ದಕ್ಷಿಣ ಚಿತ್ರರಂಗದ ಬಹುಬೇಡಿಕೆ ಕಲಾವಿದರಾದ ಸಾಯಿ ಪಲ್ಲವಿ ಹಾಗೂ ನಾಗ ಚೈತನ್ಯ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ತಂಡೆಲ್'. ಇಂದು ವ್ಯಾಲೆಂಟೈನ್ ಡೇ ಹಿನ್ನೆಲೆ, ಚಿತ್ರತಂಡ ಸ್ಪೆಷಲ್ ಆ್ಯಂಡ್ ಲವೆಬಲ್ ವಿಡಿಯೋ ಶೇರ್ ಮಾಡೋ ಮುಖೇನ ಅಭಿಮಾನಿಗಳಿಗೆ ಶುಭ ಕೋರಿದೆ. ಡೈಲಾಗ್ ಪ್ರೋಮೋವೊಂದನ್ನು ಅನಾವರಣಗೊಳಿಸಲಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ನೆಟ್ಟಿಗರು ತಾರೆಯರ ಮೇಲೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ತಮ್ಮ ಸಿನಿಮಾದ ಜನಪ್ರಿಯ ಡೈಲಾಗ್ಗೆ ಲಿಪ್ ಸಿಂಕ್ ಮಾಡಿದ್ದಾರೆ. ನಾಗ ಚೈತನ್ಯ ಡೈಲಾಗ್ ಹೇಳುತ್ತಿದ್ದು, ಸಾಯಿ ಪಲ್ಲವಿ ನಾಚಿ ನೀರಾಗಿದ್ದಾರೆ. ಪ್ರೇಮಿಗಳ ದಿನದ ಹಿನ್ನೆಲೆ, ಅಭಿಮಾನಿಗಳಿಗೆ ವಿಶ್ ಮಾಡುವುದರ ಜೊತೆಗೆ ಈ ಹಿಂದೆ ಬಿಡುಗಡೆ ಆದ ತಂಡೆಲ್ ಗ್ಲಿಂಪ್ಸ್ ಸ್ವೀಕರಿಸಿದ ಮೆಚ್ಚುಗೆಗೂ ಕೃತಜ್ಞತೆ ವ್ಯಕ್ತಪಡಿಸಿದರು.
ಚೈ ಎಂದು ಖ್ಯಾತರಾದ ನಾಗ ಚೈತನ್ಯ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡು, ''ತಂಡೆಲ್ ಗ್ಲಿಂಪ್ಸ್ಗೆ ಸಿಕ್ಕ ಪ್ರತಿಕ್ರಿಯೆಯಿಂದ ಸಖತ್ ಥ್ರಿಲ್ ಆಗಿದ್ದೇನೆ. ನಿಮ್ಮಲ್ಲಿ ಅನೇಕರು ಆ ಗ್ಲಿಂಪ್ಸ್ ಮೂಲಕ ನಿಮ್ಮ ಸ್ವಂತ ರೀಲ್‌ಗಳನ್ನು ಮಾಡುತ್ತಿರುವುದು ನನ್ನ ಮನ ಮುಟ್ಟಿದೆ. ಸಾಯಿ ಪಲ್ಲವಿ ಮತ್ತು ನಾನು ಕೂಡ ಅದನ್ನೇ ಮಾಡಲು ನಿರ್ಧರಿಸಿದೆವು. ಪ್ರೀತಿಯನ್ನು ಪ್ರತಿದಿನ ಆಚರಿಸಿ. ತಂಡೆಲ್ ತಂಡದ ಪರವಾಗಿ ನಿಮಗೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.