ಭಾರತೀಯ ಚಿತ್ರರಂಗದ ಖ್ಯಾತ ನಟಿ ದೀಪಿಕಾ ಪಡುಕೋಣೆ ಪ್ರತಿಷ್ಠಿತ ''BAFTA'' (ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್) ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ. ಫುಟ್ಬಾಲ್ ಐಕಾನ್ ಡೇವಿಡ್ ಬೆಕ್‌ಹ್ಯಾಮ್, ಪ್ರಸಿದ್ಧ ನಟ ಕೇಟ್ ಬ್ಲಾಂಚೆಟ್ ಮತ್ತು ಸಿಂಗರ್ ದುವಾ ಲಿಪಾ ಅವರಂತಹ ಗೌರವಾನ್ವಿತ ಪ್ರೆಸೆಂಟರ್ಸ್ ಶ್ರೇಣಿಗೆ 'ಫೈಟರ್' ನಟಿ ಸೇರುತ್ತಿದ್ದಾರೆ. ಇದೇ ಫೆಬ್ರವರಿ 19 ರಂದು ಬಫ್ತಾ ಅಥವಾ ಬಿಎಎಫ್ಟಿಎ ಅವಾರ್ಡ್ಸ್ ನಡೆಯಲಿದ್ದು, ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ 'ಪಠಾಣ್' ನಟಿ ಕಾಣಿಸಿಕೊಳ್ಳಲಿದ್ದಾರೆ.
ದೀಪಿಕಾ ಪಡುಕೋಣೆ ಅವಾರ್ಡ್ ಪ್ರೆಸೆಂಟರ್ ಆಗಿ ಈವೆಂಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಯಾವ ಕ್ಯಾಟಗರಿಯಲ್ಲಿ ಪ್ರೆಸೆಂಟರ್ ಆಗಿ ಕೆಲಸ ನಿರ್ವಹಿಸಲಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಬಿಎಎಫ್ಟಿಎ ಅವಾರ್ಡ್ಸ್ ಪ್ರೆಸೆಂಟರ್ ಟೀಮ್ನಲ್ಲಿ ಹಗ್ ಗ್ರಾಂಟ್, ಲಿಲಿ ಕಾಲಿನ್ಸ್ ಮತ್ತು ಇಡ್ರಿಸ್ ಎಲ್ಬಾ ಅವರಂತಹ ಖ್ಯಾತನಾಮರು ಇದ್ದಾರೆ. ತಮ್ಮದೇ ಆದ ಸಾಧನೆ ಮೂಲಕ ಗುರುತಿಸಿಕೊಂಡಿರುವ ಇವರು ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡುವ ಅದ್ಧೂರಿ ವೇದಿಕೆಯ ಮೆರುಗು ಹೆಚ್ಚಿಸಲಿದ್ದಾರೆ.
ಬಾಜಿರಾವ್ ಮಸ್ತಾನಿ ನಟಿ ಈಗಾಗಲೇ ಜಾಗತಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳೋ ಮೂಲಕ ಭಾರತೀಯ ಚಿತ್ರರಂಗದ ಖ್ಯಾತಿ ಹೆಚ್ಚಿಸಿದ್ದಾರೆ. ಬಿಎಎಫ್ಟಿಎ ಅವಾರ್ಡ್ಸ್ ಮೂಲಕ ತಮ್ಮ ಜನಪ್ರಿಯತೆ ವಿಸ್ತರಿಸಿಕೊಳ್ಳುತ್ತಿದ್ದಾರೆ. 2023ರ ವಿಶ್ವ ಪ್ರತಿಷ್ಠಿತ 'ಆಸ್ಕರ್' ವೇದಿಕೆಯಲ್ಲಿ ಪ್ರೆಸೆಂಟರ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಡಲು ಹೆಸರಾಂತ ತಾರೆ ಸಜ್ಜಾಗಿದ್ದಾರೆ.