ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಎದುರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದಾಗಿ ಸುರ್ಜೆವಾಲ ಮತ್ತು ಜಾರಕಿಹೊಳಿ ಬೆಂಬಲಿಗರ ಮಧ್ಯೆ ವಾಗ್ವಾದ ಉಂಟಾಯಿತು.
ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷರು, ಗ್ಯಾರಂಟಿ ಸಮಿತಿ ಪದಾಧಿಕಾರಿಗಳೊಂದಿಗೆ ತಾವು ಮೀಟಿಂಗ್ ನಡೆಸಿದ್ದೇನೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು. ಆಗ ಕಾರ್ಯಕರ್ತರೊಬ್ಬರು ಎದ್ದುನಿಂತು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಅಸಮಾಧಾನಗೊಂಡ ಸುರ್ಜೇವಾಲ, ನೀವೇ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸಭೆ ನಡೆಸಿ ಅಂತಾ ಸಿಡಿಮಿಡಿಗೊಂಡರು. ಅವರ ಮಾತಿಗೆ ಸಿಟ್ಟಿಗೆದ್ದ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಬಾಬಾಜಾನ್ ಬಾಗವಾನ್ ವಾಗ್ವಾದಕ್ಕಿಳಿದಾಗ ಅವರ ಪಕ್ಕದಲ್ಲಿದವರೂ ಅವರಿಗೆ ಧ್ವನಿ ಗೂಡಿಸಿದರು. ಈ ವೇಳೆ ಯಾವುದೇ ಸಭೆ ಮಾಡಿಲ್ಲ ಎಂದು ನೇರವಾಗಿ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ನಂತರ ಕಾಂಗ್ರೆಸ್ ಕಚೇರಿ ನಿರ್ಮಾಣದ ಬಗ್ಗೆಯೂ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ಈಗ ಸತೀಶ್ ಜಾರಕಿಹೊಳಿ ಅವರು ಕಚೇರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಬೇರೆ ಯಾರೂ ನೋಡಿಕೊಳ್ಳುತ್ತಿಲ್ಲ ಎಂದರು. ಇದಕ್ಕೆ ಸತೀಶ್ ಜಾರಕಿಹೊಳಿ ಅವರನ್ನ ಖುಷಿ ಪಡಿಸಲು ಮಾತನಾಡುತ್ತಿದ್ದೀರಿ ಎಂದು ಸುರ್ಜೇವಾಲ ಹೇಳಿದರು. ಆಗ ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ಆಕ್ರೋಶ ಹೊರಹಾಕಿ, ಸತೀಶ್ ಜಾರಕಿಹೊಳಿ ನಮ್ಮ ಹೆಮ್ಮೆ, ಅವರ ಸಲುವಾಗಿ ನಾವು ಜೀವ ಕೊಡುತ್ತೇವೆ. ಇಷ್ಟೆಲ್ಲಾ ಜನರು ಅವರ ಸಲುವಾಗಿ ಬಂದಿದ್ದಾರೆ ಎಂದು ನೇರವಾಗಿ ಹೇಳಿದರು. ಆ ಬಳಿಕ ರಣದೀಪ್ ಸಿಂಗ್ ಸುರ್ಜೇವಾಲ ಏನನ್ನೂ ಮಾತನಾಡಲಿಲ್ಲ.
ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿ ಕೆಲ ನಾಯಕರು ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ, ಈ ಘಟನೆ ವೇಳೆ ಸತೀಶ್ ಜಾರಕಿಹೊಳಿ ಕೂಡ ಉಪಸ್ಥಿತರಿದ್ದರು.
ಎಲ್ಲರೂ ಸಮಾಧಾನಗೊಂಡ ಬಳಿಕ ಒಗ್ಗಟ್ಟಾಗಿ ಎಲ್ಲರೂ ಕೆಲಸ ಮಾಡೋಣ. ಯಾರಿಗೆ ಏನು ಅವಶ್ಯಕತೆ ಇದೆ, ವಾಹನ ವ್ಯವಸ್ಥೆ ಸೇರಿ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಸುರ್ಜೇವಾಲ ಸುಮ್ಮನಾಗಿಸಿದರು.
ಜೈ ಬಾಪು, ಜೈ ಭೀಮ, ಜೈ ಸಂವಿಧಾನ ರ‍್ಯಾಲಿ: 1924ರಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ರ‍್ಯಾಲಿಯನ್ನು ಪಕ್ಷ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಳಗಾವಿಗೆ ಭೇಟಿ ನೀಡಿ, ಪೂರ್ವಭಾವಿ ಸಭೆ ನಡೆಸಿದರು.
ಇದನ್ನೂ ಓದಿ : ಸತೀಶ್ ಜಾರಕಿಹೊಳಿಗೆ ನೋಟಿಸ್ ವದಂತಿ: ಸಚಿವರಿಗೆ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ ಎಂದ ಸುರ್ಜೇವಾಲ - SATISH JARAKIHOLI