ಬೆಂಗಳೂರು: ಬಹಿರಂಗ ಹೇಳಿಕೆ ಯಾರು ಕೊಡಬಾರದು. ಇದು ನನ್ನ ಸೂಚನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಇಂತಹ ಹೇಳಿಕೆ ಯಾರು ಕೊಡಬಾರದು ಇದು ನನ್ನ ಮೊದಲ ಸೂಚನೆ. ಏನೇ ತೀರ್ಮಾನ ಮಾಡುವುದಿದ್ದರೂ ನಾನು, ರಾಹುಲ್‌ಗಾಂಧಿ, ಸೋನಿಯಾಗಾಂಧಿ ಇದ್ದೇವೆ. ನಾವೆಲ್ಲಾ ಕುಳಿತು ಸೂಕ್ತ ಕಾಲದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಬದಲಾವಣೆ, ಬದಲಾವಣೆ ಅಂತೀರಿ. ಎಲ್ಲಿದೆ ಬದಲಾವಣೆ?. ಸೂಕ್ತ ಕಾಲದಲ್ಲಿ ಅಂದ್ರೆ ನಾಳೆ ನಾಡಿದ್ದೇ ಅಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಅನಾವಶ್ಯಕ ಗೊಂದಲ ಉಂಟಾಗುತ್ತಿದೆ. ಎಲ್ಲಾದಕ್ಕೂ ಹೈಕಮಾಂಡ್ ಉತ್ತರಿಸಬೇಕಾ?. ನಿಮಗೆ ಯಾರು ಹೇಳಿಕೆ ಕೊಡು ಅಂದಿದ್ದು. ನೀವೇ ಹೇಳಿಕೆ ಕೊಡ್ತೀರ. ನೀವೆ ಗೊಂದಲ ಮಾಡ್ತೀರ. ಶಾಸಕರು, ಸಚಿವರು, ಎಂಪಿಗಳಿಗೆ ನನ್ನ ಸಲಹೆ ಇಷ್ಟೇ ಯಾರೂ ಬಹಿರಂಗ ಹೇಳಿಕೆ ಕೊಡಬಾರದು. ನಾವು ತೀರ್ಮಾನ ಮಾಡ್ತೇವೆ. ಏನು ಮಾಡಬೇಕು ಅಂತ. ಹಿಂದಿನಿಂದಲೂ ಪದ್ದತಿ ನಡೆದುಕೊಂಡು ಬಂದಿದೆ. ಅದರಂತೆ ನಡೆದುಕೊಂಡು ಹೋಗುತ್ತದೆ ಎಂದರು.
ಗ್ಯಾರಂಟಿ ನಿಭಾಯಿಸಬೇಕಿದೆ. ಈಗ ಅನವಶ್ಯಕ ಗೊಂದಲ ಇದೆ. ಪ್ರತಿಯೊಬ್ಬರ ಹೇಳಿಕೆಗಳಿಗೂ ಸ್ಪಷ್ಟನೆ ಕೊಡಲು ಹೈಕಮಾಂಡ್ ಇದ್ಯಾ?. ನಾವು ಮನಸ್ಸು ಮಾಡಿದ್ರೆ ಏನು ಬೇಕಾದರೂ ಮಾಡುತ್ತೇವೆ. ನೀವೇ ಹೇಳಿಕೆ ಕೊಡ್ತೀರಿ. ನೀವೇ ಗೊಂದಲ ಮಾಡ್ತೀರಿ. ದಯವಿಟ್ಟು ಶಾಸಕರು, ಮಂತ್ರಿ, ಎಂಪಿ ಯಾರೂ ಕೂಡ ಬದಲಾವಣೆ ಬಗ್ಗೆ ಮಾತನಾಡಬಾರದು. ನಾವು ಸ್ಥಿರ ಸರ್ಕಾರವನ್ನು ಗಟ್ಟಿ ಮಾಡಬೇಕು. ಆಗ ಯಾರೂ ಅಲುಗಾಡಿಸುವುದಿಲ್ಲ. ನಮ್ಮ ಮಾತು ಕೇಳದಿದ್ರೆ, ಹೈಕಮಾಂಡ್ ವೀಕ್ ಇಲ್ಲ. ಕ್ರಮ ತಗೊಳುವುದಕ್ಕೆ ಹಿಂಜರಿಯೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ: ಸಂತೋಷ್ ಲಾಡ್