ಭಾರತೀಯ ಚಿತ್ರರಂಗದ ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಒಡೆಲಾ 2'. ಚಿತ್ರದ ನಿರ್ಮಾಪಕರಿಂದು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸಿದರು. ಟೀಸರ್ ರಿಲೀಸ್ ಈವೆಂಟ್ನಲ್ಲಿ ನಾಯಕ ನಟಿ ತಮನ್ನಾ ಭಾಟಿಯಾ, ನಿರ್ದೇಶಕ ಅಶೋಕ್ ತೇಜ, ನಿರ್ಮಾಪಕ ಮಧು, ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಮತ್ತು ಬರಹಗಾರ ಸಂಪತ್ ನಂದಿ ಭಾಗವಹಿಸಿದ್ದರು. 'ಒಡೆಲಾ 2' ಒಡೆಲಾ ಗ್ರಾಮದ ಹಿನ್ನೆಲೆಯಲ್ಲಿ ರಚನೆಯಾಗಿದ್ದು, ಅದರ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳನ್ನು ಕೇಂದ್ರೀಕರಿಸಿದೆ. ಈ ಗ್ರಾಮದಲ್ಲಿ ದುಷ್ಟ ಶಕ್ತಿಗಳಿಂದ ಜನರನ್ನು ರಕ್ಷಿಸುವ ದೇವರು ಒಡೆಲಾ ಮಲ್ಲಣ್ಣ ಸ್ವಾಮಿ ಇದ್ದಾರೆ. ಟೀಸರ್ ಸೂಚಿಸುವಂತೆ, ದುಷ್ಟಶಕ್ತಿ ಎದುರಾದಾಗ ನಂಬಿಕೆಯನ್ನು ಪುನರ್ ಸ್ಥಾಪಿಸಲು ದೈವಿಕ ಶಕ್ತಿ ಹೇಗೆ ಏರುತ್ತದೆ ಎಂಬುದನ್ನು ಚಿತ್ರ ಹೇಳಲಿದೆ.
1 ನಿಮಿಷ ಮತ್ತು 52 ಸೆಕೆಂಡುಗಳ ಈ ಟೀಸರ್ ನಂಬಿಕೆಗೆ ಸವಾಲು ಎದುರಾದಾಗ ಸೃಷ್ಟಿಯಾಗುವ ದೈವಿಕ ಶಕ್ತಿಯ ಒಂದು ನೋಟವನ್ನೊದಗಿಸಿದೆ. ತಮನ್ನಾ ಸಾಧುವಿನ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ದಟ್ಟ ಕೂದಲು, ಒಂದು ಕೈಯಲ್ಲಿ ಪವಿತ್ರ ಕೋಲು, ಇನ್ನೊಂದು ಕೈಯಲ್ಲಿ ಡಮರು ಹಿಡಿದಿದ್ದಾರೆ. ಹಣೆಯಲ್ಲಿ ಹಳದಿ, ಕೇಸರಿ ತಿಲಕವನ್ನು ಕಾಣಬಹುದು. ಟೀಸರ್ನಲ್ಲಿ, ದಕ್ಷಿಣ ಚಿತ್ರರಂಗದ ಖ್ಯಾತ ನಟಿ ತಮನ್ನಾ ನೀರು, ಬೆಂಕಿ, ಗಾಳಿ, ಭೂಮಿ ಮತ್ತು ಆಕಾಶವನ್ನು ನಿಯಂತ್ರಿಸುವುದಾಗಿ ಸವಾಲೆಸೆಯುವ ಪವರ್ಫುಲ್ ದುಷ್ಟ ಶಕ್ತಿಯೊಂದಿಗೆ ಹೋರಾಡುತ್ತಿರುವಂತೆ ತೋರಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಪವರ್ಫುಲ್ ಹಿನ್ನೆಲೆ ಸಂಗೀತ ಟೀಸರ್ನ ತೂಕ ಹೆಚ್ಚಿಸಿದೆ. ಆದ್ರಿಲ್ಲಿ ತಮನ್ನಾ ಯಾವುದೇ ಡೈಲಾಗ್ಸ್ ಹೊಂದಿಲ್ಲ.
ತಮನ್ನಾ ಅವರು ನಾಗ ಸಾಧ್ವಿ ಪಾತ್ರವನ್ನು ನಿರ್ವಹಿಸುತ್ತಿರುವುದು ಇದೇ ಮೊದಲು ಎಂದು ನಿರ್ದೇಶಕ ಅಶೋಕ್ ತೇಜ ತಿಳಿಸಿದ್ದಾರೆ. ಶಿವ ಮತ್ತು ಶಕ್ತಿಯನ್ನೊಳಗೊಂಡ ಈ ಪಾತ್ರವು ಗ್ಲ್ಯಾಮರಸ್ ಪಾತ್ರಗಳಲ್ಲಿ ನಟಿಸಿರುವ ತಮನ್ನಾರಿಗೆ ಸಂಪೂರ್ಣವಾಗಿ ಹೊಸ ಅನುಭವ ಎಂದು ನಿರ್ದೇಶಕರು ವಿವರಿಸಿದರು. ತಮನ್ನಾಗೆ ತಯಾರಿ ಸಮಯ ಬಹಳ ಕಡಿಮೆ ಇತ್ತು ಎಂಬುದನ್ನು ತಿಳಿಸಿದರು. ಅದಾಗ್ಯೂ, ನಟಿ ಹಲವು ಸಾಧುಗಳ ಬಾಡಿ ಲ್ಯಾಂಗ್ವೇಜ್ ಅನ್ನು ಅಧ್ಯಯನ ಮಾಡಿದ್ದು, ಪಾತ್ರಕ್ಕೆ ಒಗ್ಗಿಕೊಳ್ಳಲು ಸಹಾಯವಾಯಿತು.
ಇದನ್ನೂ ಓದಿ: ರಿಷಬ್ ಶೆಟ್ಟಿ ದಂಪತಿ ಜೊತೆ ಮಲಯಾಳಂ ನಟ ಜಯಸೂರ್ಯ: ಫೋಟೋ
'ಒಡೆಲಾ 2' ಚಿತ್ರವು 2022ರ ಒಡೆಲಾ ರೈಲ್ವೆ ಸ್ಟೇಷನ್ ಚಿತ್ರದ ಮುಂದುವರಿದ ಭಾಗ. ಅಶೋಕ್ ತೇಜ ನಿರ್ದೇಶನದ ಚಿತ್ರವನ್ನು ಡಿ.ಮಧು ನಿರ್ಮಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶೀಘ್ರದಲ್ಲೇ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಮೋಹನ್‌ಲಾಲ್, ಪೃಥ್ವಿರಾಜ್ ಸಿನಿಮಾದಲ್ಲಿ ಅಮೀರ್ ಖಾನ್ ಸಹೋದರಿ ನಿಖತ್ ಹೆಗ್ಡೆ
ಒಡೆಲಾ 1 ಕ್ರೈಮ್ ಥ್ರಿಲ್ಲರ್ ಆಗಿದ್ದು, ಒಡೆಲಾ 2 ಸೂಪರ್ ನ್ಯಾಚುರಲ್ ಥ್ರಿಲ್ಲರ್ ಆಗಿದೆ. ಸಂಪತ್ ನಂದಿ ಬರೆದು, ಅಶೋಕ್ ತೇಜ ನಿರ್ದೇಶಿಸಿರುವ ಈ ಚಿತ್ರವನ್ನು ಮಧು ಕ್ರಿಯೇಷನ್ಸ್ ಮತ್ತು ಸಂಪತ್ ನಂದಿ ಟೀಮ್‌ವರ್ಕ್ಸ್ ಬ್ಯಾನರ್‌ಗಳಡಿಯಲ್ಲಿ ನಿರ್ಮಿಸಲಾಗಿದೆ. ಸೌಂದರ್ ರಾಜನ್ ಎಸ್ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಹೆಬಾ ಪಟೇಲ್, ವಸಿಷ್ಠ ಸಿಂಹ, ಯುವ, ನಾಗ ಮಹೇಶ್, ವಂಶಿ, ಗಗನ್ ವಿಹಾರಿ, ಸುರೇಂದರ್ ರೆಡ್ಡಿ, ಭೂಪಾಲ್ ಮತ್ತು ಪೂಜಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.