ಸುಬ್ರಹ್ಮಣ್ಯ/ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ರೈಲು ಪ್ರಯಾಣಿಕರ 18 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಮಂಗಳೂರಿನಿಂದ ಪುತ್ತೂರಿನತನಕ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ (ನೆಟ್ಟಣ) ನಿಲ್ದಾಣದವರೆಗೆ ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಈ ಕುರಿತು ಚೆನ್ನೈ ಪ್ರಧಾನ ಕಚೇರಿ ಹೊಂದಿರುವ ದಕ್ಷಿಣ ರೈಲ್ವೆ ಮತ್ತು ಹುಬ್ಬಳ್ಳಿ ಪ್ರಧಾನ ಕಚೇರಿ ಹೊಂದಿರುವ ನೈಋತ್ಯ ರೈಲ್ವೆಯ ನಿರ್ಣಯ ಅಂಗೀಕರಿಸಿ 2024ರ ನವೆಂಬರ್ 25ರಂದು ಶಿಫಾರಸು ಪತ್ರವನ್ನು ರೈಲ್ವೆ ಮಂಡಳಿಗೆ ಕಳುಹಿಸಿತ್ತು. ಇದೀಗ ರೈಲ್ವೆ ಮಂಡಳಿಯ ಜಂಟಿ ನಿರ್ದೇಶಕ ವಿವೇಕ್ ಕುಮಾರ್ ಸಿನ್ಹಾ ಅವರು ಹೊರಡಿಸಿರುವ ಆದೇಶದಲ್ಲಿ ಈ ರೈಲನ್ನು ಸುಬ್ರಹ್ಮಣ್ಯ ರೋಡ್ ಅಥವಾ ನೆಟ್ಟಣ ರೈಲ್ವೆ ನಿಲ್ದಾಣದವರೆಗೆ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ.
ಹೊಸ ವೇಳಾಪಟ್ಟಿ:
- ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು (ಗಾ.ನಂ 56625) ಮುಂಜಾನೆ 4 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಕಬಕ-ಪುತ್ತೂರಿಗೆ ಮುಂಜಾನೆ 5:18ಕ್ಕೆ ತಲುಪಲಿದೆ. ಅಲ್ಲಿ 2 ನಿಮಿಷ ನಿಲುಗಡೆಯಾಗಿ ಬೆಳಗ್ಗೆ 6:30ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣ ತಲುಪಲಿದೆ.
- ಸುಬ್ರಹ್ಮಣ್ಯ-ಮಂಗಳೂರು (ಗಾ.ನಂ 56626) ಪ್ಯಾಸೆಂಜರ್ ರೈಲು ಬೆಳಗ್ಗೆ 7ಕ್ಕೆ ಸುಬ್ರಹ್ಮಣ್ಯದಿಂದ ಹೊರಟು 7:48ಕ್ಕೆ ಕಬಕ-ಪುತ್ತೂರು ತಲುಪಿ, ಅಲ್ಲಿ 2 ನಿಮಿಷ ನಿಲುಗಡೆಯಾಗಿ 9:30ಕ್ಕೆ ಮಂಗಳೂರು ಸೆಂಟ್ರಲ್ಗೆ ತಲುಪಲಿದೆ.
- ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು(56627) ಮತ್ತೆ ಸಂಜೆ 5:45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಸಂಜೆ 7:03ಕ್ಕೆ ಪುತ್ತೂರಿಗೆ ತಲುಪಲಿದೆ. ಬಳಿಕ ಎರಡು ನಿಮಿಷ ನಿಲುಗಡೆಯಾಗಿ ರಾತ್ರಿ 8:10ಕ್ಕೆ ಸುಬ್ರಹ್ಮಣ್ಯ ರಸ್ತೆಗೆ ತಲುಪಲಿದೆ ಸುಬ್ರಹ್ಮಣ್ಯ ರಸ್ತೆ-ಮಂಗಳೂರು ಪ್ಯಾಸೆಂಜರ್ ರೈಲು(56628) ರಾತ್ರಿ 8:40ಕ್ಕೆ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಹೊರಟು ರಾತ್ರಿ 9:28ಕ್ಕೆ ಕಬಕ-ಪುತ್ತೂರಿಗೆ ತಲುಪಿ ಅಲ್ಲಿ 2 ನಿಲುಗಡೆಯಾಗಿ ರಾತ್ರಿ 11:10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಅನುಕೂಲವೇನು?
- ಈ ಬದಲಾವಣೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಾರ್ಥಿಗಳಿಗೆ ಅನುಕೂಲ.
- ಕಡಬ ತಾಲೂಕು ಕೇಂದ್ರದ ಕೋಡಿಂಬಾಳ ನಿಲ್ದಾಣ, ನೆಟ್ಟಣ, ಎಡಮಂಗಲ, ಕಾಣಿಯೂರು, ಸರ್ವೆ ಮುಂತಾದ ಭಾಗದಿಂದ ನೂರಾರು ಮಂದಿ ಅಗತ್ಯತೆಗಳಿಗಾಗಿ ಮಂಗಳೂರಿಗೆ ಕಡಿಮೆ ಪ್ರಯಾಣ ದರದಲ್ಲಿ ಹೋಗಿ ಬರಲು ಸಾಧ್ಯವಾಗುತ್ತದೆ.
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸುಬ್ರಹ್ಮಣ್ಯವರೆಗೆ ರೈಲು ವಿಸ್ತರಣೆಗೆ ಮಂಜೂರಾತಿ ನೀಡುವಂತೆ ನಿರಂತರ ಪ್ರಯತ್ನ ಮಾಡಿದ್ದರು. ಇದೀಗ ಇಲಾಖೆ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಿಸಿರುವುದಕ್ಕೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಖ್ಯಾತೆ ಸಚಿವ ವಿ.ಸೋಮಣ್ಣ ಹಾಗೂ ರೈಲ್ವೆ ಮಂಡಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಪರವಾಗಿ ಸಂಸದರು ಹಾಗೂ ರೈಲ್ವೆ ಬಳಕೆದಾರರ ವೇದಿಕೆ, ಹೋರಾಟ ಸಮಿತಿಯವರು ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಮಧ್ಯ ರೈಲ್ವೆಯಿಂದ ಕುಂಭಮೇಳಕ್ಕೆ 60 ಸಾವಿರ ಭಕ್ತರು: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!