ಭಾರತೀಯ ಚಿತ್ರರಂಗದ ಅತ್ಯಂತ ಬಹುಬೇಡಿಕೆ ನಟ ತಲೈವಾ ರಜನಿಕಾಂತ್ ತಮ್ಮ ಮುಂದಿನ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಈ ಮಧ್ಯೆ ಬೆಂಗಳೂರಿನ ಎಪಿಎಸ್ ಹೈಸ್ಕೂಲ್, ಕಾಲೇಜು ದಿನಗಳನ್ನು ಮೆಲುಕು ಹಾಕಿದ್ದಾರೆ.
5 ನಿಮಿಷ 24 ಸೆಕೆಂಡುಗಳುಳ್ಳ ವಿಡಿಯೋದಲ್ಲಿ ನಟ ರಜನಿಕಾಂತ್ ಕನ್ನಡದಲ್ಲಿ ಮಾತನಾಡಿದ್ದಾರೆ. ಎಲ್ಲರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದ ಸೂಪರ್ ಸ್ಟಾರ್, ಬ್ಯಾಂಕಾಕ್ನಲ್ಲಿ ಶೂಟಿಂಗ್ ನಡೆಯುತ್ತಿದೆ. ಇಲ್ಲಿಂದ ಮಾತನಾಡುತ್ತಿದ್ದೇನೆ. ಶಾಲೆ ಬಗ್ಗೆ ಮಾತನಾಡೋದು ತುಂಬಾನೇ ಸಂತೋಷ. ಎಪಿಎಸ್ ಶಾಲೆ ಮತ್ತು ಕಾಲೇಜಿನಲ್ಲಿ ಓದಿರುವ ಗರ್ವ ನನಗಿದೆ. ತುಂಬಾನೆ ಹೆಮ್ಮೆ ಇದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ತಮ್ಮ APS ಸ್ಕೂಲ್-ಕಾಲೇಜು ದಿನಗಳನ್ನು ನೆನಪಿಸಿಕೊಂಡ @rajinikanth #Rajini #Rajinikanth pic.twitter.com/1eei2Krvi6
— ಎಸ್ ಶ್ಯಾಮ್ ಪ್ರಸಾದ್ | S Shyam Prasad (@ShyamSPrasad) January 18, 2025
ಪ್ರಾಥಮಿಕ ಶಾಲೆಯಲ್ಲಿ ಕ್ಲಾಸ್ಗೆ ನಾನೇ ಫಸ್ಟ್: ಪ್ರಾಥಮಿಕ ಶಾಲಾ ದಿನಗಳಲ್ಲಿ ತುಂಬಾ ಚೆನ್ನಾಗಿ ಕಲಿಯುತ್ತಿದ್ದೆ. ಕ್ಲಾಸ್ಗೆ ಫಸ್ಟ್. ನಾನೇ ಕ್ಲಾಸ್ ಮಾನಿಟರ್. ಮಿಡಲ್ ಸ್ಕೂಲ್ನಲ್ಲಿ 98 ಪರ್ಸೆಂಟ್ ಮಾರ್ಕ್ಸ್ ಪಡೆದು ಪಾಸಾಗಿದ್ದೆ. ಒಳ್ಳೆ ಮಾರ್ಕ್ ಇದೆ ಎಂದು ಎಪಿಎಸ್ನಲ್ಲಿ ಕಲಿಯಲು ಅವಕಾಶ ಸಿಕ್ತು. ಕನ್ನಡ ಮೀಡಿಯಂನಿಂದ ಇಂಗ್ಲೀಷ್ಗೆ ಸೇರಿಸಿಬಿಟ್ರು.
ಇದನ್ನೂ ಓದಿ: ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ: ಛತ್ತೀಸ್‌ಗಢದಲ್ಲಿ ಆರೋಪಿ ವಶಕ್ಕೆ!
ಮೊದ ಮೊದಲು ಇಂಗ್ಲಿಷ್ ಕಲಿಯೋಕೆ ತುಂಬಾನೇ ಕಷ್ಟ ಆಯ್ತು: ಮೊದಲು ತುಂಬಾನೇ ಕಷ್ಟವಾಯ್ತು. ಫಸ್ಟ್ ಬೆಂಚ್ ಸ್ಟುಡೆಂಟ್ ಲಾಸ್ಟ್ ಬೆಂಚ್ಗೆ ಬಂದ್ಬಿಟ್ಟೆ. ಡಿಪ್ರೆಶನ್ ಆಗ್ಬಿಡ್ತು. ತುಂಬಾನೆ ಕಷ್ಟವಾಗ್ತಿತ್ತು. ಆದ್ರೆ ಎಪಿಎಸ್ ಶಿಕ್ಷಕರು ನನ್ನ ಮೇಲೆ ಕರುಣೆ ತೋರಿದರು. ನನ್ನ ಕಷ್ಟವನ್ನು ಅರ್ಥ ಮಾಡ್ಕೊಂಡ್ರು. ಪ್ರೇಮದಿಂದ ಪಾಠ ಹೇಳಿಕೊಟ್ರು. 8ನೇ ಮತ್ತು 9ನೇ ತರಗತಿ ಪಾಸ್ ಆಯ್ತು. ಆದ್ರೆ 10th ಪಬ್ಲಿಕ್ ಎಕ್ಸಾಂ.... ಪಿಸಿಎಂ ನಲ್ಲಿ ತುಂಬಾನೇ ವೀಕ್ ಇದ್ದೆ. ಆ ಸಬ್ಜೆಕ್ಟ್ನಲ್ಲಿ ಫೇಲ್ ಆದೆ. ಆಗ ಓರ್ವ ಶಿಕ್ಷಕರು ನನಗೆ ಸ್ಪೆಷಲ್ ಕ್ಲಾಸ್ ಕೊಟ್ರು ಎಂದು ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸೂಟ್ಕೇಸ್ನಲ್ಲಿದೆ ಸ್ಪರ್ಧಿಗಳ ಭವಿಷ್ಯ!; ಬಿಗ್ ಬಾಸ್ನಲ್ಲಿ ಇಂದು ಒಬ್ಬರು ಎಲಿಮಿನೇಟ್, ನಾಳೆ ಮತ್ತೊಬ್ಬರು!
ಫ್ರೀಯಾಗಿ ನನಗೆ ಸ್ಪೆಷಲ್ ಕ್ಲಾಸ್ ಕೊಟ್ರು. ನಂತರ ಆ ಸಬ್ಜೆಕ್ಟ್ ಪಾಸ್ ಮಾಡಿಕೊಂಡೆ. ಮಾರ್ಕ್ ಕಡಿಮೆ ಇದ್ರೂ ಕಾಲೇಜಿಗೆ ಎಪಿಎಸ್ ನಲ್ಲೇ ಸೇರಿದೆ. ಬಳಿಕ ಕೆಲ ಕಾರಣಗಳಿಂದ ಕಂಟಿನ್ಯೂ ಮಾಡಲು ಸಾಧ್ಯವಾಗಲಿಲ್ಲ.
ಹೈಸ್ಕೂಲ್ ಟೈಮ್ನಲ್ಲಿ ಈವೆಂಟ್ಗಳು ನಡೆಯುತ್ತಿದ್ದವು. ನಾನು ಕಥೆ ಹೇಳುವುದರಲ್ಲಿ ಪರಿಣಿತನಾಗಿದ್ದೆ. ಕ್ಲಾಸ್ಗೆ ಶಿಕ್ಷಕರು ಬರೋದು ಲೇಟ್ ಆದ್ರೆ ನಾನು ಕಥೆ ಹೇಳುತ್ತಿದ್ದೆ. ನನ್ನ ಸಹಪಾಠಿಗಳಿಗೆ ಇಷ್ಟ ಆಗ್ತಿತ್ತು, ಶಿಕ್ಷಕರಿಗೂ ಈ ವಿಷಯ ತಲುಪಿತ್ತು.
ಸ್ಕೂಲ್ ನಲ್ಲಿ ಮಾಡಿದ ಡ್ರಾಮಾಗೆ ಫಸ್ಟ್ ಪ್ರೈಸ್ ಬಂದಿತ್ತು: ಹೀಗೆ, ಡ್ರಾಮಾ ನೀನು ಮಾಡು ಎಂದು ತಿಳಿಸಿದ್ರು. ಹೀಗೆ ಹೈಸ್ಕೂಲ್ನಲ್ಲಿ ಮಾಡಿದ ಡ್ರಾಮಾಗೆ ಬಹುಮಾನ ಕೂಡಾ ಬಂತು. ನನಗೆ ಬೆಸ್ಟ್ ಆ್ಯಕ್ಷರ್ ಅವಾರ್ಡ್ ಕೂಡಾ ಸಿಕ್ತು. ಆಗ್ಲೇ ನನ್ನನ್ನು ಆ್ಯಕ್ಟರ್ ಅಂತಾ ಅಂಗೀಕಾರ ಮಾಡಿದ್ರು, ನಂತರ ಪ್ರೊಫೆಶನಲ್ ಆಗಿ ತೆಗೆದುಕೊಂಡೆ. ಸದ್ಯ ನನ್ನಿಂದ ಸಾಧ್ಯ ಆದಷ್ಟು ನಟನೆ ಮಾಡಿ ಮಕ್ಕಳನ್ನು ರಂಜಿಸುತ್ತಿದ್ದೀನಿ. ಅದಕ್ಕೆ ಕಾರಣ ಎಪಿಎಸ್ನಿಂದ ಆರಂಭ ಆದ ಪಯಣ ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಇದೆ. ಆ ಹೈಸ್ಕೂಲ್, ಕಟ್ಟಡ, ಮುಂದಿದ್ದ ಮೈದಾನ, ಆಟಗಳು... ಮರೆಯಲು ಸಾಧ್ಯವೇ ಇಲ್ಲ. ನೆನಪುಗಳು ಮನಸ್ಸಲ್ಲಿ ಹಚ್ಚ ಹಸಿರಾಗಿರುತ್ತದೆ. ತುಂಬಾನೆ ಹೆಮ್ಮೆ.