ಚಿತ್ರಮಂದಿರಗಳಲ್ಲಿ ಶತದಿನಗಳ ಕಾಲ ಓಡಿರುವ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯ ಹೊಸ ಚಿತ್ರವಿಂದು ಅಧಿಕೃತವಾಗಿ ಘೋಷಣೆಯಾಗಿದೆ. ಮ್ಯೂಸಿಕಲ್ ಲವ್ ಸ್ಟೋರಿ ಕೃಷ್ಣಂ ಪ್ರಣಯ ಸಖಿ ಸ್ಯಾಂಡಲ್ವುಡ್ ಗಣಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಇದರ ಬೆನ್ನಲ್ಲೇ ಲವರ್ ಬಾಯ್ ಮತ್ತೊಂದು ಕುತೂಹಲಕಾರಿ ಮತ್ತು ಬಿಗ್ ಬಜೆಟ್ ಪ್ರಾಜೆಕ್ಟ್ನೊಂದಿಗೆ ಮರಳಲು ಸಜ್ಜಾಗಿದ್ದಾರೆ. ಚಿತ್ರದ ಶೀರ್ಷಿಕೆ 'ಪಿನಾಕ'.
ಇತ್ತೀಚೆಗಷ್ಟೇ ಟಾಲಿವುಡ್ನಲ್ಲಿ ಹೆಸರು ಮಾಡಿರುವ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಪೀಪಲ್ ಮೀಡಿಯಾ ಫ್ಯಾಕ್ಟರಿ'ಯು ಚಂದನವನದ ಬಹುಬೇಡಿಕೆ ನಟನೊಂದಿಗೆ ಸಿನಿಮಾ ಮಾಡುತ್ತಿದ್ದೇವೆ ಅಂತಾ ಘೋಷಿಸಿತ್ತು. ಕಳೆದ ಎರಡ್ಮೂರು ದಿನಗಳಲ್ಲಿ ಪೋಸ್ಟರ್ಸ್ ಅನಾವರಣಗೊಳಿಸಿ, ಟೈಟಲ್ ಟೀಸರ್ ಬಿಡುಗಡೆ ದಿನಾಂಕವನ್ನೂ ಘೋಷಿಸಿತ್ತು. ನಿಗದಿಯಂತೆ ಇಂದು ಗಣೇಶ್ ಅವರ ಹೊಸ ಚಿತ್ರದ ಶೀರ್ಷಿಕೆ ಮತ್ತು ಟೀಸರ್ ಬಿಡುಗಡೆ ಆಗಿದೆ.
ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ: ಪಿನಾಕ ಟೈಟಲ್ ಟೀಸರ್, ಇದು ಕಾಲಗರ್ಭದ ಕೂಗು ಎಂಬ ಗಣೇಶ್ ಅವರ ಹಿನ್ನೆಲೆ ದನಿಯೊಂದಿಗೆ ಪ್ರಾರಂಭವಾಗಿದೆ. ಚರಿತ್ರೆಯ ಎದೆ ಸೀಳಿ, ವರ್ತಮಾನದ ಕಿವಿಗಪ್ಪಳಿಸಿದ ಘರ್ಜನೆ. ಯಾರೋ ಹೆಣೆದ ಕಟ್ಟುಕಥೆಯಲ್ಲ. ಜನರಿಗಾಗಿ ಬದುಕಿದ ವೀರನ ದಂತಕಥೆ. ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ. ಭೂತ, ಪ್ರೇತ, ಪಿಶಾಚಿಗಳ ಹಸಿವ ನೀಗಿಸೋ ಮಾರಣಹೋಮ. ಸೃಷ್ಟಿ, ಸಮಷ್ಠಿಯನ್ನೇ ನಡುಗಿಸೋ ಕ್ರೂರ ಸಂಗ್ರಾಮ. ವಿನಾತನ ವಿಧಿಬರಹವನ್ನೇ ಚದುರಿಸೋ ಕ್ಷುದ್ರ ಮಂತ್ರ. ಪಂಚಭೂತಗಳು ತರ, ತರ, ತರ.. ತತ್ತರ ಎಂಬ ಗಣೇಶ್ ಡೈಲಾಗ್ ಮತ್ತು ಹಿನ್ನೆಲೆ ದೃಶ್ಯ ಮೈಜುಂ ಎನಿಸುವಂತಿದೆ. 2 ನಿಮಿಷ 54 ಸೆಕೆಂಡುಗಳುಳ್ಳ ಟೀಸರ್ ಸಿನಿಮಾ ಕಥೆ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.
ಟೈಟಲ್ ಟೀಸರ್ ಬಗ್ಗೆ ಪೋಸ್ಟರ್ ಹಂಚಿಕೊಂಡಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ, ಇದು ಕ್ಷುದ್ರ ಶಕ್ತಿ ಮತ್ತು ರುದ್ರ ಶಕ್ತಿ ನಡುವಿನ ಮಹಾ ಸಮರ. 'PMF49' ಪಿನಾಕ. ಹೊಸ ಅವತಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್. ಧನಂಜಯ ನಿರ್ದೇಶನದ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿ ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದೆ.
It is time for an epic battle between 'Kshudra Shakti 💀' and 'Rudra Shakti 🔱'#PMF49 is #Pinaka 🏹
— People Media Factory (@peoplemediafcy) January 2, 2025
▶️ https://t.co/1hoi7Fndar
Staring Golden Star @Official_Ganesh in a spine chilling avatar ❤🔥
Produced by @vishwaprasadtg & #KrithiPrasad under @peoplemediafcy
Directed by… pic.twitter.com/WFSgo6I4Jw
ಇದನ್ನೂ ಓದಿ: ಚಿತ್ರರಂಗಕ್ಕೆ ಜೂ.ಕಿಚ್ಚನ ಎಂಟ್ರಿ: ಸುದೀಪ್ ಸಿನಿಮಾದಲ್ಲಿ ಅಕ್ಕನ ಮಗ ಸಂಚಿತ್ ಸಂಜೀವ್
ಟಿ.ಜಿ. ವಿಶ್ವಪ್ರಸಾದ್ ನೇತೃತ್ವದ ಪೀಪಲ್ ಮೀಡಿಯಾ ಫ್ಯಾಕ್ಟರಿಯು ಹಲವು ಸಿನಿಮಾಗಳನ್ನು ನಿರ್ಮಾಣ ಮಾಡೋ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಗಣೇಶ್ ಮುಖ್ಯಭೂಮಿಕೆಯ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಖ್ಯಾತ ನೃತ್ಯ ನಿರ್ದೇಶಕ ಧನಂಜಯ ಅವರು ಈ ಪಿನಾಕ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಇಂದು ಟೈಟಲ್ ಜೊತೆಗೆ ಸಿನಿಮಾ ಕಥೆಯ ಒಂದು ನೋಟ ಸಿಕ್ಕಿದ್ದು, ಬರುವ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನೀಡಲಿದೆ.
ಇದನ್ನೂ ಓದಿ: 'ಅಮ್ಮನ ನೆನಪು, ನಾನಿನ್ನೂ ಸಿನಿಮಾವನ್ನು ಸಂಪೂರ್ಣ ವೀಕ್ಷಿಸಿಲ್ಲ': ಮ್ಯಾಕ್ಸ್ ನಾಯಕ ಸುದೀಪ್
2024ರ ಆಗಸ್ಟ್ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗಿದ್ದವು. ಹೀಗೆ, ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಪ್ರೇಮ್ಕಹಾನಿ "ಕೃಷ್ಣಂ ಪ್ರಣಯ ಸಖಿ" ಆಗಸ್ಟ್ 15ರಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದ್ದ ಚಿತ್ರ, ಶತದಿನಗಳ ಕಾಲ ಕೆಲ ಥಿಯೇಟರ್ಗಳಲ್ಲಿ ಓಡಿತ್ತು. ಈ ಯಶಸ್ಸಿನ ಬಳಿಕ ಗಣೇಶ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವನ್ನು ಪ್ರೇಕ್ಷಕರು ವ್ಯಕ್ತಪಡಿಸಿದ್ದರು.