ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. 15ನೇ ಬಾರಿ ಬಜೆಟ್ ಮಂಡಿಸಿ ಸಿಎಂ ಸಿದ್ದರಾಮಯ್ಯ ಅವರಿಂದು ದಾಖಲೆ ಬರೆದಿದ್ದಾರೆ. ಪ್ರತಿ ಬಾರಿ ಸೂಟ್ಕೇಸ್ನಲ್ಲಿ ಬಜೆಟ್ ಪ್ರತಿ ತರಲಾಗುತ್ತಿತ್ತು. ಆದರೆ ಈ ಬಾರಿ ಸರ್ಕಾರಿ ಸ್ವಾಮ್ಯದ ಲಿಡ್ಕರ್ ಸಂಸ್ಥೆಯ ಬ್ಯಾಗ್ನಲ್ಲಿ ಬಜೆಟ್ ಪ್ರತಿಗಳನ್ನು ತಂದಿದ್ದು ವಿಶೇಷವಾಗಿತ್ತು. ಲಿಡ್ಕರ್ ಸಂಸ್ಥೆಗೆ ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅವರು ಬ್ರ್ಯಾಂಡ್ ಅಂಬಾಸಿಡರ್ ಎಂಬುದು ಗಮನಾರ್ಹ ಸಂಗತಿ.
2024 ಹಾಗೂ 2025ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಕೆಲ ಸಿನಿಮಾ ಸಾಲುಗಳನ್ನು ಬಳಸಿಕೊಳ್ಳಲಾಗಿದೆ. ಬಜೆಟ್ ಭಾಷಣದ ಆರಂಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಚಿತ್ರರಂಗ ಕಂಡ ಮೇರುನಟ ದಿ. ಡಾ. ರಾಜ್ಕುಮಾರ್ ಮುಖ್ಯಭೂಮಿಕೆಯ 'ಬಂಗಾರದ ಮನುಷ್ಯ 'ಸಿನಿಮಾದ ಹಾಡಿನ ಸಾಲುಗಳನ್ನು ಹೇಳುತ್ತಾ ಬಜೆಟ್ ಮಂಡನೆ ಪ್ರಾರಂಭಿಸಿದರು.
ಬಂಗಾರದ ಮನುಷ್ಯ ಮಾತ್ರವಲ್ಲದೇ ಕಳೆದ ವರ್ಷ ಬಿಡುಗಡೆ ಆದ ಡಾಲಿ ಧನಂಜಯ್ ನಿರ್ಮಾಣದ, ಶಶಾಂಕ್ ಸೋಗಲ್ ನಿರ್ದೇಶನದ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾದ ಸಾಲುಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಅನುದಾನಗಳನ್ನು ಮಂಡಿಸುವ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಡೇರ್ ಡೆವಿಲ್ ಮುಸ್ತಫಾ ಚಿತ್ರದ ಎರಡು ಸಾಲುಗಳನ್ನು ಸದನದಲ್ಲಿ ಹೇಳಿದರು. "ಒಂದು ತೋಟದಲ್ಲಿ ನೂರು ಹೂವು ಅರಳಲಿ, ಎಲ್ಲ ಕೂಡಿ ಆಡುವಂತ ಗಾಳಿ ಬೀಸಲಿ" ಎಂಬ ಸಾಲುಗಳನ್ನ ಹೇಳುವ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಅನುದಾನವನ್ನು ಘೋಷಣೆ ಮಾಡಿದರು.