ಮಂಗಳವಾರದಂದು ಸಿದ್ದಗಂಗಾ ಮಠದಲ್ಲಿ ಪುನೀತ್ ರಾಜ್‌ಕುಮಾರ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಮಾಡಲಾಯಿತು. ಸಮಾರಂಭಕ್ಕೆ ಸಿದ್ದಗಂಗಾ ಮಠದ ಸ್ವಾಮೀಜಿ, ಪುನೀತ್ ರಾಜ್‌ಕುಮಾರ್ ಪತ್ನಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದರು.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಪೋಸ್ಟ್: ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡ ನಿರ್ಮಾಪಕಿ, ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆಯಲ್ಲಿ ಡಾ.ಪುನೀತ್ ರಾಜ್‌ಕುಮಾರ್ ಚಾರಿಟಬಲ್ ಟ್ರಸ್ಟ್ (ರಿ) ಅನ್ನು ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಹಿರಿಯ ಚಿತ್ರ ನಟ ದೊಡ್ಡಣ್ಣನವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಶಂಕರ ಕಣ್ಣಿನ ಆಸ್ಪತ್ರೆ, ಟೈಟಾನ್ ಕಂಪನಿ, ಡಿ.ಎ.ಮಂಜು ಚಾರಿಟಬಲ್ ಟ್ರಸ್ಟ್ (ರಿ), ಮೈಕ್ರೋ ಲ್ಯಾಬ್ಸ್ ಪ್ರೈ.ಲಿ., ಕೆಮಿಸ್ಟ್ ಅಂಡ್ ಡ್ರಗ್ಗಿಷ್ಟ್ ಫೌಂಡೇಷನ್ ಟ್ರಸ್ಟ್ (ರಿ) ಸಹಯೋಗದೊಂದಿಗೆ ಶ್ರೀ ಮಠದ ಮಕ್ಕಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಉಚಿತ ಕನ್ನಡಕಗಳ ವಿತರಣೆ ನೆರವೇರಿತು. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ನಾವು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಸ್ಯಾಂಡಲ್ವುಡ್ ಪವರ್ ಸ್ಟಾರ್ ನಮ್ಮನ್ನಗಲಿ ದಿನಗಳುರುಳಿವೆ. ಅವರ ನೆನಪು ಅಭಿಮಾನಿಗಳೆದೆಯಲ್ಲಿ ಜೀವಂತ. ಸಿನಿಮಾ ಮಾತ್ರವಲ್ಲದೇ ಸಮಾಜ ಸೇವೆಯಿಂದ ಹೆಚ್ಚು ಜನಪ್ರಿಯರಾದ ಅಪ್ಪು ಅವರ ಆದರ್ಶಗಳನ್ನು ಅವರ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಪತ್ನಿ ಅಶ್ವಿನಿ ಅವರೂ ಕೂಡಾ ಪುನೀತ್ ಹಾದಿಯಲ್ಲೇ ಸಾಗುತ್ತಿದ್ದಾರೆ. ಒಳ್ಳೆ ಕಂಟೆಂಟ್ಗಳನ್ನಾಧರಿಸಿದ ಸಿನಿಮಾಗಳ ನಿರ್ಮಾಣ ಮತ್ತು ಸಮಾಜ ಸೇವೆಯನ್ನು ಅಪ್ಪು ಅವರ ಹೆಸರಿನಲ್ಲಿ ಅಶ್ವಿನಿ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಶಾಲೆ ಪ್ರಾರಂಭಿಸುತ್ತಿರುವ ಅಶ್ವಿನಿ: 20 ವರ್ಷಗಳ ಬಳಿಕ ನನಸಾಯ್ತು ಅಪ್ಪು ಕನಸು
ಸಿದ್ದಗಂಗಾ ಮಠದ ಮಕ್ಕಳು ಹಾಗೂ ಸಿಬ್ಬಂದಿಗೆ ಉಚಿತ ನೇತ್ರ ತಪಾಸಣೆ ನಡೆಸಲಾಗಿದೆ. ಜೊತೆಗೆ, ಕನ್ನಡಕ ವಿತರಿಸಲಾಗಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಕೈಯಾರೆ ಕೆಲ ಮಕ್ಕಳಿಗೆ ಕನ್ನಡಕ ವಿತರಿಸಿದ್ರು.
ಇದನ್ನೂ ಓದಿ: ಖ್ಯಾತ ನಟ ಮೋಹನ್ ಲಾಲ್ ಜೊತೆ ರಾಗಿಣಿ ದ್ವಿವೇದಿ ಭರ್ಜರಿ ಭೋಜನ : ಶೀಘ್ರದಲ್ಲೇ ಬಿಗ್ ಅನೌನ್ಸ್ಮೆಂಟ್
ಅಪ್ಪು ನಿಧನದ ಬಳಿಕ ಅಶ್ವಿನಿ ಅವರು ಪುನೀತ್ ಅವರ ಎಲ್ಲಾ ಕೆಲಸಗಳನ್ನು ಮುಂದುವರಿಸಿದ್ದಾರೆ. ಅಪ್ಪು ಅವರ ಪಿಆರ್ಕೆ ಪ್ರೊಡಕ್ಷನ್ಸ್ ಮೂಲಕ ಕಂಟೆಂಟ್ ಆಧಾರಿತ ಚಿತ್ರಗಳು ನಿರ್ಮಾಣಗೊಳ್ಳುತ್ತಿದ್ದು, ಅಪ್ಪು ಗುಣಗಳನ್ನು ಅಶ್ವಿನಿ ಮೂಲಕ ಅಭಿಮಾನಿಗಳು ಕಾಣುತ್ತಿದ್ದಾರೆ. ಇದೀಗ, ಪುನೀತ್ ರಾಜ್‌ಕುಮಾರ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಮಾಡಲಾಗಿದ್ದು, ಸಮಾಜ ಸೇವೆ ಮುಂದುವರಿಯುವ ಸುಳಿವು ಸಿಕ್ಕಿದೆ.