ಬಹುಭಾಷಾ ನಟಿ ಇಲಿಯಾನಾ ಡಿ'ಕ್ರೂಜ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಾಗಿ ಮೌನ ವಹಿಸುತ್ತಾ ಬಂದಿದ್ದಾರೆ. ಸಂಗಾತಿ ಮೈಕೆಲ್ ಡೋಲನ್ ಬಗ್ಗೆ ದೀರ್ಘಕಾಲದವರೆಗೆ ಯಾವುದೇ ವಿಚಾರ ಹಂಚಿಕೊಂಡಿರಲಿಲ್ಲ. ಮೈಕೆಲ್ ಡೋಲನ್ ಅವರು ನಟಿಯ ಬಾಯ್ಫ್ರೆಂಡ್, ಇತ್ತೀಚೆಗೆ ಮದುವೆ ಆಗಿದ್ದಾರೆ ಎನ್ನುವ ಊಹಾಪೋಹಗಳಿತ್ತು. ಅದಾಗ್ಯೂ ನಟಿ ಇತ್ತೀಚೆಗೆ ಮೈಕೆಲ್ ಅವರೊಂದಿಗಿನ ತಮ್ಮ ವಿವಾಹವನ್ನು ಖಚಿತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಬಹುಭಾಷಾ ಅಭಿನೇತ್ರಿ, ಪತಿ ಬಗ್ಗೆ ತಮ್ಮ ಅಪಾರ ಮೆಚ್ಚುಗೆ, ಕೃತಘ್ಞತೆಗಳನ್ನ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಪರಿಚಿತರಾದಾಗಿನಿಂದಲೂ ಡೋಲನ್ ಅಪಾರ ಬೆಂಬಲ ನೀಡುತ್ತಾ ಬಂದಿದ್ದಾರೆಂದು ನಟಿ ತಿಳಿಸಿದರು. ತಮ್ಮ ಪ್ರಯಾಣವನ್ನು ವಿವರಿಸುತ್ತಾ, "ವೈವಾಹಿಕ ಜೀವನ ಸುಂದರವಾಗಿ ಸಾಗುತ್ತಿದೆ. ನಾನು ಅವರ ಯಾವ ಗುಣವನ್ನು ಹೆಚ್ಚು ಇಷ್ಟಪಡುತ್ತೇನೆಂಬುದನ್ನು ಹೇಳುವುದು ನಿಜವಾಗಿಯೂ ಕಷ್ಟ. ನಾನು ಯೋಚಿಸಬೇಕು. ಏಕೆಂದರೆ ನಾನು ಪ್ರತೀ ಬಾರಿ ಉತ್ತರ ಕೊಟ್ಟಾಗ ಏನಾದರೂ ಬಾಕಿ ಉಳಿದಿರುತ್ತದೆ ಎಂದು ನನಗನಿಸುತ್ತದೆ'' ಎಂದು ತಿಳಿಸಿದರು.
"ಅವರು ನನ್ನ ಕೆಟ್ಟ ಸಮಯಗಳಲ್ಲಿ, ಅದರಲ್ಲೂ ನನ್ನ ತೀರಾ ಕೆಟ್ಟ ಸಮಯಗಳಲ್ಲಿ ನನ್ನೊಂದಿಗಿದ್ದರು. ಸಂಪೂರ್ಣ ಬೆಂಬಲ ನೀಡಿದ್ದರು. ನನ್ನ ಕೆಲ ಉತ್ತಮ ಸಮಯಗಳಲ್ಲಿಯೂ ಜೊತೆಗಿದ್ದರು. ಅದು ನಿರಂತರ... ಮೊದಲ ದಿನದಿಂದಲೂ. ಅವರು ಪ್ರೀತಿಯ ಬೆಂಬಲ, ನಿರಂತರ, ಸ್ಥಿರ. ಇದು ದೋ ಔರ್ ದೋ ಪ್ಯಾರ್‌ನ ಡೈಲಾಗ್ನಂತಿದೆ'' ಎಂದು ವರ್ಣಿಸಿದ್ದಾರೆ.