ಮಾರ್ಟಿನ್ ಚಿತ್ರೀಕರಣ ಮುಕ್ತಾಯ ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಹಾಗೂ ಟಿಕೆಟ್ ಮಾರಾಟ ಹಾಗೂ ಟಿವಿ ರೈಟ್ಸ್ ವಿಚಾರದಲ್ಲಿ ಸಿನಿಮಾಗಳು ದಾಖಲೆ ಮಾಡುತ್ತವೆ. ಆದರೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷೆಯ ಮಾರ್ಟಿನ್ ಸಿನಿಮಾ ಈಗ ಶೂಟಿಂಗ್ ವಿಷ್ಯದಲ್ಲಿ ದಾಖಲೆ ಬರೆದಿದೆ. ಸದ್ಯ ಟೀಸರ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿಸಿರೋ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್.
ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ 'ಕೆಜಿಎಫ್ 1' ಚಿತ್ರವನ್ನು 140 ದಿನಗಳು ಶೂಟಿಂಗ್ ಮಾಡಲಾಯಿತು. ಅದೇ ರೀತಿ 'ಕೆಜಿಎಫ್ ಚಾಪ್ಟರ್ 2' ಚಿತ್ರವನ್ನು ಕೂಡ 150 ದಿನಗಳು ಚಿತ್ರೀಕರಣ ಮಾಡಲಾಗಿತ್ತು. ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರವನ್ನು 130 ದಿನಗಳ ಕಾಲ ಶೂಟಿಂಗ್ ಮಾಡಲಾಗಿತ್ತು. ಇನ್ನು ಕಾಂತಾರ ಚಿತ್ರವನ್ನು 80 ದಿನಗಳು ಹಾಗೂ ಕಬ್ಜ ಚಿತ್ರ ಕೂಡ 145 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು. ಆದರೀಗ 'ಮಾರ್ಟಿನ್' ಚಿತ್ರ ಈ ಎಲ್ಲ ಸಿನಿಮಾಗಳ ಚಿತ್ರೀಕರಣದ ದಾಖಲೆ ಮುರಿದಿದೆ.
ಹೌದು, 2021ರ ಆಗಸ್ಟ್ 15ರಂದು ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಚಿತ್ರದ ಶೂಟಿಂಗ್ ಪ್ರಾರಂಭವಾಗಿತ್ತು. ಶುರುವಾದಾಗ, ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಎ.ಪಿ. ಅರ್ಜುನ್ ಹೇಳಿದ್ದರು. ಆದರೆ, ಚಿತ್ರ ತಡವಾಗಿ, ಅಂದುಕೊಂಡಿದ್ದಕ್ಕಿಂತ ದೊಡ್ಡದಾಗಿ ಮುಕ್ತಾಯವಾಗಿದೆ. ಎರಡೂವರೆ ವರ್ಷಗಳಲ್ಲಿ 240 ದಿನಗಳ ಕಾಲ ಚಿತ್ರೀಕರಣ ಮಾಡುವ ಮೂಲಕ ಇತ್ತೀಚೆಗೆ ಟೊರಿನೋ ಫ್ಯಾಕ್ಟರಿಯಲ್ಲಿ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಾಗಿದೆ.
ಈ ಕುರಿತು ಮಾತನಾಡಿದ ನಿರ್ದೇಶಕ ಎ.ಪಿ. ಅರ್ಜುನ್, "ಎಷ್ಟು ದಿನ ಚಿತ್ರೀಕರಣ ಮಾಡುತ್ತೀರಾ? ಎಂದು ಎಲ್ಲರೂ ಕೇಳುತ್ತಿದ್ದರು. ಇಷ್ಟು ದಿನ ಆಗಬಹುದು ಎಂದು ನಾವು ಅಂದುಕೊಂಡಿರಲಿಲ್ಲ. ಚಿತ್ರ ಶುರು ಮಾಡಿದಾಗ ಬಜೆಟ್ 35 ರಿಂದ 40 ಕೋಟಿ ಇತ್ತು. 110 ದಿನಗಳಲ್ಲಿ ಚಿತ್ರೀಕರಣ ಮುಗಿಸಬೇಕು ಎಂದು ಕೊಂಡಿದ್ದೆವು. ಆದರೆ, 80-90 ದಿನಕ್ಕೆ ನಾವಂದುಕೊಂಡಿದ್ದ ಬಜೆಟ್ ರೀಚ್ ಆಯ್ತು. ಬಜೆಟ್ ನಮ್ಮ ಕೈಮೀರುತ್ತಿತ್ತು. ಒಂದೊಂದು ವಿಷಯವನ್ನು ಚೆನ್ನಾಗಿ ಮಾಡೋಣ ಅಂತ ಹೋಗಿ ಎಲ್ಲವೂ ದೊಡ್ಡದಾಯ್ತು. ಚಿತ್ರಕ್ಕೆ 18-20 ಸೆಟ್ ಹಾಕಿದ್ದೇವೆ. ಇನ್ನು, ಚಿತ್ರದ ಕ್ಲೈಮ್ಯಾಕ್ಸ್ 25 ದಿನಗಳಲ್ಲಿ ಮುಗಿಯಬಹುದು ಎಂಬ ಯೋಚನೆ ಇತ್ತು.
ಆದರೆ, 25 ದಿನ 52 ದಿನ ಆಯ್ತು. ಆ ಸಮಯದಲ್ಲಿ 'ಒಂದು ಸಿನಿಮಾ ಮಾಡಬಹುದು, ಆದರೆ, ನೀವು ಬರೀ ಕ್ಲೈಮ್ಯಾಕ್ಸ್ ಮಾಡುತ್ತಿದ್ದೀರಲ್ಲ' ಎಂದು ಹಲವರು ಹೇಳಿದ್ದರು. ಆದರೆ, ನಾವು ಬೇಡದ್ದೇನನ್ನೋ ಮಾಡಿಯೇ ಇಲ್ಲ. ಎಲ್ಲವನ್ನೂ ಯೋಚಿಸಿಯೇ ಸರಿಯಾಗಿ ಮಾಡಿದ್ದೇವೆ. ಆದರೆ, ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಆ ಲೆವೆಲ್‍ಗೆ ಮಾಡಬೇಕಿತ್ತು. ಆ ಭಯಕ್ಕಾಗಿ ತುಂಬಾ ತಯಾರಿ ಮಾಡಿಕೊಂಡು, ನಾವಂದು ಕೊಂಡಂತೆ ಮಾಡಿದ್ದೇವೆ. ಹಾಗಾಗಿ, 240 ದಿನ ಆಯ್ತು. ಈಗ ಒಂದು ಚಿತ್ರದ ಚಿತ್ರೀಕರಣಕ್ಕೆ 150 ದಿನ ಬೇಕಾಗುತ್ತದೆ. ನಮ್ಮದು ಇನ್ನೂ 100 ದಿನ ಜಾಸ್ತಿ ಆಯ್ತು. ಅದು ಜಾಸ್ತಿಯಾಗಿದ್ದು ಗುಣಮಟ್ಟಕ್ಕಾಗಿಯೇ ಹೊರತು ಬೇರೆ ಯಾವುದೇ ಕಾರಣಕ್ಕಲ್ಲ. ಪ್ಯಾನ್ ಇಂಡಿಯಾ ಚಿತ್ರವಾದ ಕಾರಣ. ಬಹಳ ಜವಾಬ್ದಾರಿಯಿಂದ ಮಾಡಿದ್ದೇವೆ" ಎಂದರು.
ಇನ್ನು, ಚಿತ್ರದ ಬಿಡುಗಡೆ ಯಾವಾಗ? ಎಂದು ಕೇಳಿದರೆ, ಗೊತ್ತಿಲ್ಲ ಎಂಬುದು ಅರ್ಜುನ್ ಅವರ ಉತ್ತರ. "ಎಲ್ಲ ಕೆಲಸ ಮುಗಿದಿದೆ. ಡಬ್ಬಿಂಗ್, ಶೂಟಿಂಗ್ ಎಲ್ಲ ಆಗಿದೆ. ರೀ - ರೆಕಾರ್ಡಿಂಗ್ ಮತ್ತು ಸಿಜಿ ಕೆಲಸ ಬಾಕಿ ಇದೆ. ರೀ-ರೆಕಾರ್ಡಿಂಗ್ ಮೂರು ತಿಂಗಳಲ್ಲಿ ಮುಗಿಯುತ್ತದೆ. ಸಿಜಿ ಕೆಲಸ ಯಾವಾಗ ಮುಗಿಯುತ್ತದೋ, ನಿರ್ಮಾಪಕರಿಗೆ ಯಾವ ದಿನಾಂಕ ಅನುಕೂಲವಾಗುತ್ತದೋ ನೋಡಿಕೊಂಡು ಚಿತ್ರ ಬಿಡುಗಡೆ ಮಾಡಬೇಕು. ಬರೀ ಕನ್ನಡ ಚಿತ್ರವಾದರೆ ಯಾವಾಗ ಬೇಕಾದರೂ ಬಿಡುಗಡೆ ಮಾಡಬಹುದು. ಆದರೆ, ಇದೊಂದು ಪ್ಯಾನ್ ಇಂಡಿಯಾ ಚಿತ್ರ. ಬೇರೆ ರಾಜ್ಯಗಳಲ್ಲಿ, ಆಯಾ ಚಿತ್ರರಂಗಗಳಲ್ಲಿ ಯಾವ ಚಿತ್ರಗಳು ಆಗ ಬಿಡುಗಡೆಗೆ ಸಜ್ಜಾಗಿವೆ ಎಂಬುದನ್ನೆಲ್ಲ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ" ಎಂದಿದ್ದಾರೆ ನಿರ್ದೇಶಕ ಅರ್ಜುನ್.
ಎಲ್ಲ ಸರಿ ಮಾರ್ಟಿನ್ ಚಿತ್ರದ ಬಜೆಟ್ ಎಷ್ಟು? ಈ ಪ್ರಶ್ನೆಗೆ ಉತ್ತರಿಸುವ ನಿರ್ಮಾಪಕ ಉದಯ್ ಮೆಹ್ತಾ, "ಈಗಷ್ಟೆ ಕುಂಬಳಕಾಯಿ ಒಡೆದಿದ್ದೇವೆ. ಇನ್ನೂ ಬಿಡುಗಡೆ ಬಾಕಿ ಇದೆ. ಮೊದಲು 110 ದಿನಗಳ ಚಿತ್ರೀಕರಣ, 40 ಕೋಟಿ ಬಜೆಟ್ ಎಂದು ಶುರುವಾಯಿತು. ಈಗ ಎಲ್ಲವೂ ಡಬ್ಬಲ್ ಆಗಿದೆ. ಇನ್ನು ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇದೆ. ಸಿನಿಮಾ ಬಿಡುಗಡೆ ಹೊತ್ತಿಗೆ ಒಂದು ಕ್ಲಾರಿಟಿ ಸಿಗುತ್ತದೆ. ಆಗ ಬಜೆಟ್ ಬಗ್ಗೆ ಹೇಳಬಹುದು" ಎಂದರು.
ಧ್ರುವ ಸರ್ಜಾ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಜೋಡಿಯಾಗಿದ್ದಾರೆ. ಮಾರ್ಟಿನ್ ಚಿತ್ರಕ್ಕೆ ರವಿ ವರ್ಮಾ, ಮಾಸ್ ಮಾದ, ರಾಮ್ ಲಕ್ಷ್ಮಣ್ ಮತ್ತು ಗಣೇಶ್ ಅವರ ಸಾಹಸ ನಿರ್ದೇಶನ, ಇಮ್ರಾನ್ ಸರ್ದಾರಿಯಾ ಮತ್ತು ಮುರಳಿ ಅವರ ನೃತ್ಯ ನಿರ್ದೇಶನವಿದೆ. ಮಣಿಶರ್ಮ ಸಂಗೀತ ಸಂಯೋಜಿಸಿದರೆ, ರವಿ ಬಸ್ರೂರು ಹಿನ್ನೆಲೆ ಸಂಗೀತ ಸಂಯೋಜಿಸುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಅವರ ಸಂಕಲನ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸದ್ಯ ಶೂಟಿಂಗ್ ವಿಷಯದಲ್ಲಿ ದಾಖಲೆ ಬರೆದ ಮಾರ್ಟಿನ್ ಚಿತ್ರ ಬಿಡುಗಡೆ ಯಾವಾಗ ಅನ್ನೋದು ಅಭಿಮಾನಿಗಳ ಪ್ರಶ್ನೆ ಆಗಿದೆ.
ಇದನ್ನೂ ಓದಿ:ಚೆಕ್ಬೌನ್ಸ್ ಪ್ರಕರಣ: 'ರಂಗನಾಯಕ' ಬಿಡುಗಡೆಗೆ ತಡೆ ಕೋರಿ ಕೋರ್ಟ್ಗೆ ಅರ್ಜಿ