ಬೆಂಗಳೂರು: ಕನ್ನಡದ ಜನಪ್ರಿಯ ನಟ - ನಿರ್ದೇಶಕ ರಕ್ಷಿತ್ ಶೆಟ್ಟಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮಾಲೀಕರ ಅನುಮತಿ ಇಲ್ಲದೇ ಹಾಡುಗಳ ಬಳಕೆ ಮಾಡಿರುವ ಆರೋಪದಡಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಇದೇ ಸಾಲಿನ ಜನವರಿ 26ರಂದು ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಬಿಡುಗಡೆ ಆಗಿ ಯಶ ಕಂಡಿತ್ತು. ಸದ್ಯ ಓಟಿಟಿ ವೇದಿಕೆಯಲ್ಲಿ ಸಿನಿಮಾ ಲಭ್ಯವಿದೆ. 'ನ್ಯಾಯ ಎಲ್ಲಿದೆ' ಟೈಟಲ್ ಸಾಂಗ್ ಹಾಗೂ 'ಒಮ್ಮೆ ನಿನ್ನನ್ನು ಕಣ್ತುಂಬ ನೋಡುವಾಸೆ' ಹಾಡಗಳನ್ನು ಕದ್ದಿರುವ ಆರೋಪ ಈ ಚಿತ್ರದ ಮೇಲಿದೆ. ಹಾಗಾಗಿ, ನಟ ರಕ್ಷಿತ್ ಶೆಟ್ಟಿ ಮತ್ತು ಅವರ ಒಡೆತನದ ಪರಂವಃ ಸ್ಟುಡಿಯೋ ಮೇಲೆ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಹಾಗಾಗಿ, ಯಶವಂತಪುರ ಪೊಲೀಸ್ ಠಾಣೆಗೆ ರಕ್ಷಿತ್ ಶೆಟ್ಟಿ ಆಗಮಿಸಿದ್ದಾರೆ.
ಏನಿದು ದೂರು:ಒಟಿಟಿಯಲ್ಲಿ ಚಿತ್ರ ವೀಕ್ಷಿಸುವಾಗ ಈ ವಿಚಾರ ಗಮನಕ್ಕೆ ಬಂದಿದ್ದು, ಕಾಪಿರೈಟ್ಸ್ ಮಾಲೀಕತ್ವ ಪಡೆದಿದ್ದವರು ದೂರು ದಾಖಲಿಸಿದ್ದಾರೆ. ಈ ಹಿಂದೆ ನವೀನ್ ಕುಮಾರ್ ಎಂಬುವವರ ಜೊತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು. ನವೀನ್ ಕುಮಾರ್ ಹಾಡುಗಳ ಕಾಪಿರೈಟ್ ಪಡೆದು ಮಾರಾಟ ಮಾಡುತ್ತಿದ್ದ ಬ್ಯುಸಿನೆಸ್ ಮ್ಯಾನ್. ಇವರ ಜೊತೆ ಹಾಡಿಗೆ ಸಂಬಂಧಿಸಿದಂತೆ ಚರ್ಚೆ ಆಗಿತ್ತು. ಆದರೆ ನಾನಾ ಕಾರಣಕ್ಕೆ ಈ ಡೀಲ್ ಮುರಿದು ಬಿದ್ದಿತ್ತು. ಆದರೂ ಆ ಹಾಡನ್ನು ಮಾಲೀಕರ ಅನುಮತಿ ಇಲ್ಲದೇ ಬಳಕೆ ಮಾಡಲಾಗಿದೆ. ಚಿತ್ರದಲ್ಲಿ ಎರಡೂ ಹಾಡುಗಳನ್ನು ಬಳಕೆ ಮಾಡಿದ್ದಾರೆ ಎಂದು ನವೀನ್ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.