ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾರತ್ಹಳ್ಳಿ ಠಾಣೆ ಪೊಲೀಸರು, ಆತನ ಪತ್ನಿ ನಿಖಿತಾ ಸಿಂಘಾನಿಯಾ ಅವರ ಪ್ರಾಥಮಿಕ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ 'ಅತುಲ್ ಸುಭಾಷ್ ಸಂತ್ರಸ್ತನಲ್ಲ, ನಾನು ನಿಜವಾದ ಸಂತ್ರಸ್ತೆ' ಎಂದು ನಿಖಿತಾ ಸಿಂಘಾನಿಯಾ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
''ನಾನು ಅಡುಗೆ ಚೆನ್ನಾಗಿ ಮಾಡಿಲ್ಲವೆಂದು ಅತುಲ್ ಸುಭಾಷ್ ನನಗೆ ಕಿರುಕುಳ ನೀಡುತ್ತಿದ್ದರು. ನನಗೆ ನಾನ್ವೆಜ್ ಅಡುಗೆ ಬರಲ್ಲ ಎಂದು ಹೇಳಿದರೂ ಕೇಳುತ್ತಿರಲಿಲ್ಲ. ಅದೇ ಅಡುಗೆ ಮಾಡುವಂತೆ ಹೇಳುತ್ತಿದ್ದರು. ಅಷ್ಟರ ಬಳಿಕವೂ ನಾನು ಮನೆ ಬಿಟ್ಟು ಹೋಗಿರಲಿಲ್ಲ. ಮನೆ ಬಿಟ್ಟು ಹೋಗುವಂತೆ ಮಾಡಿದ್ದೂ ಸಹ ಅತುಲ್. ಆತ ಮಾಡಿರುವ ಆರೋಪಗಳು ಸುಳ್ಳು, ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇನೆ. 2020ರಿಂದಲೂ ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಆತನ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ. ನೀವು ನನ್ನನ್ನು ಯಾಕೆ ಬಂಧಿಸಿದ್ದೀರಿ ಎಂಬುದೂ ಸಹ ನನಗೆ ಅರ್ಥವಾಗುತ್ತಿಲ್ಲ. ನಾನು ಕಾನೂನಾತ್ಮಕವಾಗಿ ಎಲ್ಲದಕ್ಕೂ ಉತ್ತರಿಸುತ್ತೇನೆ'' ಎಂದು ತನಿಖಾಧಿಕಾರಿಗಳ ಮುಂದೆ ನಿಖಿತಾ ಸಿಂಘಾನಿಯಾ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ: ಉತ್ತರ ಪ್ರದೇಶದ ಅತುಲ್ ಸುಭಾಷ್ (34) ಡಿ.9ರಂದು ಮಾರತ್ಹಳ್ಳಿಯ ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸುದೀರ್ಘ ಡೆತ್ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದರು. ಅತುಲ್ ಸುಭಾಷ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನನ್ವಯ ಆತನ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಬಾಮೈದ ಅನುರಾಗ್ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ವಿರುದ್ಧ ಭಾರತೀಯ ನ್ಯಾಯಸಂಹಿತೆ ಕಾಯ್ದೆ 108 (ಆತ್ಮಹತ್ಯೆಗೆ ಪ್ರಚೋದನೆ) ಆರೋಪದಡಿ ಮಾರತ್ಹಳ್ಳಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಹರಿಯಾಣದ ಗುರುಗ್ರಾಮದಲ್ಲಿ ನಿಖಿತಾ ಸಿಂಘಾನಿಯಾ, ಯುಪಿಯ ಪ್ರಯಾಗ್ರಾಜ್ನಲ್ಲಿ ಆಕೆಯ ತಾಯಿ ನಿಶಾ ಸಿಂಘಾನಿಯಾ ಹಾಗೂ ಅನುರಾಗ್ ಸಿಂಘಾನಿಯಾ ಅವರನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ನ್ಯಾಯ ಸಿಗುವವರೆಗೂ ಮಗನ ಚಿತಾಭಸ್ಮ ವಿಸರ್ಜಿಸಲ್ಲ: ಮೃತ ಟೆಕ್ಕಿ ಅತುಲ್ ಸುಭಾಷ್ ತಂದೆಯ ಮಾತು