ದ್ವಾರಕೀಶ್ ಕೇವಲ ಪ್ರಚಂಡ ಕುಳ್ಳ ಅಷ್ಟೇ ಆಗಿರಲಿಲ್ಲ. ಪ್ರಚಂಡ ಸಾಹಸಿಯೂ ಆಗಿದ್ದರು. ಇದಕ್ಕೆ ಹತ್ತು ಹಲವು ನಿದರ್ಶನಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲಿವೆ. ಅದರಲ್ಲಿ 'ಕುಳ್ಳ ಏಜೆಂಟ್ 000' ಚಿತ್ರದ ಕಥೆ ಕೂಡ ಒಂದು. ನಿರ್ಮಾಪಕನಾಗಿ ಗೆದ್ದ ದ್ವಾರಕೀಶ್ ಅವರು ಈ ಚಿತ್ರಕ್ಕೆ ನಾಯಕನಾಗಿದ್ದೇ ಬಹುರೋಚಕ.
ಹೌದು, ನಿಮಗೆ ಗೊತ್ತಿರಲಿ, 'ಮೇಯರ್ ಮುತ್ತಣ್ಣ' ಚಿತ್ರದ ಬಳಿಕ, ಡಾ.ರಾಜ್ಕುಮಾರ್ ಜೊತೆ ಮತ್ತೊಂದು ಸಿನಿಮಾ ಮಾಡಲು ದ್ವಾರಕೀಶ್ ಅಣಿಯಾಗಿದ್ದರು. ಆದರೆ, ಆ ಕಾಲಕ್ಕೆ ಡಾ.ರಾಜ್ಕುಮಾರ್ ಅವರ ಕಾಲ್ ಶೀಟ್ ಸಿಗುವುದು ಗಗನಕುಸುಮವಾಗಿತ್ತು. ಯಾಕೆಂದರೆ ಅಣ್ಣಾವ್ರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತಿದ್ದರು. ಇದರಿಂದಾಗಿ 'ಮೇಯರ್ ಮುತ್ತಣ್ಣ'ನಂತಹ ಬ್ಲಾಕ್ಬಸ್ಟರ್ ಚಿತ್ರವನ್ನು ಕೊಟ್ಟರೂ ಎರಡು ವರ್ಷಗಳ ಕಾಲ ನಿರ್ಮಾಣವನ್ನೇ ಮಾಡದ ದ್ವಾರಕೀಶ್, ಒಂದರ್ಥದಲ್ಲಿ ದಿಕ್ಕೆಟ್ಟಂತಾಗಿದ್ದರು. ಮುಂದೇನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರು. ಇದೇ ಸಮಯದಲ್ಲಿ ಡಾ.ರಾಜ್ಕುಮಾರ್ 'ಜೇಡರ ಬಲೆ' ಸಿನಿಮಾ ಮಾಡಿದರು. ಅವರು 'ಆಪರೇಶನ್ ಡೈಮಂಡ್ ರಾಕೆಟ್' ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಕನ್ನಡದ ಮೊದಲ 'ಜೇಮ್ಸ್ ಬಾಂಡ್' ಎಂಬ ಹೆಗ್ಗಳಿಕೆಗೆ ಡಾ.ರಾಜ್ ಕುಮಾರ್ ಪಾತ್ರವಾಗಿದ್ದರು.
ಇದನ್ನೂ ಓದಿ:ದ್ವಾರಕೀಶ್-ವಿಷ್ಣುವರ್ಧನ್ ಕಾಂಬಿನೇಷನ್‌ನಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರಗಳಿವು - Dwarakish Super Hit Films
ಇದೇ ಸಂದರ್ಭದಲ್ಲಿ ತೆರೆಗೆ ಬಂದ ಸಿನಿಮಾ 'ಆಪರೇಶನ್ ಲವ್ ಬರ್ಡ್ಸ್'. ಹಾಲಿವುಡ್‌ನ ಈ ಚಿತ್ರವನ್ನ ಮದ್ರಾಸಿನಲ್ಲಿ ನೋಡಿದ ದ್ವಾರಕೀಶ್ ಅವರಿಗೆ ತಾವ್ಯಾಕೆ ಜೇಮ್ಸ್ ಬಾಂಡ್ ಆಗಬಾರದು ಎನ್ನುವ ಆಲೋಚನೆ ಬಂತು. ಆಗ ಹುಟ್ಟಿದ ಚಿತ್ರವೇ 'ಕುಳ್ಳ ಏಜೆಂಟ್ 000'.
ದ್ವಾರಕೀಶ್ಗೆ ಹಲವರು ಸಾಥ್:ಡಾ.ರಾಜ್ ಕುಮಾರ್ ಇಲ್ಲದ ಸಿನಿಮಾವನ್ನು ನೋಡಲು ಜನರು ಹಿಂದೇಟು ಹಾಕುತ್ತಿದ್ದ ಕಾಲವದು. ಈ ಕಾರಣಕ್ಕೆ 'ಕುಳ್ಳ ಏಜೆಂಟ್ 000' ಮಾಡಲು ದ್ವಾರಕೀಶ್ ಮುಂದಾಗಿದ್ದರೂ ಕೂಡ ಚಿಕ್ಕ ಅಳುಕು ಅವರಲ್ಲಿ ಇದ್ದೇ ಇತ್ತು. ನಾಯಕನನ್ನಾಗಿ ತನ್ನನ್ನು ಪ್ರೇಕ್ಷಕರು ಸ್ವೀಕರಿಸುತ್ತಾರಾ ಅನ್ನುವ ಅನುಮಾನವಿತ್ತು. ಆದರೂ, ಆಗಿದ್ದಾಗಲಿ.. ಮಾಡಿಯೇ ಬಿಡೋಣ ಎಂದು ದ್ವಾರಕೀಶ್ ತೀರ್ಮಾನ ಮಾಡಿದಾಗ ಚಿತ್ರದ ಐಡಿಯಾ ಮೆಚ್ಚಿಕೊಂಡ ಚಂದೂಲಾಲ್ ಜೈನ್ ಸಹ ನಿರ್ಮಾಪಕನಾಗಿ ಸಾಥ್ ನೀಡಿದರು. ಚಿತ್ರವನ್ನು ನಾನೇ ನಿರ್ದೇಶನ ಮಾಡುತ್ತೇನೆ ಎಂದು ಕೆ.ಎಸ್.ಎಲ್.ಸ್ವಾಮಿ ಮುಂದೆ ಬಂದರು. ಇದರ ನಡುವೆ ಕನ್ನಡದ ಖ್ಯಾತ ನಿರ್ಮಾಪಕ ವೀರಾಸ್ವಾಮಿ ಅವರು ದ್ವಾರಕೀಶ್ ಅವರಿಗೆ ಆರ್ಥಿಕ ನೆರವು ನೀಡಿದರು. ದ್ವಾರಕೀಶ್ ಮೇಲಿನ ನಂಬಿಕೆಯಿಂದ ಆ ಕಾಲಕ್ಕೆ 1 ಲಕ್ಷ 20 ಸಾವಿರ ರೂಪಾಯಿಯನ್ನು ಅವರ ಕೈಗೆ ವೀರಾಸ್ವಾಮಿಯವರು ಕೊಟ್ಟಿದ್ದರಂತೆ.
ಇದನ್ನೂ ಓದಿ:ದ್ವಾರಕೀಶ್-ವಿಷ್ಣುವರ್ಧನ್ ಸ್ನೇಹ ಬಾಂಧವ್ಯ ಹೇಗಿತ್ತು ಗೊತ್ತಾ? ಒಂದು ನಿದರ್ಶನ! - Dwarakish And Vishnuvardhan