Donald Trump Tesla India: ಅಮೆರಿಕದ ಎಲೆಕ್ಟ್ರಿಕ್ ವೆಹಿಕಲ್ ಕಿಂಗ್ ಟೆಸ್ಲಾ ಭಾರತ ಪ್ರವೇಶಿಸಲು ಬಯಸುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪ್ರಾರಂಭಿಸುತ್ತಿದೆ ಎಂಬ ವರದಿಗಳಾಗಿವೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಲ್ಲಿ ಟೆಸ್ಲಾ ಕಾರ್ಖಾನೆ ಸ್ಥಾಪಿಸುವುದಕ್ಕೆ ಬಯಸುತ್ತಿಲ್ಲ.
ಟೆಸ್ಲಾ ಭಾರತದಲ್ಲಿ ಕಾರ್ಖಾನೆ ಹೊಂದುವುದು 'ಸರಿಯಾದ ನಿರ್ಧಾರವಲ್ಲ' ಎಂದು ಟ್ರಂಪ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ವಿಶೇಷವೆಂದರೆ, ಟ್ರಂಪ್ ಈ ಹೇಳಿಕೆ ನೀಡಿದಾಗ, ಎಲೋನ್ ಮಸ್ಕ್ ಕೂಡ ಅವರ ಜೊತೆಗಿದ್ದರು. ಎಲೋನ್ ಮಸ್ಕ್ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡುವುದು ಅಸಾಧ್ಯ ಎಂಬುದು ಟ್ರಂಪ್ ಅವರ ಅಭಿಪ್ರಾಯ.
ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಮಸ್ಕ್ ಅವರನ್ನು ಭೇಟಿಯಾಗಿದ್ದರು. ಇದಾದ ಒಂದು ವಾರದೊಳಗೆ ಟೆಸ್ಲಾ ಭಾರತದಲ್ಲಿ ನೇಮಕಾತಿ ಆರಂಭಿಸಿದೆ. ಭಾರತ ಕಾರುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತದೆ ಎಂದು ಟ್ರಂಪ್ ಕಾರ್ಯಕ್ರಮದ ಸಂದರ್ಭದಲ್ಲಿ ಹೇಳಿದ್ದರು.
ಇದು ಶೇಕಡಾ 100ರಷ್ಟು ಹೆಚ್ಚಾಗುತ್ತದೆ. ಇದರಿಂದ ಕಾರುಗಳ ಬೆಲೆ ದ್ವಿಗುಣಗೊಳ್ಳುತ್ತದೆ. ಕಳೆದ ವಾರ ಪ್ರಧಾನಿ ಮೋದಿ ಅಮೆರಿಕ ಭೇಟಿ ನೀಡಿದ್ದಾಗಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದೆ ಎಂದು ಅವರು ಹೇಳಿದ್ದಾರೆ. ಇನ್ನು ಸುಂಕದ ಕುರಿತು ನಡೆಯುತ್ತಿರುವ ವಿವಾದ ಪರಿಹರಿಸಲು ಮತ್ತು ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿವೆ.
ಟ್ರಂಪ್ ವಿರೋಧವೇಕೆ?: ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್, ಟೆಸ್ಲಾ ಭಾರತದಲ್ಲಿ ಕಾರ್ಖಾನೆ ಸ್ಥಾಪಿಸಿದರೆ ಅದು ಭಾರತೀಯ ಸುಂಕಗಳನ್ನು ಬೈಪಾಸ್ ಮಾಡಬಹುದು. ಆದರೆ ಇದು ಅಮೆರಿಕಕ್ಕೆ 'ಅನ್ಯಾಯ'ವಾಗುತ್ತದೆ. ಗಮನಾರ್ಹವಾಗಿ ಮಸ್ಕ್ ಭಾರತದ ಹೆಚ್ಚಿನ ಸುಂಕಗಳನ್ನು ಬಹಳ ಹಿಂದಿನಿಂದಲೂ ವಿರೋಧಿಸುತ್ತಿದ್ದಾರೆ. ಅವರು ಟಾಟಾ ಮೋಟಾರ್ಸ್‌ನಂತಹ ದೇಶೀಯ ತಯಾರಕರನ್ನು ರಕ್ಷಿಸುತ್ತಾರೆ ಎಂಬುದು ಟ್ರಂಪ್ ಆರೋಪ.
ಎಲೋನ್ ಮಸ್ಕ್ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡುವುದು 'ಅಸಾಧ್ಯ'. ಜಗತ್ತಿನ ಪ್ರತಿಯೊಂದು ದೇಶವೂ ನಮ್ಮ ಲಾಭವನ್ನು ಪಡೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಅವರು ಅದನ್ನು ಸುಂಕಗಳ ಮೂಲಕ ಪಡೆಯುತ್ತಾರೆ. ಉದಾಹರಣೆಗೆ, ಭಾರತದಲ್ಲಿ ಕಾರು ಮಾರಾಟ ಮಾಡುವುದು ಪ್ರಾಯೋಗಿಕವಾಗಿ ಅಸಾಧ್ಯ. ಈಗ ಮಸ್ಕ್ ಅವರು ಭಾರತದಲ್ಲಿ ಕಾರ್ಖಾನೆ ನಿರ್ಮಿಸಿದರೆ ಪರವಾಗಿಲ್ಲ, ಆದರೆ ಅದು ನಮಗೆ ತುಂಬಾ ಅನ್ಯಾಯವಾಗಿದೆ ಎಂಬ ಬೇಸರದ ಮಾತನ್ನಾಡಿದರು.
ವಾಸ್ತವವಾಗಿ ಭಾರತ ಒಂದು ದೊಡ್ಡ ಮಾರುಕಟ್ಟೆ. ಯಾವುದೇ ದೇಶ ಇಲ್ಲಿ ಸರಕುಗಳನ್ನು ಮಾರಾಟ ಮಾಡಿದರೆ ಅದು ಭಾರೀ ಲಾಭವನ್ನು ಪಡೆಯುತ್ತದೆ. ಅಲ್ಲಿ ಕಾರ್ಖಾನೆ ಸ್ಥಾಪನೆಯಾದರೆ ಭಾರತಕ್ಕೆ ಲಾಭವಾಗುತ್ತದೆ. ಟ್ರಂಪ್ ಅವರ ಹೇಳಿಕೆಗಳಿಂದ ಭಾರತವು ತೆರಿಗೆಗಳನ್ನು ಕಡಿಮೆ ಮಾಡಬೇಕು ಮತ್ತು ಅಮೆರಿಕದ ಸರಕುಗಳು ಸುಲಭವಾಗಿ ಪ್ರವೇಶಿಸಬೇಕು ಎಂದು ಅವರು ಬಯಸುತ್ತಾರೆ ಎಂದು ತೋರುತ್ತದೆ.
ಭಾರತ ಸರ್ಕಾರವು ಕಳೆದ ಮಾರ್ಚ್‌ನಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅನಾವರಣಗೊಳಿಸಿತು. ಕಾರು ತಯಾರಕರು ಕನಿಷ್ಠ $500 ಮಿಲಿಯನ್ ಹೂಡಿಕೆ ಮಾಡಿ ಕಾರ್ಖಾನೆಯನ್ನು ಸ್ಥಾಪಿಸಿದರೆ ಆಮದು ಸುಂಕವನ್ನು ಶೇಕಡಾ 15ಕ್ಕೆ ಇಳಿಸಿತು.
ಶ್ವೇತಭವನದ ಫ್ಯಾಕ್ಟ್ ಶೀಟ್‌ನಲ್ಲಿ ಭಾರತವು ಅಮೆರಿಕದ ಮೋಟಾರ್‌ಸೈಕಲ್‌ಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುತ್ತದೆ. ಆದರೆ ಅಮೆರಿಕವು ಭಾರತೀಯ ಮೋಟಾರ್‌ಸೈಕಲ್‌ಗಳ ಮೇಲೆ ಕೇವಲ ಶೇ. 2.4 ರಷ್ಟು ಸುಂಕ ವಿಧಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.
ಮಾಧ್ಯಮಕ್ಕೆ ನೀಡಿದ ಜಂಟಿ ಸಂದರ್ಶನದಲ್ಲಿ, ಡೊನಾಲ್ಡ್ ಟ್ರಂಪ್ ಮತ್ತು ಎಲೋನ್ ಮಸ್ಕ್ ಇಬ್ಬರೂ ತಮ್ಮ ಪರಸ್ಪರ ಮೆಚ್ಚುಗೆಯ ಬಗ್ಗೆ ಮಾತನಾಡಿದರು ಮತ್ತು 'ನಮ್ಮನ್ನು ಬೇರ್ಪಡಿಸಲು' ಮಾಧ್ಯಮಗಳ ಪ್ರಯತ್ನಗಳನ್ನು ತಿರಸ್ಕರಿಸಿದರು.
ಇದನ್ನೂ ಓದಿ: ಮಸ್ಕ್ ಸಂಸ್ಥೆಯಲ್ಲಿ ಕೆಲಸ ಮಾಡಲು ಅದ್ಭುತ ಅವಕಾಶ; ಮುಂಬೈನಲ್ಲಿ ನೇಮಕಾತಿ ಆರಂಭಿಸಿದ ಟೆಸ್ಲಾ