ಮುಂಬೈ:ಭಾರತೀಯ ಷೇರು ಮಾರುಕಟ್ಟೆ ಬೆಂಚ್ ಮಾರ್ಕ್ ನಿಫ್ಟಿ 50 ಹೊಸ ದಾಖಲೆಯ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿದೆ ಮತ್ತು ಸಕಾರಾತ್ಮಕ ಜಾಗತಿಕ ಪ್ರವೃತ್ತಿಗಳ ನಡುವೆ ಆಗಸ್ಟ್ 30 ರ ಶುಕ್ರವಾರದಂದು ಸತತ 12 ನೇ ದಿನದ ವಹಿವಾಟಿನಲ್ಲಿ ಏರಿಕೆಯಲ್ಲಿ ಕೊನೆಗೊಂಡಿದೆ.
ಹಾಗೆಯೇ 30 ಷೇರುಗಳ ಸೆನ್ಸೆಕ್ಸ್ ಕೂಡ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆಯಾಯಿತು. ಮಾಸಿಕವಾಗಿ ನೋಡುವುದಾದರೆ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳ ಲಾಭ ಸತತ ಮೂರನೇ ತಿಂಗಳು ಏರಿಕೆಯಾಗಿದೆ. ಕಳೆದ ತಿಂಗಳಿಂದ ಈ ತಿಂಗಳಿಗೆ ನಿಫ್ಟಿ 50 ಶೇಕಡಾ 1.1 ರಷ್ಟು ಏರಿಕೆ ಕಂಡರೆ, ಸೆನ್ಸೆಕ್ಸ್ ಶೇಕಡಾ 0.80 ರಷ್ಟು ಏರಿಕೆಯಾಗಿದೆ.
ತಿಂಗಳ ಕೊನೆಯ ಟ್ರೇಡಿಂಗ್ ದಿನದಂದು, ನಿಫ್ಟಿ 50 ತನ್ನ ಹೊಸ ದಾಖಲೆಯ ಗರಿಷ್ಠ 25,268.35 ಕ್ಕೆ ತಲುಪಿದರೆ, ಸೆನ್ಸೆಕ್ಸ್ ಸಹ ವಹಿವಾಟಿನ ಮಧ್ಯದಲ್ಲಿ 82,637.03 ರ ಹೊಸ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಸೆನ್ಸೆಕ್ಸ್ ಅಂತಿಮವಾಗಿ 231 ಪಾಯಿಂಟ್ ಅಥವಾ ಶೇಕಡಾ 0.28 ರಷ್ಟು ಏರಿಕೆ ಕಂಡು 82,365.77 ಕ್ಕೆ ಕೊನೆಗೊಂಡರೆ, ನಿಫ್ಟಿ 50 84 ಪಾಯಿಂಟ್ ಅಥವಾ ಶೇಕಡಾ 0.33 ರಷ್ಟು ಏರಿಕೆ ಕಂಡು 25,235.90 ರಲ್ಲಿ ಕೊನೆಗೊಂಡಿದೆ. ಇದು ಎರಡೂ ಸೂಚ್ಯಂಕಗಳಿಗೆ ಹೊಸ ಗರಿಷ್ಠ ಮುಕ್ತಾಯವಾಗಿದೆ.
ಟಿಸಿಎಸ್, ಎಚ್ಸಿಎಲ್ ಟೆಕ್, ಪರ್ಸಿಸ್ಟೆಂಟ್ ಸಿಸ್ಟಮ್ಸ್, ಭಾರ್ತಿ ಏರ್ ಟೆಲ್, ಬಜಾಜ್ ಫಿನ್ ಸರ್ವ್, ಬಜಾಜ್ ಆಟೋ, ಟಿವಿಎಸ್ ಮೋಟಾರ್, ಸನ್ ಫಾರ್ಮಾ, ಸಿಪ್ಲಾ, ದಿವಿಸ್ ಲ್ಯಾಬ್ಸ್ ಮತ್ತು ಲುಪಿನ್ ಸೇರಿದಂತೆ 280 ಷೇರುಗಳು ಬಿಎಸ್ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.
ಮಧ್ಯಮ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಬೆಂಚ್ಮಾರ್ಕ್ಗಳನ್ನು ಮೀರಿಸಿದವು. ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇಕಡಾ 0.50 ರಷ್ಟು ಏರಿಕೆ ಕಂಡರೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇಕಡಾ 0.73 ರಷ್ಟು ಏರಿಕೆಯಾಗಿದೆ. ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ದಿನದ ವಹಿವಾಟು ಸುಮಾರು 462.6 ಲಕ್ಷ ಕೋಟಿ ರೂ.ಗಳಿಂದ ದಾಖಲೆಯ 464.4 ಲಕ್ಷ ಕೋಟಿ ರೂ.ಗೆ ಏರಿದೆ. ಇದು ಹೂಡಿಕೆದಾರರನ್ನು ಒಂದೇ ದಿನದ ವಹಿವಾಟಿನಲ್ಲಿ ಸುಮಾರು 2 ಲಕ್ಷ ಕೋಟಿ ರೂ.ಗಳಷ್ಟು ಶ್ರೀಮಂತರನ್ನಾಗಿ ಮಾಡಿದೆ.
ನಿಫ್ಟಿ 50 ಸೂಚ್ಯಂಕದಲ್ಲಿ 41 ಷೇರುಗಳು ಹಸಿರು ಬಣ್ಣದಲ್ಲಿ ಕೊನೆಗೊಂಡವು. ಸಿಪ್ಲಾ (2.23 ಶೇಕಡಾ), ಬಜಾಜ್ ಫೈನಾನ್ಸ್ (2.07 ಶೇಕಡಾ) ಮತ್ತು ಮಹೀಂದ್ರಾ ಮತ್ತು ಮಹೀಂದ್ರಾ (1.97 ಶೇಕಡಾ) ಷೇರುಗಳು ಹೆಚ್ಚು ಲಾಭ ಗಳಿಸಿದವು. ಮತ್ತೊಂದೆಡೆ, ಟಾಟಾ ಮೋಟಾರ್ಸ್ (ಶೇಕಡಾ 1.13), ಎಚ್ಡಿಎಫ್ ಸಿ ಬ್ಯಾಂಕ್ (ಶೇಕಡಾ 0.78) ಮತ್ತು ಟೆಕ್ ಮಹೀಂದ್ರಾ (ಶೇಕಡಾ 0.72 ರಷ್ಟು ಕುಸಿತ) ಷೇರುಗಳು ನಿಫ್ಟಿಯಲ್ಲಿ ಹೆಚ್ಚು ನಷ್ಟ ಅನುಭವಿಸಿದವು.
ಇದನ್ನೂ ಓದಿ : ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಮೇಲಿನ ನಿರ್ಬಂಧ ತೆರವುಗೊಳಿಸಿದ ಕೇಂದ್ರ ಸರ್ಕಾರ - ethanol production