ಬೆಂಗಳೂರು : ಪತ್ನಿ ಹಾಗೂ ಆಕೆಯ ತಾಯಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಆರೋಪಿಯನ್ನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಸೀಫ್ ಬಂಧಿತ ಆರೋಪಿ. ತವರು ಮನೆ ಸೇರಿದ್ದ ಪತ್ನಿ ಹೀನಾ ಕೌಸರ್ ಹುಡುಕಿಕೊಂಡು ಜನವರಿ 14ರಂದು ಸರಬಂಡೆಪಾಳ್ಯದಲ್ಲಿರುವ ಮನೆಗೆ ಬಂದಿದ್ದ ಆರೋಪಿ, ಪತ್ನಿ ಹಾಗೂ ಅತ್ತೆ ಪರ್ವೀನ್ ತಾಜ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಪರ್ವೀನ್ ತಾಜ್ ಮಾತನಾಡಿ, ''ಹತ್ತು ವರ್ಷಗಳ ಹಿಂದೆ ಮಗಳು ಹೀನಾ ಕೌಸರ್ ಹಾಗೂ ಆಸೀಫ್ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಅವನು ಪರಸ್ತ್ರಿಯೊಂದಿಗೆ ಸಂಬಂಧ ಹೊಂದಿದ್ದ. ಅಲ್ಲದೇ, ನಮ್ಮ ಮಗಳು ಬೇರೆಯವರಿಗೆ ಮೆಸೇಜ್ ಮಾಡಿದ್ದನ್ನ ಕಂಡು ಅನುಮಾನಿಸಿ ಅವಳ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ 8 ತಿಂಗಳ ಹಿಂದೆ ಮನೆಗೆ ತಂದು ಬಿಟ್ಟುಹೋಗಿದ್ದ. ಇದಾದ ನಂತರ ನಮ್ಮ ಮೇಲೆ ಮೂರು ಬಾರಿ ಅಕ್ಯಾಟ್ ಮಾಡಿದ್ದ'' ಎಂದರು.
''ನನ್ನ ತಲೆಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಈ ಬಾರಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಹೆಂಡತಿಯನ್ನ ಸಾಯಿಸಬೇಕು ಎಂದೇ ಅವನು ಹಲ್ಲೆ ನಡೆಸಿದ್ದಾನೆ. ನಮ್ಮ ಮಗಳು ಅಂಗಡಿಗೆ ಹೋಗಿ ವಾಪಸ್ ಬರುವಾಗ ಮಚ್ಚಿನಿಂದ ಹೊಡೆದಿದ್ದಾನೆ. ಅವಳನ್ನ ಬಿಡಿಸಿಕೊಳ್ಳಲು ಹೋದ ನನ್ನ ಮೇಲೆಯೂ ಹಲ್ಲೆ ನಡೆಸಿದ್ದಾನೆ'' ಎಂದು ತಿಳಿಸಿದರು.
''ಅವಳು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅವನು ಅನುಮಾನ ಪಡುತ್ತಿದ್ದಾನೆ. ಈಗಾಗಲೇ ಅಳಿಯ ಬೇರೊಂದು ಮದುವೆ ಮಾಡಿಕೊಂಡಿದ್ದಾನೆ. ಆದರೆ ಈ ಮೆಸೇಜ್ ವಿಚಾರಕ್ಕೆ ಅನುಮಾನಿಸಿ ಜಗಳ ಮಾಡಿದ್ದಾನೆ. ಈಗ ನಮ್ಮ ಮಗಳ ತಲೆಗೆ ತುಂಬಾ ಪೆಟ್ಟಾಗಿದೆ, ಕೈಗೂ ಪೆಟ್ಟಾಗಿದೆ'' ಎಂದು ಹೇಳಿದ್ದಾರೆ.
ತಾಯಿ ಮಗಳಿಬ್ಬರ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಬರುತ್ತಿದ್ದಂತೆ ಮಾರಕಾಸ್ತ್ರ ಬಿಟ್ಟು ಸ್ಥಳದಿಂದ ಆಸೀಫ್ ಪರಾರಿಯಾಗಿದ್ದ. ಗಾಯಗೊಂಡಿದ್ದ ಹೀನಾ ಕೌಸರ್ ಹಾಗೂ ಪರ್ವಿನ್ ತಾಜ್‌ಳನ್ನ ಅಕ್ಕಪಕ್ಕದವರು ಆಸ್ಪತ್ರೆಗೆ ದಾಖಲಿಸಿದ್ದರು.
ಗಾಯಾಳುಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಆರೋಪಿ ಆಸೀಫ್‌ನನ್ನ ಬಂಧಿಸಿದ್ದಾರೆ. ಗಾಯಾಳುಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಸಿಗರೇಟ್ ವಿಚಾರಕ್ಕೆ ಕಾಂಡಿಮೆಂಟ್ಸ್ ಸಿಬ್ಬಂದಿ ಮೇಲೆ ಹಲ್ಲೆ, ಇಬ್ಬರ ಬಂಧನ - ASSAULT ON CONDIMENTS STAFF