ಬೆಂಗಳೂರು : ಜನಪ್ರಿಯ ಮೃದಂಗ ವಾದಕ ಬಾಲಸುಬ್ರಹ್ಮಣ್ಯಂ (ಬಾಲಿ) ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಬಾಲಿ ಅವರಿಗೆ ಎಂಬತ್ತು ವರ್ಷ ವಯಸ್ಸಾಗಿತ್ತು. ಬಾಲಿ ಅವರ ನಿಧನಕ್ಕೆ ಕೆ.ಎಫ್.ಎಂ.ಎ(ಕರ್ನಾಟಕ ಫಿಲಂ ಮ್ಯುಸಿಷಿಯನ್ ಅಸೋಸಿಯೇಷನ್) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಬಾಲಿ ಅವರು ನನ್ನಂತಹ ನೂರಾರು ಕಲಾವಿದರನ್ನು ಸಾಕಿ ಬೆಳಸಿದವರು. ಕಲೆಯನ್ನೇ ಉಸಿರಾಗಿ ಇಟ್ಟುಕೊಂಡಿದ್ದವರು. ಅವರ ಸಾವು ನನಗೆ ತುಂಬಾ ದುಃಖ ತಂದಿದೆ. ದೇವರು ಅವರಿಗೆ ಸದ್ಗತಿ ನೀಡಲಿ ಎಂದು ಕೆ.ಎಫ್.ಎಂ.ಎ ಅಧ್ಯಕ್ಷರಾದ ಸಾಧುಕೋಕಿಲ ತಿಳಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಮೃದಂಗ ಕಲಿಕೆ ಆರಂಭಿಸಿದ್ದ ಬಾಲಿ ಅವರು ಡೋಲಕ್, ಮೃದಗಂ, ತಬಲಾ ವಾದ್ಯಗಳನ್ನು ನುಡಿಸುವಲ್ಲೂ ಪರಿಣಿತರಾಗಿದ್ದರು. ಡ್ರಮ್ಸ್, ಬ್ಯಾಂಗೋ, ಕಾಂಗೋಸ್ಗಳಲ್ಲಿ ಕೂಡ ಅವರಿಗೆ ಅಸಾಧಾರಣ ಪರಿಣತಿ ಇತ್ತು. ಸುಗಮ ಸಂಗೀತದ ಹಿರಿಯ ಕಲಾವಿದರಾದ ಬಾಳಪ್ಪ ಹುಕ್ಕೇರಿ, ಪಿ. ಕಾಳಿಂಗ ರಾವ್, ಮೈಸೂರು ಅನಂತ ಸ್ವಾಮಿ, ಸಿ.ಅಶ್ವತ್ಥ್ ಮೊದಲಾದವರ ಸಂಯೋಜನೆಯ ವಾದ್ಯಗೋಷ್ಠಿಗಳನ್ನು ಅವರು ನಿರ್ವಹಿಸಿದ್ದರು. ಕನ್ನಡದ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ‘ನಿತ್ಯೋತ್ಸವ’ದಿಂದಲೂ ಅವರು ಸಕ್ರಿಯರಾಗಿದ್ದರು.
ಜಿ. ಕೆ ವೆಂಕಟೇಶ್, ವಿಜಯಭಾಸ್ಕರ್, ಎಂ. ರಂಗರಾವ್, ಡಾ. ರಾಜೀವ ತಾರಾನಾಥ್, ಅಶ್ವತ್ಥ್-ವೈದಿಯವರು ಸಂಯೋಜಿಸಿದ್ದ ಚಿತ್ರಗೀತೆಗಳಿಗೆ ಬಾಲಿ ಅವರು ಕೆಲಸ ಮಾಡಿದ್ದರು. ಶಂಕರ್ ನಾಗ್ ಅವರ ಸಂಕೇತ್ ಸ್ಟುಡಿಯೋ ನಿರ್ಮಾಣದಲ್ಲೂ ಬಾಲಿ ಅವರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದರು.
ಹಿನ್ನೆಲೆ ಸಂಗೀತದ ಬಗ್ಗೆ ಆಡಿಯೋ-ವಿಡಿಯೋ-ಓದುವ ಹೀಗೆ ಮೂರು ಆಯಾಮದ ಪುಸ್ತಕವನ್ನು ಬರೆದಿದ್ದ ಬಾಲಿ ಅವರು ತಮ್ಮ ‘ರಮ್ಯ ಕಲ್ಚರಲ್ ಅಕಾಡಮಿ’ಯ ಮೂಲಕ ನೂರಾರು ಹೊಸ ಕಲಾವಿದರನ್ನು ರೂಪಿಸಿದ್ದರು. ಜೀ ಟಿವಿಯ ಜನಪ್ರಿಯ ಕಾರ್ಯಕ್ರಮ ‘ಸರಿಗಮಪ’ದ ತೀರ್ಪುಗಾರರ ಮಂಡಳಿಯಲ್ಲೂ ಬಾಲಿ ಅವರಿದ್ದರು.
ಇದನ್ನೂ ಓದಿ : ಭಾರತದ ಪ್ರಸಿದ್ಧ ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್ ವಿಧಿವಶ - SHYAM BENEGAL PASSES AWAY