ಬೆಂಗಳೂರು/ಬೆಳಗಾವಿ: ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಕಲಾಪದಲ್ಲಿ ಇಂದು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸ್ಪಷ್ಟನೆ ನೀಡಿದ ಸಚಿವರು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಾಮರ್ಥ್ಯ ಮುಂದಿನ 9 ವರ್ಷಗಳಲ್ಲಿ 90 ಮಿಲಿಯನ್ ದಾಟುವ ನಿರೀಕ್ಷೆ ಇದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಯತ್ನಾಳ್, ಬೆಂಗಳೂರಿನಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಮತ್ತೊಂದು ಏರ್‌ಪೋರ್ಟ್ ಏಕೆ ಬೇಕು ಎಂದು ಪ್ರಶ್ನಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಎಂ.ಬಿ.ಪಾಟೀಲ್, 2033ರ ವೇಳೆಗೆ ಬೆಂಗಳೂರು ವಿಮಾನ ನಿಲ್ದಾಣದ ಸಾಮರ್ಥ್ಯ 100 ಮಿಲಿಯನ್ ದಾಟುವ ಅಂದಾಜಿಸಿದೆ. ಬಹುತೇಕ 90 ಮಿಲಿಯನ್‌ಗಳಿಗೆ ತಲುಪಬಹುದು ಎಂಬ ನಿರೀಕ್ಷೆಯಿಂದಾಗಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ತೀರ್ಮಾನಿಸಿದ್ದೇವೆ. ಫೆಬ್ರವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಉತ್ತರ ಕರ್ನಾಟಕ ಭಾಗದ ಜನ ಹುಬ್ಬಳ್ಳಿ, ಬೆಳಗಾವಿಯಿಂದ ದೆಹಲಿಗೆ ಪ್ರಯಾಣಿಸಬೇಕಾದರೆ 9 ಸಾವಿರ ರೂ. ವೆಚ್ಚವಾಗುತ್ತದೆ. ಬೆಂಗಳೂರಿನಿಂದ ಹೋಗಬೇಕಾದರೆ 15 ಸಾವಿರ ರೂ. ಖರ್ಚಾಗುತ್ತದೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿ ಎಂದು ಸಲಹೆ ನೀಡಿದರು.
ಮುಂದುವರೆದ ಚರ್ಚೆಯಲ್ಲಿ ಯತ್ನಾಳ್ ಅವರು, ನಮ್ಮ ಭಾಗದಲ್ಲಿ ಬಹಳಷ್ಟು ಪ್ರವಾಸಿ ತಾಣಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಬೇಕು. ಗಾಂಧೀಜಿ ಭೇಟಿ ನೀಡಿದ ಜಾಗದಲ್ಲಿ ಶತಮಾನೋತ್ಸವ ಮಾಡುತ್ತಿದ್ದಾರೆ. ಅದೇ ರೀತಿ ಅಂಬೇಡ್ಕರ್‌ರವರ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ ಎಂದರು.
ಚರ್ಚೆಯ ನಡುವೆ ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದವರ ವಿರುದ್ಧ ಚರ್ಚೆ ಮಾಡಲು ನನಗೆ ಸಂಪೂರ್ಣ ಕಾಲಾವಕಾಶ ನೀಡಲಾಗಿತ್ತು. ಇದಕ್ಕಾಗಿ ಸಭಾಧ್ಯಕ್ಷರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಸ್ಪೀಕರ್ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಅನಗತ್ಯವಾಗಿ ತಗಾದೆ ತೆಗೆಯಬೇಡಿ ಎಂದು ಪ್ರಸಾದ್ ಅಬ್ಬಯ್ಯ ಹೇಳಿದರು. ನನ್ನ ಬಗ್ಗೆ ಚರ್ಚೆ ಬೇಡ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಸಲಹೆ ನೀಡಿದರು.
ಚುನಾವಣಾ ಸಂದರ್ಭದಲ್ಲಿ ರಾಜಕೀಯ ಮಾತನಾಡೋಣ. ಆದರೆ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಎಂದರು.
ಇದನ್ನೂ ಓದಿ: ಶೇ.95ರಷ್ಟು ವಕ್ಫ್ ಆಸ್ತಿ ಮುಸ್ಲಿಮರಿಂದಲೇ ಒತ್ತುವರಿ; ದೇವಸ್ಥಾನ, ರೈತರ ಆಸ್ತಿ ಮುಟ್ಟಲ್ಲ - ಸಚಿವ ಜಮೀರ್