ಕನ್ನಡ ಚಿತ್ರರಂಗದ 'ಶೋ ಮ್ಯಾನ್' ಅಂತಲೇ ಕರೆಯಿಸಿಕೊಂಡವರು ಕ್ರೇಜಿಸ್ಟಾರ್ ವಿ.ರವಿಚಂದ್ರನ್. ಇವತ್ತಿಗೂ ರವಿಚಂದ್ರನ್ ಅವರನ್ನು ಪ್ರೇಮಲೋಕದ ಪ್ರೋಫೆಸರ್ ಅಂತಾನೇ ಅಭಿಮಾನಿಗಳು ಕರೆಯುತ್ತಾರೆ. ಇದೀಗ ಕ್ರೇಜಿಸ್ಟಾರ್ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೌದು, ರವಿಚಂದ್ರನ್ ಅಭಿನಯದ ಸೂಪರ್ ಹಿಟ್ ಚಿತ್ರ 'ಪ್ರೇಮಲೋಕ' 1987ರಲ್ಲಿ ಬಿಡುಗಡೆಯಾಗಿತ್ತು. ಇದು ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್ ಚಿತ್ರಗಳಲ್ಲಿ ಒಂದು. ಈ ಸಿನಿಮಾದ ಮೇಕಿಂಗ್, ಅದ್ಧೂರಿತನ ಹಾಗೂ ಹಾಡುಗಳು ಇಂದಿಗೂ ಸಿನಿಪ್ರಿಯರನ್ನು ಸೆಳೆಯುತ್ತಿವೆ.
ಇದೀಗ ಕ್ರೇಜಿಸ್ಟಾರ್ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಅದೇನಪ್ಪಾ ಅಂದ್ರೆ, 'ಪ್ರೇಮಲೋಕ-2' ಮಾಡುವುದಾಗಿ ರವಿಚಂದ್ರನ್ ಕಳೆದ ಕೆಲವು ವರ್ಷಗಳಲ್ಲಿ ಹೇಳುತ್ತಲೇ ಇದ್ದರು. ಅದರಲ್ಲೂ 2024ರಲ್ಲಿ ಪ್ರಾರಂಭಿಸುವುದಾಗಿ ಹಿಂಟ್ ಕೊಟ್ಟಿದ್ದರು. ಆದರೆ, ಯಾವಾಗ, ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬಿತ್ಯಾದಿ ಯಾವುದೇ ವಿಚಾರವನ್ನು ಅವರು ಬಹಿರಂಗಗೊಳಿಸಿರಲಿಲ್ಲ. ಈಗ ಮೊದಲ ಬಾರಿಗೆ ಚಿತ್ರದ ಕುರಿತು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ರವಿಚಂದ್ರನ್, ಪ್ರೇಮಲೋಕ 2 ಚಿತ್ರದ ಕುರಿತು ಒಂದಷ್ಟು ಅಪ್‍ಡೇಟ್ಸ್ ಕೊಟ್ಟರು. ಪ್ರಮುಖವಾಗಿ, ಮೇ 30ರಂದು ತಮ್ಮ ಹುಟ್ಟುಹಬ್ಬದ ದಿನ ಚಿತ್ರವನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಚಿತ್ರದಲ್ಲಿ ಅವರ ದೊಡ್ಡ ಮಗ ಮನೋರಂಜನ್ ನಾಯಕನಾಗಿ ನಟಿಸಿದರೆ, ಚಿಕ್ಕ ಮಗ ವಿಕ್ರಮ್ ಒಂದು ಚಿಕ್ಕ ಪಾತ್ರ ಮಾಡುತ್ತಾರಂತೆ. ಮಿಕ್ಕಂತೆ, ರವಿಚಂದ್ರನ್ ಅವರು ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.