ಬಿಗ್ ಬಾಸ್ ಸೀನಸ್ 11ರ ಗ್ರ್ಯಾಂಡ್ ಫಿನಾಲೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಮನೆಯಲ್ಲಿ ಉಳಿದುಕೊಂಡಿರುವ ಪ್ರತೀ ಸ್ಪರ್ಧಿಗಳು ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದು, ಸೀಸನ್ 11ರ ಟ್ರೋಫಿಯನ್ನು ಯಾರು ಎತ್ತಲಿದ್ದಾರೆ ಅನ್ನೋ ಕುತೂಹಲ ಕನ್ನಡಿಗರಲ್ಲಿದೆ. ಈ ವಾರ ಎರಡು ಎಲಿಮಿನೇಷನ್ ನಡೆಯಲಿದ್ದು, ಯಾರು ಮನೆಗೆ ಹೋಗಲಿದ್ದಾರೆ? ಯಾರು ಫಿನಾಲೆ ವೇದಿಕೆಯಲ್ಲಿರಲಿದ್ದಾರೆ? ಅನ್ನೋದನ್ನು ಕಾದು ನೋಡಿಬೇಕಿದೆ. ಈ ನಡುವೆ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಅತಿಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಇತ್ತೀಚೆಗಷ್ಟೇ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳ ಕುಟುಂಬಸ್ಥರು ಬಂದು ಹೋಗಿದ್ದಾರೆ. ನಿರೂಪಕಿ ಅನುಪಮಾ ಗೌಡ, ನಟಿ ತಾರಾ ಅನುರಾಧ ಅವರ ಆಗಮನವೂ ಆಗಿದೆ. ಇದೀಗ ಇದೇ ಸೀಸನ್ನ ಹಳೇ ಸ್ಪರ್ಧಿಗಳು ಬಿಗ್ ಹೌಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಒಂದು ಸಣ್ಣ ನೋಟವನ್ನು 'ನೆನಪಿನ ಮೂಟೆ ಹೊತ್ತು ತಂದ ಹಳೇ ಕಂಟೆಸ್ಟೆಂಟ್ಸ್!' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಾಣಬಹುದು.
ಪ್ರೋಮೋದಲ್ಲಿ, ಶಿಶರ್, ರಂಜಿತ್, ಗೋಲ್ಡ್ ಸುರೇಶ್, ಹಂಸ, ಯಮುನಾ, ಅನುಷಾ ರೈ ಕಾಣಿಸಿಕೊಂಡಿದ್ದಾರೆ. ಸೀಸನ್ 11ರ ಆರಂಭದಿಂದ ಈವರೆಗೆ ಎಲಿನೇಟ್ ಆದವರ ಪೈಕಿ ಚೈತ್ರಾ ಕುಂದಾಪುರ, ಮಾನಸಾ, ಜಗದೀಶ್, ಐಶ್ವರ್ಯಾ ಹಾಗೂ ಧರ್ಮಕೀರ್ತಿರಾಜ್ ಅವರನ್ನು ಮನೆಯವರೂ ಸೇರಿದಂತೆ ವೀಕ್ಷಕರು ಮಿಸ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸೈಫ್ಗೂ ಮುನ್ನ ಹಲ್ಲೆಗೊಳಗಾದ, ಬೆದರಿಕೆ ಸ್ವೀಕರಿಸಿದ ಸೆಲೆಬ್ರಿಟಿಗಳ ಲಿಸ್ಟ್: ಸಲ್ಮಾನ್, ಶಾರುಖ್.. ಮತ್ತಿತರರು
ಬಂದ ಮಾಜಿ ಸ್ಪರ್ಧಿಗಳು ಮನೆಯಲ್ಲಿ ಒಂದೊಳ್ಳೆ ಕ್ಷಣವನ್ನು ಕಳೆದಿದ್ದಾರೆ. ಜೊತೆಗೆ, ಸಿಹಿ ಕಹಿ ಘಟನೆಗಳನ್ನು ನೆನೆದು ಮಾಜಿ ಸ್ಪರ್ಧಿಗಳು ಸದ್ಯ ಮನೆಯಲ್ಲಿ ಉಳಿದುಕೊಂಡಿರುವವರಿಗೆ ರೆಡ್ ಆ್ಯಂಡ್ ಬ್ಲ್ಯಾಕ್ ಹಾರ್ಟ್ ಕೊಟ್ಟಿದ್ದಾರೆ. ಜೊತೆಗೆ ಕಾರಣಗಳನ್ನೂ ಕೊಟ್ಟಿದ್ದಾರೆ. ಅತಿ ಹೆಚ್ಚಿನ ಹಾರ್ಟ್ ಮಂಜು ಅವರ ಕೈ ಸೇರಿದೆ.
ಇದನ್ನೂ ಓದಿ: ನಾಳೆ 'ಎಮರ್ಜೆನ್ಸಿ' ರಿಲೀಸ್: ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿದ 5 ಪ್ರಮುಖ ಕಲಾವಿದರಿವರು
ಗೋಲ್ಡ್ ಸುರೇಶ್ ಅವರು ಗೌತಮಿಗೆ ಬ್ಲ್ಯಾಕ್ ಹಾರ್ಟ್ ಕೊಟ್ಟಿದ್ದಾರೆ. ಕಾರಣಗಳನ್ನು ಒದಗಿಸಿದ ಅವರು, ಒಂದು ಕೆಟ್ಟ ಘಟನೆ. ನರಕದಲ್ಲಿರುವಾಗ ಉಪ್ಪಿನಕಾಯಿ ತೆಗೆದುಕೊಂಡೆ ಅನ್ನೋ ಕಾರಣ ಕೊಟ್ಟು ನಾಮಿನೇಟ್ ಮಾಡಿದ್ದರು ಎಂದು ಕಹಿ ನೆನಪನ್ನು ಎಲ್ಲರೆದುರು ಹೇಳಿದರು. ಮಂಜು ಹೆಸರನ್ನು ತೆಗೆದುಕೊಂಡ ಹಲವರು ಅವರ ಒರಟುತನದ ಬಗ್ಗೆ ತಮ್ಮ ಕಾರಣಗಳನ್ನು ಕೊಟ್ಟರು. ನಾಲ್ಕೈದು ವಾರ ಮಂಜು ಹೇಗಿದ್ದ? ಈವಾಗ್ಯಾಕೋ ಕಾಣಿಸ್ತಿಲ್ಲ... ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿತು ಅನಿಸ್ತಿದೆ ಎಂದು ಮಂಜು ತಿಳಿಸಿದ್ದಾರೆ.