ಮೈಸೂರು: ಮೈಸೂರು ವಿಶ್ವವಿದ್ಯಾಲಯದ 105ನೇ ಘಟಿಕೋತ್ಸವದಲ್ಲಿ ಸುಧಾಮೂರ್ತಿ ಸೇರಿದಂತೆ, ಇತರ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಜೊತೆಗೆ, ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಲಾಯಿತು.
ಉನ್ನತ ಶಿಕ್ಷಣ ಸಚಿವ ಸುಧಾಕರ್, ಹಾಗೂ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳು ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ನೀಡಿದರು.
ಈ ಬಾರಿ ಘಟಿಕೋತ್ಸವದಲ್ಲಿ 31,689 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ. ಈ ಬಾರಿ ಯುವತಿಯರೇ ಮೇಲುಗೈ ಸಾಧಿಸಿದ್ದು, ಅದರಲ್ಲಿ 20,202 ಯುವತಿಯರು, 11,667 ಯುವಕರು ಪದವಿ ಪಡೆದರೆ, ವಿವಿಧ ವಿಷಯಗಳಲ್ಲಿ 111 ಅಭ್ಯರ್ಥಿಗಳು ಪಿಹೆಚ್ಡಿ ಪದವಿ ಗಳಿಸಿದರು. ಒಟ್ಟು 413 ಪದಕಗಳು, ಹಾಗೂ 208 ಬಹುಮಾನಗಳನ್ನು, 216 ಅಭ್ಯರ್ಥಿಗಳಿಗೆ ಪ್ರದಾನ ಮಾಡಲಾಯಿತು. ಹಾಗೂ 6,300 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ, 25,085 ಸ್ನಾತಕ ಪದವಿಗಳನ್ನು ನೀಡಲಾಯಿತು.
ಮೂವರಿಗೆ ಗೌರವ ಡಾಕ್ಟರೇಟ್: ಈ ಘಟಿಕೋತ್ಸವದಲ್ಲಿ ಮಾಜಿ ಸಂಸದ ಡಾ.ಎಂ.ಸಿ.ಷಣ್ಮುಗಂ, ಸಾರಿಗೆ ಮತ್ತು ಸಂಚಾರಿ ಇಂಜಿನಿಯರಿಂಗ್ ಉಪಾಧ್ಯಕ್ಷ ಡಾ.ಬಾಬು ಕೆ.ವೀರೆಗೌಡ ಹಾಗೂ ಗೋಬ್ಬಲ್ ಸಿಇಒ, ಮತ್ತು ಮ್ಯಾನೇಜರ್ ಶಾಷಿದ್ ಮಜ್ಜಿದ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಇದರ ಜೊತೆಗೆ 2020ರಲ್ಲಿ ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಘೋಷಣೆಯಾಗಿದ್ದ ಸುಧಾಮೂರ್ತಿ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿರಲಿಲ್ಲ. ಇಂದು ಅವರು ಸಹ ಗೌರವ ಡಾಕ್ಟರೇಟ್ ಸ್ವೀಕರಿಸಿದರು.
ಸುಧಾಮೂರ್ತಿ ಹೇಳಿದ್ದೇನು?: "2020ರಲ್ಲಿ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿತ್ತು. ಕೋವಿಡ್ ಕಾರಣದಿಂದ ಡಾಕ್ಟರೇಟ್ ಸ್ವೀಕಾರ ಮಾಡಿರಲಿಲ್ಲ. ಈಗ ಸ್ವೀಕಾರ ಮಾಡಿದ್ದೇನೆ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಜೊತೆ ಡಾಕ್ಟರೇಟ್ ಸ್ವೀಕಾರ ಮಾಡಿದ್ದು ಸಂತಸ ತಂದಿದೆ. ಒಬ್ಬೊಬ್ಬ ವಿದ್ಯಾರ್ಥಿಗಳು 18, 16 ಗೋಲ್ಡ್ ಮೆಡಲ್ ಪಡೆದಿದ್ದಾರೆ. ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ಈ ಸಾಧನೆ ಸಂತಸ ತಂದಿದೆ. ಮೈಸೂರು ವಿಶ್ವವಿದ್ಯಾಲಯ ಪುರಾತನ ಇತಿಹಾಸ ಹೊಂದಿದೆ. ಇಲ್ಲಿ ಡಾಕ್ಟರೇಟ್ ಪಡೆದಿದ್ದು ಖುಷಿ ತಂದಿದೆ. ಹೆಣ್ಣು ಮಕ್ಕಳ ಸಾಧನೆಯಿಂದ ದೇಶಕ್ಕೆ ಒಳಿತಾಗುತ್ತದೆ" ಎಂದು ಹರ್ಷ ವ್ಯಕ್ತಪಡಿಸಿದರು.
18 ಚಿನ್ನದ ಪದಕ ಪಡೆದ ಭೂಮಿಕಾ ಪ್ರತಿಕ್ರಿಯೆ: "ಎಂಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ ಓದಿ ಇಂದು ನಾನು 18 ಚಿನ್ನದ ಪದಕಗಳು ಹಾಗೂ ನಾಲ್ಕು ನಗದು ಬಹುಮಾನಗಳನ್ನು ಪಡೆದುಕೊಂಡಿದ್ದೇನೆ. ಇಂದು ನನಗೆ ತುಂಬಾ ಖುಷಿಯಾಗುತ್ತಿದೆ. ಇದು ನನ್ನ ಹಠವಾಗಿತ್ತು, ನನ್ನ ಬಹುದಿನದ ಕನಸನ್ನು ನನಸು ಮಾಡಿದ್ದೇನೆ. ನಾನು ಪಟ್ಟ ಪ್ರಯತ್ನಕ್ಕೆ ಇದು ತೃಪ್ತಿಯಾಗಿದೆ" ಎಂದು ವಿದ್ಯಾರ್ಥಿನಿ ಭೂಮಿಕಾ ಎಂ.ಆರ್. ಹೇಳಿದರು.
"ಮಾನಸ ಗಂಗೋತ್ರಿಯ ಕ್ಯಾಂಪಸ್ ಲೈಬ್ರರಿಯಲ್ಲಿ ಜಾಸ್ತಿ ಓದುತ್ತಿದ್ದೆ, ನಾನು ಮನೆಗಿಂತ ಹೆಚ್ಚು ಅಲ್ಲೇ ಓದಿದ್ದು. ಅದು ನನಗೆ ಓದಲು ನೆಮ್ಮದಿಯ ತಾಣವಾಗಿತ್ತು. ನನಗೆ ತಂದೆ ಇಲ್ಲ, ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ನಾನು ಬಿಎಸ್ಸಿ ಓದಬೇಕಾದರೆ ನನ್ನ ತಂದೆಯನ್ನು ಕಳೆದುಕೊಂಡೆ. ಅವರು ಒಮ್ಮೆ ನಮ್ಮ ತಾಯಿಗೆ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್ ತೋರಿಸಿ, ಇಲ್ಲಿ ನನ್ನ ಮಗಳಿಗೆ ಸನ್ಮಾನ ಆಗುತ್ತದೆ ಎಂದು ಹೇಳಿದ್ದರು. ಅವರ ಆಸೆಯಂತೆ ನಾನು ಅದನ್ನು ಜವಾಬ್ದಾರಿಯಾಗಿ ತೆಗೆದುಕೊಂಡು ನನಸು ಮಾಡಿದ್ದೇನೆ" ಎಂದರು.
"ನಮ್ಮ ಕುಟುಂಬ ನನಗೆ ಬಹಳಷ್ಟು ಸಹಾಯ ಮಾಡಿದೆ. ನಮ್ಮ ಕುಟುಂಬದಲ್ಲೂ ಕಷ್ಟಗಳು ಇತ್ತು. ಅದನ್ನು ನಮ್ಮ ಶಿಕ್ಷಕರು ಕೂಡಾ ಕೇಳುತ್ತಿದ್ದರು. ಅವರು ಪಾಠ ಮಾಡುವುದು ಅಷ್ಟೇ ಅಲ್ಲದೇ ನನಗೆ ಜೀವನದ ಪಾಠವನ್ನು ಮಾಡುತ್ತಿದ್ದರು. ಅವರ ಬೆಂಬಲದಿಂದ ನಾನು ಇಂದು ಮೊದಲ ರ‍್ಯಾಂಕ್ ಬಂದಿದ್ದೇನೆ. ನಾನು 10ನೇ ತರಗತಿಯಲ್ಲೂ ಚಿನ್ನದ ಪದಕ ಪಡೆದುಕೊಂಡಿದ್ದೆ, ಬಳಿಕ ಶೇಷಾದ್ರಿಪುರಂ ಪಿಯು ಕಾಲೇಜಿನಲ್ಲಿ ಡಿಸ್ಟಿಂಕ್ಷನ್ ಬಂದಿದ್ದೆ. ನಂತರ ಮಹಾರಾಣಿ ಕಾಲೇಜಿನಲ್ಲಿ ಬಿಎಸ್ಸಿ ಮಾಡಿದೆ. ಆವಾಗಲೂ ಮೊದಲ ರ‍್ಯಾಂಕ್ ಬಂದಿದ್ದೆ. ಇಂದು ಕೂಡಾ ಎಂಸ್ಸಿಯಲ್ಲಿ ಫಸ್ಟ್ ರ‍್ಯಾಂಕ್ ಪಡೆದುಕೊಂಡಿದ್ದೇನೆ" ಎಂದು ಭೂಮಿಕಾ ವಿವರಿಸಿದರು.
"ಬಿಎಸ್ಸಿ ಮೊದಲ ಸೆಮಿಸ್ಟರ್ ಓದಬೇಕಾದರೆ ನನ್ನ ತಂದೆಯನ್ನು ಕಳೆದುಕೊಂಡೆ, ಅವಾಗ ಮನೆಯ ಜವಾಬ್ದಾರಿ ನನ್ನ ಮೇಲೆ ಬಂತು. ಪರೀಕ್ಷೆ ಬರೆಯಲು ಸಹ ಆಗುತ್ತಿರಲಿಲ್ಲ. ಬರೆಯುವುದು ಬೇಡ ಎಂದೇ ನಿರ್ಧಾರ ಮಾಡಿದ್ದೆ, ಆದರೆ, ನನ್ನ ಅಮ್ಮ ಒತ್ತಾಯ ಮಾಡಿದರು. ಆವಾಗ ಪದವಿಯಲ್ಲಿ 9.9 CGPA ಬಂತು. ಅಂದು ನಿರ್ಧಾರ ಮಾಡಿ ನನ್ನ ಓದನ್ನು ಮುಂದುವರೆಸಿಕೊಂಡು ಬಂದೆ. ಮುಂದೆ ರಸಾಯನಶಾಸ್ತ್ರದಲ್ಲಿ ಪಿಹೆಚ್ಡಿ ಮಾಡುವ ಆಸೆ ಇದೆ. ಮನೆಯಲ್ಲಿ ಐಎಎಸ್ ಮಾಡು ಎಂದು ಹೇಳುತ್ತಿದ್ದಾರೆ. ಅದರ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಕೆ - ಸೆಟ್ ಪರೀಕ್ಷೆ ಕೂಡ ಪಾಸ್ ಮಾಡಿದ್ದೇನೆ" ಎಂದು ಕನಸನ್ನು ಹಂಚಿಕೊಂಡರು.
ಅಂಧ ವಿದ್ಯಾರ್ಥಿನಿಯ ಚಿನ್ನದ ಸಾಧನೆ: ಚಿನ್ನದ ಪದಕ ಪಡೆದ ಅಂಧ ವಿದ್ಯಾರ್ಥಿನಿ ಬಸಮ್ಮ ಗುರಯ್ಯ ಮಠದ್ ಮಾತನಾಡಿ, "ನನ್ನ ಅಚುಮೆಚ್ಚಿನ ವಿಷಯ ರಾಜ್ಯಶಾಸ್ತ್ರದಲ್ಲಿ ಒಂದು ಚಿನ್ನದ ಪದಕ ಪಡೆದುಕೊಂಡಿದ್ದೇನೆ. ಹುಟ್ಟಿನಿಂದಲೇ ನನಗೆ ಎರಡು ಕಣ್ಣುಗಳು ಕಾಣಿಸುವುದಿಲ್ಲ. ನಾನು ತರಗತಿಗಳನ್ನು ಏಕಾಗ್ರತೆಯಿಂದ ಕೇಳುತ್ತಿದ್ದೆ. ಜೊತೆಗೆ, ಯೂಟ್ಯೂಬ್ ವಿಡಿಯೋಗಳು ಹಾಗೂ PDF intsa ರೀಡರ್ ಅಪ್ಲಿಕೇಶನ್ ಮೂಲಕ ಕೇಳಿಸಿಕೊಂಡು ಅಧ್ಯಯನ ನಡೆಸುತ್ತಿದ್ದೆ. ಆಧುನಿಕ ತಂತ್ರಜ್ಞಾನವನ್ನು ಹೆಚ್ಚಿಗೆ ಬಳಸಿಕೊಂಡು ಅಧ್ಯಯನ ಮಾಡುತ್ತಿದ್ದೆ" ಎಂದು ತಿಳಿಸಿದರು.
"ನಾನು ಒಂದನೇ ತರಗತಿಯಿಂದ, ದ್ವೀತಿಯ ಪಿಯುಸಿವರೆಗೂ ಬ್ರೈಲ್ನಲ್ಲಿ ಅಧ್ಯಯನ ಮಾಡುತ್ತಿದ್ದೆ. ನಂತರ ನನ್ನ ತಾಯಿ ನನಗೆ ಸಹಾಯ ಮಾಡುತ್ತಿದ್ದರು. ನಮ್ಮದು ಮೂಲತಃ ಬೆಳಗಾವಿ. ಇಲ್ಲಿ ಹಾಸ್ಟೆಲ್ನಲ್ಲಿ ಇದ್ದೆ, ಅಲ್ಲಿ ನನ್ನ ಕೊಠಡಿಯ ಸಹಪಾಠಿಗಳು ಕೂಡಾ ನನಗೆ ಸಹಾಯ ಮಾಡುತ್ತಿದ್ದರು. ಇಂದು ನನಗೆ ತುಂಬಾ ಸಂತೋಷವಾಗುತ್ತಿದೆ, ಮುಂದೆ ಇಂಡಿಯನ್ ಫಾರಿನ್ ಸರ್ವಿಸ್ ಮಾಡುವ ಆಸೆ ಇದೆ. ಅದಕ್ಕಾಗಿ ಓದುತ್ತೇನೆ. ಈ ಮೈಸೂರು ವಿಶ್ವವಿದ್ಯಾಲಯಕ್ಕೆ ಬರಲು ಕುವೆಂಪು ಅವರೇ ಪ್ರೇರಣೆ. ಅವರ ಸಾಹಿತ್ಯ ಮತ್ತು ಅವರ ವ್ಯಕ್ತಿತ್ವ ಬಹಳ ಇಷ್ಟ" ಎಂದು ಹೇಳಿದರು.
"509 ವಚನಗಳನ್ನು ಒಮ್ಮೆಲೇ ಹೇಳಿದ ಕಾರಣ ವಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದಿದೆ. ಕನ್ನಡ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಕವಿತೆಗಳನ್ನು ಬರೆಯುತ್ತೇನೆ. ಅದಕ್ಕಾಗಿ ಪ್ರಶಸ್ತಿಗಳು ಕೂಡ ಲಭಿಸಿವೆ. ನಾಗನೂರು ರುದ್ರಾಕ್ಷಿ ಮಠದಿಂದ ಬಾಲ್ಯ ಯೋಗಿ ಎಂಬ ಪ್ರಶಸ್ತಿ ಬಂದಿದೆ. NET ಮತ್ತು K -SET ಎರಡು ಪರೀಕ್ಷೆಗಳನ್ನು ಕೂಡ ಪಾಸ್ ಮಾಡಿದ್ದೇನೆ. ಮುಂದೆ PHD ಮಾಡಿ IFC ಪಡೆದುಕೊಂಡು ವಿದೇಶಕ್ಕೆ ಹೋಗುವ ಕನಸು ಇದೆ" ಎಂದು ಮನದಾಸೆ ಬಿಚ್ಚಿಟ್ಟರು.
ಬಸಮ್ಮರ ತಾಯಿ ರಾಜೇಶ್ವರಿ ಹೇಳಿದ್ದೇನು?: "ನನ್ನ ಮಗಳು ಬೆಳಗಾವಿಯಿಂದ ಮೈಸೂರಿಗೆ ಬಂದು ಈ ಸಾಧನೆ ಮಾಡಿರುವುದು ಹೆಮ್ಮೆ ಆಗುತ್ತಿದೆ. ಹುಟ್ಟಿನಿಂದಲೂ ಅವಳಿಗೆ ಪ್ರತಿಶತ ಅಂಧತ್ವದ ಸಮಸ್ಯೆ ಇದೆ. ಆದರೆ ನಾನು ಅವಳಿಗೆ ಈ ಸಮಸ್ಯೆಯನ್ನು ಇಟ್ಟುಕೊಂಡು ಹೇಗೆ ಸಾಧನೆ ಮಾಡಬೇಕು ಎಂಬುದನ್ನು ಹೇಳುತ್ತಲೇ ಬರುತ್ತಿದ್ದೆ. ನಾನು ಹೇಳುವುದನ್ನು ಕೇಳಿ ಇಂದು ಸಾಧನೆ ಮಾಡಿದ್ದಾಳೆ. ಬ್ರೈಲ್ ಕಲಿಯುವ ಮೂಲಕ ಯಾವಾಗಲೂ ತರಗತಿಯಲ್ಲಿ ಮೊದಲು ಬರುತ್ತಿದ್ದಳು. ಅವಳು ಮುಂದೆ ಏನು ಮಾಡಬೇಕು ಎನ್ನುತ್ತಾಳೋ, ಅದಕ್ಕೆ ನಾವು ಇಲ್ಲ ಎನ್ನುವುದಿಲ್ಲ, ಬೆಂಬಲವಾಗಿ ನಿಲ್ಲುತ್ತೇವೆ" ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ: ಮೈಸೂರು: ಸುಧಾ ಮೂರ್ತಿ, ಗಿರಿಜಾ ಲೋಕೇಶ್, ಸಾಧುಕೋಕಿಲ ಸೇರಿ 13 ಸಾಧಕರಿಗೆ ಗೌರವ ಡಾಕ್ಟರೇಟ್