ರಕ್ಷಿತ್ ಶೆಟ್ಟಿ ಹಾಗೂ '777 ಚಾರ್ಲಿ' ಸಿನಿಮಾ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಕನ್ನಡದ ಅತ್ಯಂತ ಜನಪ್ರಿಯ, ಬೇಡಿಕೆಯ ನಟ ರಕ್ಷಿತ್ ಶೆಟ್ಟಿ ಮನರಂಜನಾ ಕ್ಷೇತ್ರಕ್ಕೆ ಕೊಟ್ಟ ಅದ್ಭುತ ಸಿನಿಮಾ ಇದಾಗಿದೆ. ಈವರೆಗೆ ಹಲವು ಸೂಪರ್ ಹಿಟ್ ಸಿನಿಮಾ ಕೊಟ್ಟರೂ '777 ಚಾರ್ಲಿ'ಗೆ ಭಾರತೀಯ ಚಿತ್ರರಂಗದಲ್ಲೇ ವಿಶೇಷ ಸ್ಥಾನಮಾನವಿದೆ.
ಈ ಯಶಸ್ವಿ ಚಿತ್ರದ ಮೂಲಕ ಜನಪ್ರಿಯವಾಗಿರುವ ಶ್ವಾನ ಚಾರ್ಲಿ ಇದೀಗ 6 ಮುದ್ದು ಮರಿಗಳಿಗೆ ಜನ್ಮ ನೀಡಿದೆ. ರಕ್ಷಿತ್ ಶೆಟ್ಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಚಾರ್ಲಿ ಮತ್ತು ಮರಿಗಳ ವಿಡಿಯೋ ಹಂಚಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಶೇರ್ ಮಾಡಿರುವ ವಿಡಿಯೋ: ''ಇದು ಸರ್ಪ್ರೈಸ್ ಲೈವ್. ಒಂದು ಸೂಕ್ತ ಕಾರಣ ಇದೆ. ಪ್ಲ್ಯಾನ್ಡ್ ಲೈವ್ ಅಲ್ಲ. 777 ಚಾರ್ಲಿ ತೆರೆಕಂಡು ಎರಡು ವರ್ಷ ಆಗ್ತಾ ಬಂತು. ಈವರೆಗೆ ಚಾರ್ಲಿ ತಾಯಿಯಾದರೆ, ಆಕೆಯ ಪಯಣ ಪರಿಪೂರ್ಣಗುತ್ತದೆ ಎಂದು ಅನಿಸುತ್ತಿತ್ತು. ಇಡೀ ಚಿತ್ರತಂಡಕ್ಕೆ ಈ ಭಾವನೆ ಇತ್ತು. ಈ ಬಗ್ಗೆ ಕಿರಣ್ ರಾಜ್ ಮೊದಲು ಹೇಳಿದ್ದರು. ನಂತರ ನಾನು ಸೇರಿದಂತೆ ಚಿತ್ರತಂಡ, ಚಾರ್ಲಿ ಮರಿಗಳಿಗೆ ಜನ್ಮಕೊಡಬೇಕು. ಆಕೆ ತಾಯಿಯಾಗಬೇಕು ಎಂದುಕೊಳ್ಳುತ್ತಿದ್ದೆವು. ಪ್ರಮೋದ್ಗೆ ಕರೆ ಮಾಡಿ ಚಾರ್ಲಿ ಸ್ಥಿತಿ ಬಗ್ಗೆ ವಿಚಾರಿಸುತ್ತಿದ್ದೆ. ಚಾರ್ಲಿಗೆ ವಯಸ್ಸಾದ ಕಾರಣ ಇನ್ನು ಮರಿಗಳಾಗುವ ಸಾಧ್ಯತೆ ಕಡಿಮೆ ಎಂದು ತಿಳಿಸುತ್ತಿದ್ದರು. ಆದರೆ ಸರ್ಪೈಸಿಂಗ್ಲಿ ಮೇ 9ರಂದು ಚಾರ್ಲಿ 6 ಮುದ್ದು ಮರಿಗಳಿಗೆ ಜನ್ಮ ನೀಡಿದ್ದಾಳೆ. ಹಾಗಾಗಿ ಚಾರ್ಲಿ ಮತ್ತು ಮರಿಗಳನ್ನು ನೋಡಲು ಮೈಸೂರಿಗೆ ಬಂದಿದ್ದೇನೆ'' ಎಂದು ತಿಳಿಸಿದ ನಟ, ಚಾರ್ಲಿ ಮತ್ತು ಮರಿಗಳನ್ನು ತೋರಿಸಿದ್ದಾರೆ.