ಮೈಸೂರು: ಮದುವೆ ಸಿದ್ಧತೆಯಲ್ಲಿರುವ ನಟ ಡಾಲಿ ಧನಂಜಯ್ ಅವರು ಇಂದು ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಲಗ್ನ ಪತ್ರಿಕೆ ಇಟ್ಟು ವಿಶೇಷ ಪೂಜೆ: ನಂಜುಂಡೇಶ್ವರ ದೇವಸ್ಥಾನದಲ್ಲಿ ನಟ ಡಾಲಿ ಧನಂಜಯ್ ಅವರು ಲಗ್ನ ಪತ್ರಿಕೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ನಂಜುಂಡಸ್ವಾಮಿ, ಪಾರ್ವತಮ್ಮ, ಚಂಡಿಕೇಶ್ವರ, ಗಣಪತಿ, ನಾರಾಯಣಸ್ವಾಮಿ, ಸುಬ್ರಹ್ಮಣ್ಯ ದೇವಾಲಯಗಳ ಪ್ರದರ್ಶನ ಹಾಕಿದರು.
ವಿವಾಹ ಸಮಾರಂಭದ ಹಿನ್ನೆಲೆಯಲ್ಲಿ ಇಂದು ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ್ದೇನೆ. ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರಿಗೆ ಮದುವೆಗೆ ಆಮಂತ್ರಣ ಪತ್ರಿಕೆ ಆಹ್ವಾನ ನೀಡಿದ್ದೇನೆ ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ.
ಡಾಲಿ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು: ದೇವಾಲಯದ ಬಳಿ ನಟ ಡಾಲಿ ಧನಂಜಯ್ ಆಗಮನ ಸುದ್ದಿ ತಿಳಿದು ಅವರನ್ನು ನೋಡಲು ನೂರಾರು ಅಭಿಮಾನಿಗಳು ದೇವಾಲಯದ ಬಳಿ ಆಗಮಿಸಿದ್ದರು. ಈ ವೇಳೆ, ನೆಚ್ಚಿನ ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.
ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಶಂಕರ್, ರಾಜೇಶ್ ಸೇರಿದಂತೆ ಹಲವರು ಹಾಜರಿದ್ದರು. ಕಳೆದ ತಿಂಗಳು ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ಅವರು ತಮ್ಮ ಲಗ್ನ ಪತ್ರಿಕೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ನಂಜುಂಡೇಶ್ವರನ ಆರ್ಶೀವಾದ ಪಡೆದುಕೊಂಡಿದ್ದಾರೆ.
ಮೈಸೂರಲ್ಲಿ ಮದುವೆ: 2025ರ ಫೆಬ್ರವರಿ 16ರಂದು ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ನೆರವೇರಲಿದೆ. ಶನಿವಾರ (ಫೆ.15) ಆರತಕ್ಷತೆ ನಡೆದರೆ, ಭಾನುವಾರ ವಿವಾಹ ಅದ್ಧೂರಿಯಾಗಿ ಜರುಗಲಿದೆ. ಸಮಾರಂಭಕ್ಕೆ ಸಿನಿಮಾ ಮತ್ತು ರಾಜಕೀಯ ಗಣ್ಯರು ಬಂದು ಸೇರುವ ನಿರೀಕ್ಷೆಯಿದೆ.
ಈಗಾಗಲೇ ಧನಂಜಯ್ ಮತ್ತು ಧನ್ಯತಾ ಅವರು ಸಿನಿಮಾ ಮತ್ತು ರಾಜಕೀಯ ಗಣ್ಯರ ಮನೆಗೆ ಜೊತೆಯಾಗಿ ಭೇಟಿ ನೀಡಿ, ಮದುವೆಗೆ ಆಹ್ವಾನಿಸಿದ್ದಾರೆ.
ಲವ್ ಕಮ್ ಅರೇಂಜ್ ಮ್ಯಾರೇಜ್ ಆಗುತ್ತಿರುವ ಧನಂಜಯ್, ಬಹಳ ವಿಭಿನ್ನ ವಿಡಿಯೋ ಶೂಟ್ ಮೂಲಕ ತಮ್ಮ ಭಾವಿ ಪತ್ನಿಯನ್ನು ಪರಿಚಯಿಸಿದ್ದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ನೀಡಿ ಗಮನ ಸೆಳೆದಿದ್ದರು. ನಂತರ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ನಿವಾಸಕ್ಕೆ ತೆರಳಿ ಮದುವೆ ಆಮಂತ್ರಣ ಪತ್ರ ನೀಡಿ, ಆಶೀರ್ವಾದ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ
ಇದನ್ನೂ ಓದಿ: ಸಿಎಂಗೆ ಮದುವೆ ಕರೆಯೋಲೆ ನೀಡಿದ ನಟ ಧನಂಜಯ್: ಆಮಂತ್ರಣ ಪತ್ರ ಹೇಗಿದೆ ನೋಡಿ