ತೆಲುಗು ಚಿತ್ರರಂಗದ ಸೂಪರ್ ಹಿಟ್ ಸಿನಿಮಾ 'ಮಗಧೀರ'ದಲ್ಲಿ ರಣದೇವ್ ಬಿಲ್ಲಾ ಎನ್ನುವ ಖಳನಾಯಕನ ಪಾತ್ರದಲ್ಲಿ ಗಮನ ಸೆಳೆದಿದ್ದ ನಟ ದೇವ್ ಗಿಲ್, ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 'ಅಹೋ ವಿಕ್ರಮಾರ್ಕ' ಸಿನಿಮಾದಲ್ಲಿ ದೇವ್ ಗಿಲ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಆಗಸ್ಟ್ ಪ್ರೇಕ್ಷಕರಿಗೆ ಸಿನಿಸುಗ್ಗಿ ಎಂದೇ ಹೇಳಬಹುದು. ಸ್ಟಾರ್ ನಟರಿಂದ ಹಿಡಿದು ಹೊಸಬರ ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆ ಆಗಲಿವೆ. 'ಅಹೋ ವಿಕ್ರಮಾರ್ಕ' ಕೂಡಾ ಆಗಸ್ಟ್ 30ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ.
ಕನ್ನಡದಲ್ಲಿಯೂ ರಿಲೀಸ್ ಆಗಲಿರುವ 'ಅಹೋ ವಿಕ್ರಮಾರ್ಕ' ಪ್ರಚಾರಕ್ಕಾಗಿ ದೇವ್ ಗಿಲ್ ಬೆಂಗಳೂರಿಗೆ ಆಗಮಿಸಿದ್ದರು. ಊರ್ವಶಿ ಚಿತ್ರಮಂದಿರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು 'ಅರ್ಚನಾ' ಸಾಂಗ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ಕೊಟ್ಟರು. ಸಿನಿಮಾ ಯಶಸ್ಸು ಕಾಣಲಿ ಎಂದು ತಂಡಕ್ಕೆ ಶುಭ ಹಾರೈಸಿದರು.
ಸಾಂಗ್ ರಿಲೀಸ್ ಬಳಿಕ ಮಾತನಾಡಿದ ಸಂಗೀತ ನಿರ್ದೇಶಕ ರವಿ ಬಸ್ರೂರ್, ದೇವ್ ಗಿಲ್ ಅವರನ್ನು ಸ್ಕ್ರೀನ್ನಲ್ಲಿ ನೋಡಿದಾಗ ಭಯವಾಗುತ್ತಿತ್ತು. ನಮ್ಮ ಮನೆಗೆ ಬಂದಾಗ ಅವರ ಸರಳತೆ ಹಾಗೂ ವಿನಯತೆ ನನಗಿಷ್ಟವಾಯ್ತು. ಒಂದು ಸಿನಿಮಾದಿಂದ ಮೂರರಿಂದ ನಾಲ್ಕುವರೆ ಸಾವಿರ ಕುಟುಂಬಗಳು ಬದುಕುತ್ತವೆ. ನಾವು ವಿಭಿನ್ನ ರೀತಿಯಲ್ಲಿ ಟ್ರೈ ಮಾಡಿದ್ದೇವೆ. ನಿಮ್ಮ ಸಪೋರ್ಟ್ ಬೇಕು ಎಂದು ಕೇಳಿಕೊಂಡರು.