ಹುಬ್ಬಳ್ಳಿ: ಪ್ರಯಾಗ್ರಾಜ್ ಮಹಾ ಕುಂಭಮೇಳಕ್ಕೆ ದೇಶಾದ್ಯಂತವಲ್ಲದೆ, ವಿದೇಶಗಳಿಂದಲೂ ಭಕ್ತರು ಆಗಮಿಸಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಇದೇ ವೇಳೆ, ನೈಋತ್ಯ ರೈಲ್ವೆಯು ಮೂರು ವಿಭಾಗಗಳಾದ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನಿಂದ 20 ಪ್ಯಾಸೆಂಜರ್ ಟ್ರಿಪ್ಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಗಮನ ಸೆಳೆದಿದೆ.
ಮೂರು ವಿಭಾಗಗಳಿಂದ ಒಟ್ಟು 45,568 ಪ್ರಯಾಣಿಕರು ಮಹಾ ಕುಂಭಕ್ಕೆ ತೆರಳಿದ್ದಾರೆ. ಈ ವಿಶೇಷ ಟ್ರಿಪ್ಗಳಿಂದ ರೈಲ್ವೆಯು 4,95,14,078 ರೂಪಾಯಿ ಆದಾಯ ಗಳಿಸಿದೆ (26 ಡಿಸೆಂಬರ್ 2024 ರಿಂದ 24ರ ಫೆಬ್ರವರಿ 2025 ವರೆಗೆ). ಇದು ಇಲಾಖೆಯ ದಕ್ಷತೆ ಮತ್ತು ಉತ್ತಮ ಕಾರ್ಯಾಚರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೈಲುಗಳು ಅತ್ಯಂತ ಜನಪ್ರಿಯವಾಗಿದ್ದು, ಸರಾಸರಿ 143.8% ಸೀಟ್ ಭರ್ತಿಯಾಗಿರುವುದು ಅವುಗಳ ಬಲವಾದ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ. ಈ ಸಾಧನೆಯು ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಮತ್ತು ಉತ್ತಮ ಗುಣಮಟ್ಟದ ಸೇವೆ ಒದಗಿಸಲು ನೈಋತ್ಯ ರೈಲ್ವೆಯ ಸಮರ್ಪಣೆಯನ್ನು ಇನ್ನಷ್ಟು ಬಲಪಡಿಸುತ್ತದೆ. ವಿಶೇಷ ಟ್ರಿಪ್ಗಳು ಪ್ರಯಾಣಿಕರನ್ನು ಕುಂಭಮೇಳಕ್ಕೆ ಸಂಪರ್ಕಿಸಲು ಸಹಾಯ ಮಾಡಿವೆ. ಪ್ರಯಾಣಿಕರಿಗೆ ಸುಗಮ ಪ್ರಯಾಣದ ಅನುಭವವನ್ನು ಒದಗಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ನೈಋತ್ಯ ರೈಲ್ವೆ ತನ್ನ ಮೂರು ವಿಭಾಗಗಳಲ್ಲಿ ಪ್ರಯಾಣಿಕರಿಗೆ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಕುಂಭಮೇಳದ ಮಾರ್ಗಸೂಚಿಗಳನ್ನು ಒಳಗೊಂಡ ಕಿರುಪುಸ್ತಕಗಳನ್ನು ವಿತರಿಸಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಿವರಾತ್ರಿ: ಗೋಕರ್ಣ, ಮುರುಡೇಶ್ವರಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ