ಕಾರವಾರ: ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು 2024-25ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನೂ ಎರಡೂವರೆ ತಿಂಗಳು ಬಾಕಿ ಇರುವಾಗಲೇ ಗ್ರಾಮ ಪಂಚಾಯತ್ ಮಟ್ಟದ ಕರ ಸಂಗ್ರಹಣೆಯಲ್ಲಿ ಒಟ್ಟು ಬೇಡಿಕೆಯ ಶೇ.100 ರಷ್ಟು ವಸೂಲಾತಿ ಮಾಡುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿ ಕರ ಸಂಗ್ರಹಣೆಯಲ್ಲಿ ವಿನೂತನ ದಾಖಲೆ ಬರೆದಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುಂಡಗೋಡ ತಾಲೂಕಿನಲ್ಲಿ 1.52 ಕೋಟಿ ರೂ. ತೆರಿಗೆ ಸಂಗ್ರಹ ಗುರಿಗೆ ಪ್ರತಿಯಾಗಿ 1.53 ಕೋಟಿ ರೂ. ಕರ ಸಂಗ್ರಹಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಬಹುತೇಕ ತಾಲೂಕುಗಳು ಬೇಡಿಕೆಯ ಅರ್ಧದಷ್ಟು ಗುರಿ ಸಾಧಿಸಲು ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಮುಂಡಗೋಡು ತಾಲೂಕು ಇಷ್ಟು ಬೇಗ ಗುರಿ ಸಾಧಿಸಲು ಕಾರಣ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸೂಕ್ತ ಮಾರ್ಗದರ್ಶನ. ಅಧಿಕಾರಿಗಳು, ಸಿಬ್ಬಂದಿ ಮತ್ತು ಜನರ ಸಹಕಾರ, ಸ್ಟಾರ್ ಪರ್ಫಾರ್ಮರ್ ಆಫ್ ದಿ ವೀಕ್ ಪ್ರಶಸ್ತಿ ಎಂಬ ವಿನೂತನ ಪ್ರಯತ್ನ ಹಾಗೂ ವಿಶೇಷ ತೆರಿಗೆ ಅಭಿಯಾನಗಳು ಕಾರಣವಾಗಿವೆ.
ಮುಂಡಗೋಡು ತಾಲೂಕಿನಲ್ಲಿ ಜುಲೈ ತಿಂಗಳಿನಿಂದಲೇ ತೆರಿಗೆ ವಸೂಲಾತಿ ಪ್ರಾರಂಭಿಸಲಾಗಿತ್ತು. ಪ್ರತಿ ವಾರ ಹೆಚ್ಚಿನ ತೆರಿಗೆ ವಸೂಲಾತಿ ಮಾಡುವ ಕರ ವಸೂಲಿಗಾರರಿಗೆ ಸ್ಟಾರ್ ಪರ್ಫಾರ್ಮರ್ ಆಫ್ ದಿ ವೀಕ್ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಪಿಡಿಒ, ಬಿಲ್ ಕಲೆಕ್ಟರ್ ಹಾಗೂ ಇತರ ಸಿಬ್ಬಂದಿಗೆ ಪ್ರತಿ ವಾರ ಸಭೆ ನಡೆಸಿ ತೆರಿಗೆ ವಸೂಲಾತಿ ಪ್ರಗತಿ ಪರಿಶೀಲಿಸಲಾಗುತ್ತಿದೆ.
ಪ್ರತಿ ಗುರುವಾರ ತಾಲೂಕಿನಾದ್ಯಂತ ತೆರಿಗೆ ವಸೂಲಾತಿಗೆ ವಿಶೇಷ ಅಭಿಯಾನ ನಡೆಸಲಾಗುತ್ತಿದ್ದು, ಆ ದಿನ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸಹಿತ ಎಲ್ಲ ಹಿರಿಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್ಗಳು ಹಾಗೂ ಗ್ರಾಮ ಪಂಚಾಯಿತಿಯ ಎಲ್ಲ ಸಿಬ್ಬಂದಿ ಭಾಗವಹಿಸಿ ಮುಂಜಾನೆಯಿಂದ ರಾತ್ರಿವರೆಗೆ ಹೆಚ್ಚಿನ ತೆರಿಗೆ ವಸೂಲಾತಿ ಮಾಡುವಂತೆ ಕ್ರಮ ಕೈಗೊಳ್ಳಲಾಗಿತ್ತು.
ವಿಶೇಷ ಅಭಿಯಾನ: ಈ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ನರೇಗಾ ಹಾಗೂ ಎನ್‌ಆರ್‌ಎಲ್‌ಎಮ್ ಸಂಘದ ಮಹಿಳೆಯರನ್ನು ಸಹ ತೊಡಗಿಸಿಕೊಳ್ಳಲಾಗಿತ್ತು. ಡಿಸೆಂಬರ್ 5 ರಿಂದ ಜನವರಿ 5 ರವರೆಗೆ ತೆರಿಗೆ ವಸೂಲಾತಿ ಮಾಸಾಚರಣೆ ಆಚರಿಸಿ ಹೆಚ್ಚಿನ ತೆರಿಗೆ ವಸೂಲಾತಿ ಮಾಡಲಾಯಿತು. ಅಲ್ಲದೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಉಪ ಕಾರ್ಯದರ್ಶಿಗಳು ಸತತವಾಗಿ ಪ್ರಗತಿಯ ಮೇಲ್ವಿಚಾರಣೆ ಮಾಡುತ್ತಿದ್ದರು. ಈ ಎಲ್ಲ ಕಾರಣದಿಂದ ಮುಂಡಗೋಡ ಈ ಅಭೂತಪೂರ್ವ ಸಾಧನೆ ಮಾಡಲು ಸಾಧ್ಯವಾಗಿದೆ.
ಅಲ್ಲದೇ ಜಿಲ್ಲೆಯ ಕಾರವಾರ ತಾಲೂಕು ಶೇ 93 , ಶಿರಸಿ ಶೇ92 ಮತ್ತು ಸಿದ್ದಾಪುರ ಶೇ89 ಗುರಿ ಸಾಧಿಸುವ ಮೂಲಕ ರಾಜ್ಯದ ಟಾಪ್ 10ರ ಪಟ್ಟಿಯಲ್ಲಿವೆ. ಇದರೊಂದಿಗೆ ಜಿಲ್ಲಾವಾರು ಸಾಧನೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಪ್ರಸಕ್ತ ಸಾಲಿನಲ್ಲಿ ಶೇ 85 ಕರ ಸಂಗ್ರಹಿಸುವ ಮೂಲಕ ಮೊದಲ ಸ್ಥಾನದಲ್ಲಿರುವುದು ವಿಶೇಷವಾಗಿದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕಾಂದೂ ಅವರ ಸತತ ಮಾರ್ಗದರ್ಶನ, ಎಲ್ಲ ಪಿಡಿಒ ಹಾಗೂ ಎಲ್ಲಾ ಗ್ರಾಮ ಪಂಚಾಯತ್ ಸಿಬ್ಬಂದಿಯ ಅವಿರತ ಪ್ರಯತ್ನ ಹಾಗೂ ಜನತೆಯ ಸಹಕಾರದಿಂದ ತಾಲೂಕು ತೆರಿಗೆ ವಸೂಲಾತಿಯಲ್ಲಿ ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿರಲು ಸಾಧ್ಯವಾಗಿದೆ ಎನ್ನುತ್ತಾರೆ ಮುಂಡಗೋಡ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕಾಂದೂ, ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದ ತೆರಿಗೆ ಸಂಗ್ರಹಕ್ಕೆ ವಿಶೇಷ ಅಭಿಯಾನದ ಮೂಲಕ ಹೆಚ್ಚಿನ ಒತ್ತು ನೀಡಲಾಗಿತ್ತು. ಅದರಂತೆ ಮುಂಡಗೋಡ ತಾಲೂಕು 100 ಪ್ರತಿಶತ ವಸೂಲಾತಿ ಮಾಡುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದು, ಈ ಸಾಧನೆಗೆ ಅಧಿಕಾರಿ ಮತ್ತು ಸಿಬ್ಬಂದಿಗಳ ಸಂಘಟಿತ ಪ್ರಯತ್ನ ಕಾರಣವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ದಾಖಲೆ: ಒಂದೇ ದಿನ 7,710 ಪ್ರಯಾಣಿಕರ ನಿರ್ವಹಣೆ