''ಫಾರ್ ರಿಜಿಸ್ಟ್ರೇಷನ್'' ಸ್ಯಾಂಡಲ್ವುಡ್ನಲ್ಲಿ ಕೆಲವು ವಿಚಾರಗಳಿಂದ ಸದ್ದು ಮಾಡುತ್ತಿರುವ ಹೊಸ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಟಿಸಿರುವ ಬಹುನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರತಂಡ ಶೂಟಿಂಗ್ ಅನುಭವ ಹಂಚಿಕೊಂಡಿದೆ.
ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ''ನಮಗಿದು ಚಾಲೆಂಜಿಂಗ್ ಟೈಮ್. ತಡವಾಗಿದೆ, ಒಪ್ಪಿಕೊಳ್ಳುತ್ತೇನೆ. ನಾನೇ ಅದರ ಹೊಣೆ ತೆಗೆದುಕೊಳ್ಳುತ್ತೇನೆ. ವಿವಿಧ ಕಾರಣಗಳಿಂದ ಬಿಡುಗಡೆ ತಡವಾಯ್ತು. ಒಂದೊಳ್ಳೆ ಔಟ್‌ಪುಟ್ ಕೊಡಲು ಸಮಯ ಹಿಡಿಯಿತು. ಕ್ವಾಲಿಟಿ ಹಾಗೂ ಟೆಕ್ನಿಕಲ್ ದೃಷ್ಟಿಯಿಂದ ಸಮಯ ಬೇಕಾಯಿತು. ಮಿಲನಾ ಹಾಗೂ ಪೃಥ್ವಿ ಪಾತ್ರಕ್ಕೆ ಬಹಳ ಸಪೋರ್ಟ್ ಮಾಡಿದ್ದಾರೆ. ಫಾರ್ ರಿಜಿಸ್ಟ್ರೇಷನ್ ಒಂದು ಕಂಪ್ಲೀಟ್ ಕಾಮಿಡಿ ಎಂಟರ್ಟೈನರ್. ಪ್ಯಾಕೇಜ್ ಆಫ್ ಎಮೋಷನ್ ಹಾಗೂ ಡ್ರಾಮಾ ಚಿತ್ರದಲ್ಲಿದೆ" ಎಂದು ತಿಳಿಸಿದರು.
ನಟ ಪೃಥ್ವಿ ಅಂಬಾರ್ ಮಾತನಾಡಿ, "ದಿಯಾ ಸಿನಿಮಾಗೂ ಮೊದಲು ಸಹಿ ಹಾಕಿದ ಚಿತ್ರವಿದು. ನನ್ನ ತುಳು ಸಿನಿಮಾ ರಿಲೀಸ್ ಆದಾಗ ನವೀನ್ ಸರ್ ಮಂಗಳೂರಿನಲ್ಲಿದ್ದರು. ಅಲ್ಲಿ ಸಿನಿಮಾ ನೋಡಿ ಮೆಚ್ಚಿದ ಅವರು ನನಗೆ ಕಾಲ್ ಮಾಡಿದರು. ಹಾಗೇ ನನ್ನ ಜರ್ನಿ 'ಫಾರ್ ರಿಜಿಸ್ಟರ್' ಜೊತೆ ಮುಂದುವರೆಯಿತು. ರಿಜಿಸ್ಟ್ರೇಷನ್ ಅನ್ನೋದು ಎಲ್ಲಾ ವಿಷಯಕ್ಕೂ ಬೇಕು. ಕಾರು, ಜಾಗಕ್ಕೆ ಮಾತ್ರವಲ್ಲ. ಸಂಬಂಧಗಳು ಸರಿಯಾದ ರೀತಿ ರಿಜಿಸ್ಟರ್ ಆಗಬೇಕು ಎಂಬ ವಿಚಾರವನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಸಂಬಂಧಗಳ ಬಗ್ಗೆ, ಸಂಬಂಧಗಳು ರಿಜಿಸ್ಟರ್ ಆಗುವ ಬಗ್ಗೆ ತಿಳಿಹೇಳುವ ಹಾಸ್ಯ ಸಿನಿಮಾ" ಎಂದರು.
ನಟಿ ಮಿಲನಾ ನಾಗರಾಜ್ ಮಾತನಾಡಿ, "ನಾನು ನೋಡಿರುವ ಫ್ಯಾಷನೇಟೆಡ್ ನಿರ್ಮಾಪಕರಲ್ಲಿ ನವೀನ್ ಕೂಡ ಒಬ್ಬರು. ಇಂತಹ ನಿರ್ಮಾಪಕರು ಗೆಲ್ಲಬೇಕು. ಹೆಚ್ಚು ಸಿನಿಮಾ ಬರಬೇಕು. ನವೀನ್ ಅವರು ಪ್ರಿಪರೇಷನ್ ಮಾಡಿಕೊಂಡು ಬಂದಿದ್ದರು. ಚಿತ್ರದಲ್ಲಿ ಒಳ್ಳೆಯ ತಾರಾಬಳಗವಿದೆ. ನಾನು ಮತ್ತು ಪೃಥ್ವಿ ಇದೇ ಮೊದಲ ಬಾರಿಗೆ ಸ್ರ್ಕೀನ್ ಶೇರ್ ಮಾಡಿದ್ದೇವೆ. ಸ್ವೀಟ್ ಲವ್ ಸ್ಟೋರಿ ಫ್ಯಾಮಿಲಿ ಡ್ರಾಮಾ. ಬಹಳ ಜನರಿಗೆ ಹಿಡಿಸುವ ಸಿನಿಮಾ. ಹೊಡಿಬಡಿ ಇಲ್ಲ, ಫೈಟ್ ಇಲ್ಲ. ಮ್ಯೂಸಿಕ್ ತುಂಬಾ ಚೆನ್ನಾಗಿ ಮಾಡಿದ್ದಾರೆ" ಎಂದು ಮಾಹಿತಿ ಹಂಚಿಕೊಂಡರು.