ಶಾರುಖ್ ಖಾನ್. ಭಾರತ ಮಾತ್ರವಲ್ಲ ವಿಶ್ವದ ಅತ್ಯಂತ ಜನಪ್ರಿಯ ನಟ. ದೇಶದ ಗಡಿ ದಾಟಿ ಸಾಗರೋತ್ತರ ಪ್ರದೇಶಗಳಲ್ಲೂ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ತಮ್ಮದೇ ಆದ ಸ್ಟಾರ್ ಡಮ್ ಸಂಪಾದಿಸಿರುವ ಈ ನಟನ ಬೇಡಿಕೆ ಇಂದಿಗೂ ಹಾಗೆಯೇ ಇದೆ. ಕೊಂಚ ಹೆಚ್ಚಾಗಿದೆ ಅಂದ್ರೂ ತಪ್ಪಿಲ್ಲ ನೋಡಿ. ತಮ್ಮ 58ರ ಹರೆಯದಲ್ಲೂ ಸಿನಿ ಜಗತ್ತಿನಲ್ಲಿ ಸಕ್ರಿಯರಾಗಿದ್ದು, ಯುವ ನಟರಿಗೆ ಸ್ಫೂರ್ತಿಯಾಗಿದ್ದಾರೆ.
ಹೇಗೆ ಜೋಟ್ಯಂತರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ನೋಡಬೇಕೆಂಬ ಇಚ್ಛೆ ಹೊಂದಿರುತ್ತಾರೋ, ಹಾಗೆಯೇ ಅವರೊಂದಿಗೆ ತೆರೆ ಹಂಚಿಕೊಳ್ಳಬೇಕು ಅನ್ನೋದು ಅದೆಷ್ಟೋ ಕಲಾವಿದರ ಕನಸು. ಅದರಂತೆ, ಇದೀಗ ಸಂದರ್ಶನವೊಂದರಲ್ಲಿ ಶಾರುಖ್ ಜೊತೆ ನಟಿಸಲು ಇನ್ನೂ ಅವಕಾಶ ಸಿಕ್ಕಿಲ್ಲ ಎಂದು ಜನಪ್ರಿಯ ನಟರೋರ್ವರು ಬೇಸರ ವ್ಯಕ್ತಪಡಿಸಿದ್ದಾರೆ.
2019ರ 'ಗಲ್ಲಿ ಬಾಯ್' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುವ ಮೂಲಕ ಫೇಮಸ್ ಆದವರು ವಿಜಯ್ ವರ್ಮಾ. ಇದೀಗ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅತ್ಯುತ್ತಮ ಅಭಿನಯಕ್ಕೆ ಹೆಸರುವಾಸಿಯಾದ ಇವರು ಸೌತ್ ಸಿನಿಮಾ ಇಂಡಸ್ಟ್ರಿಯ ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ ಅವರ ಗೆಳೆಯ ಕೂಡ ಹೌದು. ಇತ್ತೀಚೆಗೆ ವರ್ಮಾ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸೂಪರ್ ಸ್ಟಾರ್ ಯಾರನ್ನಾದರೂ ಭೇಟಿಯಾದಾಗ ಅವರ ಸ್ವಭಾವ ಹೇಗಿರುತ್ತದೆ ಎಂಬುದರ ಬಗ್ಗೆ ವರ್ಣಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ವಿಜಯ್, ಎಸ್ಆರ್ಕೆ ಅವರ ಪ್ರೊಡಕ್ಷನ್ನಲ್ಲಿ ಕೆಲಸ ಮಾಡಿದ ಅನುಭವ ಮತ್ತು ಅವರೊಂದಿಗಿನ ಮಾತುಕತೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸೂಪರ್ ಸ್ಟಾರ್ ನಿಮ್ಮೊಂದಿಗೆ ಇದ್ದಾಗ ಅವರು ನಿಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಗುಣಗಾನ ಮಾಡಿದರು. ಜೊತೆಗೆ, ಶಾರುಖ್ ಖಾನ್ ಜೊತೆ ನಟಿಸಲು ಅವಕಾಶ ಸಿಗದಿರುವುದಕ್ಕೆ ಬೇಸರವಾಗುತ್ತಿದೆ ಎಂದು ತಿಳಿಸಿದರು.