ಶಿವಮೊಗ್ಗ: ಜಿಲ್ಲೆಯಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಈ ತಾಣಗಳನ್ನು ಸರ್ಕ್ಯೂಟ್ ಮಾಡುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನಕ್ಕೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ಪ್ರವಾಸೋದ್ಯಮಗಳ ಸರ್ಕ್ಯೂಟ್ ಮಾಡುವ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಈ ಪ್ರಸ್ತಾವನೆಗೆ ಶೀಘ್ರದಲ್ಲೇ ಅನುಮೋದನೆ ಸಿಗುವ ಸಾಧ್ಯತೆಗಳಿವೆ.
'ಪ್ರವಾಸೋದ್ಯಮದ ಸರ್ಕ್ಯೂಟ್' ಎಂದರೇನು??: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಈ ತಾಣಗಳನ್ನು ಒಂದು ಗುಚ್ಚವಾಗಿ ನೀಡುವ ಅಥವಾ ಒಂದೇ ತರಹದ ಪ್ರವಾಸ ಸ್ಥಳಗಳನ್ನು ಒಂದಕ್ಕೊಂದು ಜೋಡಿಸುವ ಕೆಲಸಕ್ಕೆ ಸರ್ಕ್ಯೂಟ್ ಎನ್ನಲಾಗುತ್ತದೆ. ಇದನ್ನು ರೂಪಿಸಲು ಪ್ರವಾಸೋದ್ಯಮ ಇಲಾಖೆ ಮಾಡಲು ಮುಂದಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಶಿವನ ಪ್ರಸಿದ್ಧ ದೇವಾಲಯಗಳಿವೆ. ಹಾಗೆಯೇ ಪ್ರಸಿದ್ಧ ಜೈನ ಬಸದಿಗಳಿವೆ. ಈ ಯೋಜನೆಯಡಿ ಶಿವನ ದೇವಾಲಯ ಹಾಗೂ ಜೈನ ಬಸದಿಗಳ ಅಭಿವೃದ್ಧಿ ನಡೆಯಲಿದೆ. ಒಮ್ಮೆ ಒಂದು ಶಿವನ ದೇವಾಲಯಕ್ಕೆ ಭೇಟಿಯಾದರೆ, ಅದೇ ರೀತಿಯ ಇತರೆ ದೇವಾಲಯಗಳ ಬಗ್ಗೆ ಮಾಹಿತಿ ಒದಗಿಸುವುದು. ಆ ಮೂಲಕ ಆ ದೇವಾಲಯಗಳಿಗೂ ಭೇಟಿ ನೀಡುವಂತೆ ಪ್ರೋತ್ಸಾಹಿಸುವುದು. ಶಿವನ ದೇವಾಲಯಗಳ ದರ್ಶನ ಪಡೆಯುವವರಿಗೆ ಈ ಸರ್ಕ್ಯೂಟ್ ತುಂಬ ಅನುಕೂಲಕರವಾಗಲಿದೆ. ಈ ದೇವಾಲಯಗಳನ್ನು 'ಶಂಕರ ಸರ್ಕ್ಯೂಟ್' ಎಂದು ಹೆಸರಿಡಲು ನಿರ್ಧರಿಸಲಾಗಿದೆ.
ಅದೇ ರೀತಿ, ಜಿಲ್ಲೆಯಲ್ಲಿ ಅನೇಕ ಜೈನ ಬಸದಿಗಳಿವೆ. ಬಸದಿಗಳನ್ನು ಭೇಟಿ ಮಾಡುವ ಹಾಗೂ ಅವುಗಳ ಬಗ್ಗೆ ಅಧ್ಯಯನ ನಡೆಸುವವರಿಗೆ ಸರ್ಕ್ಯೂಟ್ ಪ್ರವಾಸ ಅನುಕೂಲಕರ. ಇಲ್ಲೂ ಸಹ ಬಸದಿಗಳನ್ನು ಅಭಿವೃದ್ದಿಪಡಿಸುವುದು, ಮೂಲಭೂತ ಸೌಕರ್ಯ ಹೆಚ್ಚಿಸುವುದು, ಆ ಬಸದಿ ಸೇರಿದಂತೆ ಸರ್ಕ್ಯೂಟ್‌ನಲ್ಲಿ ಇರುವ ಬಸದಿಗಳ ಸಂಪೂರ್ಣ ಮಾಹಿತಿ, ಮಹತ್ವವನ್ನು ಆಕರ್ಷಕವಾಗಿ ನೀಡುವುದು. ಒಂದು ಬಸದಿಯಿಂದ ಇನ್ನೊಂದು ಬಸದಿಗೆ ಇರುವ ಅಂತರ, ಮಾರ್ಗ, ವಾಹನದ ಸೌಲಭ್ಯವನ್ನು ಸೂಚಿಸುವುದು ಆಗಿದೆ.
ಸರ್ಕ್ಯೂಟ್ ಆಗಿ ಗುರುತಿಸಿರುವ ಶಂಕರನ ದೇವಾಲಯಗಳು: ಶಿವಮೊಗ್ಗ ತಾಲೂಕು ಮಲೆ ಶಂಕರ ದೇವಾಲಯ, ಹೊಸನಗರದ ಕೂಡೂರು ಶಂಕರ, ಅಬ್ಬೆ, ತೀರ್ಥಹಳ್ಳಿಯ ರಾಮೇಶ್ವರ ಹಾಗೂ ಹೊಸನಗರದ ಶಿವನ ದೇವಾಲಯಗಳು ಶಂಕರನ ಸರ್ಕ್ಯೂಟ್ನಲ್ಲಿವೆ.
ಜೈನ ಬಸದಿಗಳ ಸರ್ಕ್ಯೂಟ್: ಹೊಸನಗರ ಹಾಗೂ ಸಾಗರ ತಾಲೂಕಿನ ಜೈನ ಬಸದಿಗಳು, ಶರಾವತಿ ಹಿನ್ನೀರಿನಲ್ಲಿನ ಜೈನ ಬಸದಿಗಳ ಅಭಿವೃದ್ಧಿ.
ಶರಾವತಿ ಹಿನ್ನೀರಿನ ನಡುಗಡ್ಡೆಗಳ ಸರ್ಕ್ಯೂಟ್: ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಮುಳುಗಿದ ಅನೇಕ ಬೆಟ್ಟಗಳು ಈಗ ನಡುಗಡ್ಡೆಗಳಾಗಿವೆ. ಇವುಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸೌಕರ್ಯವನ್ನು ಒದಗಿಸಿ ಪ್ರವಾಸಿಗರಿಗೆ ಸರ್ಕ್ಯೂಟ್ ವ್ಯವಸ್ಥೆ ಒದಗಿಸುವುದು ಆಗಿದೆ.
ಪ್ರವಾಸಿಸ್ನೇಹಿ ಕೇಂದ್ರಗಳು: ಪ್ರವಾಸೋದ್ಯಮ ಇಲಾಖೆ ಈಗಾಗಲೇ ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ತಾಣಗಳಾದ ಸೊರಬ ತಾಲೂಕಿನ ಚಂದ್ರಗುತ್ತಿ ದೇವಾಲಯ, ಸಾಗರ ತಾಲೂಕಿನ ಸಿಗಂದೂರು ದೇವಾಲಯ ಹಾಗೂ ಹೊಸನಗರ ತಾಲೂಕಿನ ಅಮ್ಮನಘಟ್ಟ ದೇವಾಲಯಗಳನ್ನು ಪ್ರವಾಸಿಸ್ನೇಹ ಕೇಂದ್ರಗಳಾಗಿ ಗುರುತಿಸಿ, ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಒಳಗೊಂಡಿದೆ. ಹೊಸನಗರ ತಾಲೂಕಿನ ಅಮ್ಮನಘಟ್ಟ ದೇವಾಲಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿದೆ.
ಪ್ರವಾಸೋದ್ಯಮ ಇಲಾಖೆಯ ಸರ್ಕ್ಯೂಟ್ ರಚನೆ ಮಾಡುವ ಕುರಿತು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ನಿರ್ದೇಶಕ ಧರ್ಮಪ್ಪ ಮಾತನಾಡಿ, "ಸರ್ಕ್ಯೂಟ್ ಅಂದರೆ ಒಂದೇ ತರಹದ ಮಾನಸಿಕತೆಯುಳ್ಳ ಪ್ರವಾಸಿಗರು ಬಂದಾಗ ಅವರಿಗೆ ಸರ್ಕ್ಯೂಟ್ ದೇವಾಲಯ, ಜೈನ ಬಸದಿಗಳನ್ನು ತೋರಿಸುವ ಕೆಲಸವಾಗಿದೆ. ಈಗ ಹಾಲಿ ಇರುವ ಶಂಕನ ದೇವಾಲಯಗಳು ಹಾಗೂ ಜೈನ ಬಸದಿಗಳನ್ನು ಅಭಿವೃದ್ಧಿಪಡಿಸುವುದು, ಒಂದು ಕಡೆ ಶಂಕರನ ದೇವಾಲಯ ಅಥವಾ ಜೈನ ಬಸದಿಗಳಿಗೆ ಭೇಟಿ ನೀಡಿದರೆ, ಮುಂದೆ ಅದೇ ತರಹದ ದೇವಾಲಯ ಅಥವಾ ಜೈನ ಬಸದಿಗಳನ್ನು ನೋಡಲು ಹೋಗುವ ಅವಕಾಶ ಮಾಡಿಕೊಡುವುದಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ನಿರ್ಬಂಧದ ನಡುವೆ ಜೋಗ ನೋಡುವ ಪ್ರವಾಸಿಗರಿಗೆ ಗುಡ್ ನ್ಯೂಸ್! ಕಾರಣ ಹೀಗಿದೆ