ಮೈಸೂರು: ''ಮುಡಾ ಹಾಗೂ ವಾಲ್ಮೀಕಿ ಹಗರಣಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿದ್ದು, ತನಿಖೆ ನಡೆಯುತ್ತಿದೆ. ಈ ಸಮಯದಲ್ಲಿ ಮೈಸೂರಿನ ರಸ್ತೆಗೆ ಅವರ ಹೆಸರನ್ನು ಇಡಲು ಮುಂದಾಗಿರುವುದು ಎಷ್ಟು ಸೂಕ್ತ ಎಂದು ಕಾಂಗ್ರೆಸ್ನವರೇ ಪ್ರಶ್ನೆ ಮಾಡಿಕೊಳ್ಳಬೇಕು'' ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಅವರು ಇಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಅಸಾದ್ ಉರ್ ರಹಮಾನ್ ಶರೀಫ್ ಭೇಟಿ ಮಾಡಿ ಕೆಆರ್ಎಸ್ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂಬ ಹೆಸರು ಹಿಂದಿನಿಂದಲೂ ಇದೆ ಎಂಬುದಕ್ಕೆ ದಾಖಲೆಗಳೊಂದಿಗೆ ಮನವಿ ಪತ್ರ ಸಲ್ಲಿಸಿ ಪರಿಶೀಲನೆ ನಡೆಸಬೇಕು ಎಂದು ಕೋರಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಒಡೆಯರ್, ''ಕೆಆರ್ಎಸ್ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂಬ ಹೆಸರಿರುವ ಬಗ್ಗೆ ಯಾವುದೇ ದಾಖಲಾತಿಗಳು ಪಾಲಿಕೆಯಲ್ಲಿ ಇಲ್ಲ ಎಂದು ಆಯುಕ್ತರು ಹೇಳಿದ್ದರು. ಇದಕ್ಕೆ ನಾವೇ ಆ ರಸ್ತೆಗೆ ಹಿಂದಿನಿಂದಲೂ ಪ್ರಿನ್ಸ್ ರಸ್ತೆ ಇತ್ತು ಎಂಬ ಬಗ್ಗೆ ದಾಖಲೆಗಳನ್ನು ಸಂಗ್ರಹ ಮಾಡಿ ಕೊಟ್ಟಿದ್ದೇವೆ. ಈ ಬಗ್ಗೆ ಆಯುಕ್ತರು ಪುನರ್ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ಆ ಭಾಗದ ಆಧಾರ್ ಕಾರ್ಡ್, ರೈಲ್ವೆ ಮ್ಯೂಸಿಯಂ, ಎಲ್ಲ ಕಡೆ ಪ್ರಿನ್ಸಸ್ ರಸ್ತೆ ಅಂತ ಇದೆಯೆಂದು ದಾಖಲೆಗಳಿವೆ. ಅದನ್ನು ನೀಡಿದ್ದೇವೆ'' ಒಡೆಯರ್ ಎಂದು ಹೇಳಿದರು.
ಸಿದ್ದರಾಮಯ್ಯ ಹೆಸರನ್ನು ಆ ರಸ್ತೆಗೆ ಇಡುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದರು, ''ಎಲ್ಲ ಮೂಲ ದಾಖಲಾತಿಗಳಲ್ಲೂ ಪ್ರಿನ್ಸ್ ರಸ್ತೆ ಅಂತ ಇದೆ. ಅದು ಪ್ರಿನ್ಸಸ್ ರಸ್ತೆಯಾಗಿಯೇ ಇರಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಅನಿವಾರ್ಯ'' ಎಂದು ತಿಳಿಸಿದರು.
ಇದನ್ನೂ ಓದಿ: ಬಸ್ ಪ್ರಯಾಣ ದರ ಹೆಚ್ಚಳ : 'ಎಲ್ಲಾ ಏರಿಕೆ ಮಾಡಿದ್ರೆ ಇಳಿಕೆ ಯಾವಾಗ?' ದಾವಣಗೆರೆ ಜನರ ಆಕ್ರೋಶ
ಯದುವೀರ್ ಒರಿಜಿನಲ್ ರಾಜನಲ್ಲ ಎಂಬ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದರು, ''ವೈಯಕ್ತಿಕ ಟೀಕೆಗಳಿಗೆ ಉತ್ತರ ನೀಡುವುದಿಲ್ಲ. ನಾನು ಜನರಿಂದ ಆಯ್ಕೆಯಾಗಿದ್ದೇನೆ. ಜನರ ಕೆಲಸ ಮಾಡುತ್ತೇನೆ'' ಎಂದು ನಯವಾಗಿ ಹೇಳಿದರು.
''ರಾಜ್ಯ ಸರ್ಕಾರವು ಏಕಾಏಕಿ ಬಸ್ ದರ ಏರಿಕೆ ಮಾಡಿರುವುದು ಸರಿಯಲ್ಲ. ಇವೆಲ್ಲ ಗ್ಯಾರಂಟಿ ಎಫೆಕ್ಟ್ ಆಗಿದೆ. ಅದನ್ನು ಈ ಹಿಂದೆಯೇ ಹೇಳಿದ್ದೇವೆ'' ಎಂದು ಒಡೆಯರ್ ಅವರು ಉದಾಹರಣೆ ಸಹಿತ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: 'ಯದುವೀರ್ ಒರಿಜಿನಲ್ ರಾಜವಂಶಸ್ಥರಲ್ಲ, ಮೈಸೂರು ಅರಮನೆಗೆ ದತ್ತು ಪುತ್ರ' - M LAKSHMAN