿಂದ ತ್ರಿಶೂರ್ ಬಾಲಗೃಹಗದಲ್ಲಿ ಬಾಲಪರಾಧಿಯಾಗಿದ್ದನು. ಕೊಲೆ ಮಾಡಿದ 15 ವರ್ಷದ ಬಾಲಕ ಒಂದು ತಿಂಗಳ ಹಿಂದೆ ಬಾಲಗೃಹಕ್ಕೆ ಬಂದಿದ್ದ.
ಇದನ್ನೂ ಓದಿ: ವತ್ತುಮುರಣಿ ಜೋಳದ ಹೊಲದಲ್ಲಿ ಮಹಿಳೆ ಕೊಲೆ: ಇಬ್ಬರು ಆರೋಪಿಗಳ ಬಂಧನ