ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮುಖ್ಯಭೂಮಿಕೆಯ 'ಪುಷ್ಪ: ದಿ ರೈಸ್' ಚಿತ್ರಮಂದಿರಗಳಲ್ಲಿ ಅಬ್ಬರಿಸಿ ಮೂರು ವರ್ಷಗಳಾಗಿವೆ. 2021ರ ಡಿಸೆಂಬರ್ 17ರಂದು ತೆರೆಕಂಡ ಚಿತ್ರದ ಮುಂದಿನ ಭಾಗ ಈ ಸಾಲಿನ ಡಿಸೆಂಬರ್ನಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
ಇದರೊಂದಿಗೆ ಐಕಾನ್ ಸ್ಟಾರ್ನ ಪ್ಯಾನ್-ಇಂಡಿಯನ್ ಸೂಪರ್‌ಸ್ಟಾರ್ ಸ್ಥಾನಮಾನವನ್ನು ಭದ್ರಪಡಿಸಿದೆ. 'ಪುಷ್ಪ 2: ದಿ ರೂಲ್' ಚಿತ್ರದ ಅಭೂತಪೂರ್ವ ಯಶಸ್ಸು ಚಿತ್ರತಂಡ ಸೇರಿದಂತೆ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿರುವ ಈ ಚಿತ್ರ ಸ್ಕ್ರೀನ್ಕೌಂಟ್ ಮತ್ತು ಬಾಕ್ಸ್ಆಫೀಸ್ ಪರ್ಫಾಮೆನ್ಸ್ ಎರಡರಲ್ಲೂ ವರ್ಷದ ಅತೀ ದೊಡ್ಡ ಭಾರತೀಯ ಚಿತ್ರವಾಗಿ ಹೊರಹೊಮ್ಮಿತು.
ದೇಶೀಯ ಮಾರುಕಟ್ಟೆಯ ಗಳಿಕೆ: ಮೊದಲ ಭಾಗದ ಅದ್ಭುತ ಯಶಸ್ಸಿನ ನಂತರ, ಪುಷ್ಪ 2 ಸುತ್ತಲಿನ ನಿರೀಕ್ಷೆ ಬಹಳ ದೊಡ್ಡ ಮಟ್ಟದಲ್ಲಿತ್ತು. ಅಲ್ಲು ಅರ್ಜುನ್ ತಮ್ಮ ಇತರೆ ಪ್ರಾಜೆಕ್ಟ್‌ಗಳಿಂದ ಬ್ರೇಕ್ ಪಡೆದು ಈ ಸೀಕ್ವೆಲ್‌ಗಾಗಿ ತಮ್ಮ ಸಂಪೂರ್ಣ ಮೂರು ವರ್ಷಗಳನ್ನು ಮೀಸಲಿಟ್ಟರು. ಸಿನಿಮಾ ಕ್ವಾಲಿಟಿ ಬಗ್ಗೆ ಸಾಕಷ್ಟು ಗಮನ ವಹಿಸಿದ್ದರು. ಸುಕುಮಾರ್ ನಿರ್ದೇಶನದ ಪುಷ್ಪ 2 ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾಯಿತು. ತೆರೆಕಂಡ 13ನೇ ದಿನದ ಹೊತ್ತಿಗೆ, 'ಪುಷ್ಪ 2' ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 953.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಪುಷ್ಪ 2 ಬಾಕ್ಸ್ ಆಫೀಸ್ ಒಟ್ಟು ಕಲೆಕ್ಷನ್: ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ ಎರಡನೇ ಮಂಗಳವಾರ ಕಲೆಕ್ಷನ್ ವಿಚಾರದಲ್ಲಿ ಕೊಂಚ ಕುಸಿತ ಕಂಡಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸಿನಿಮಾ ತನ್ನ 13ನೇ ದಿನ 24.25 ಕೋಟಿ ರೂಪಾಯಿ ಸಂಪಾದಿಸಿದೆ. ಹಿಂದಿನ ದಿನದ ಕಲೆಕ್ಷನ್‌ಗೆ ಹೋಲಿಸಿದರೆ ಶೇ.10.02ರಷ್ಟು ಇಳಿಕೆಯಾಗಿದೆ.