ಮುಂಬೈ: ಮುಂಬೈನ ಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಯೋಜನೆಯ ಟೆಂಡರ್ ಅನ್ನು ಅದಾನಿ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ಗೆ ನೀಡಿರುವ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ. ಕಂಪನಿಗೆ ಟೆಂಡರ್ ನೀಡಿದ ಮಹಾರಾಷ್ಟ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಯುಎಇ ಮೂಲದ ಸೆಕ್ಲಿಂಕ್ ಟೆಕ್ನಾಲಜೀಸ್ ಕಾರ್ಪೊರೇಷನ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
"ಅರ್ಜಿಯಲ್ಲಿ ಎತ್ತಲಾದ ಪ್ರಶ್ನೆಗಳು ಬಲವಾಗಿಲ್ಲ. ಹಿಂದಿನ ಟೆಂಡರ್ ರದ್ದುಗೊಳಿಸಿ ಹೊಸ ಟೆಂಡರ್ ನೀಡುವ ಸರ್ಕಾರದ ಕ್ರಮ ಸರಿಯಲ್ಲ ಎಂದು ರೂಪಿಸುವಲ್ಲಿ ಅರ್ಜಿ ವಿಫಲವಾಗಿದೆ" ಎಂದು ನ್ಯಾಯಾಲಯ ಹೇಳಿದೆ.
259 ಹೆಕ್ಟೇರ್ ಧಾರಾವಿ ಪುನರಾಭಿವೃದ್ಧಿ ಯೋಜನೆಗೆ ಅದಾನಿ ಗ್ರೂಪ್ ಅತಿ ದೊಡ್ಡ ಬಿಡ್ ದಾರನಾಗಿ ಹೊರಹೊಮ್ಮಿತ್ತು. 2022ರ ಟೆಂಡರ್ ಪ್ರಕ್ರಿಯೆಯಲ್ಲಿ 5,069 ಕೋಟಿ ರೂ.ಗಳಿಗೆ ಅದಾನಿ ಗ್ರೂಪ್ ಈ ಟೆಂಡರ್ ಪಡೆದುಕೊಂಡಿತ್ತು. 2018ರಲ್ಲಿ ಹೊರಡಿಸಲಾದ ಮೊದಲ ಟೆಂಡರ್ನಲ್ಲಿ, ಅರ್ಜಿದಾರರ ಕಂಪನಿಯು 7,200 ಕೋಟಿ ರೂ.ಗಳ ಪ್ರಸ್ತಾಪದೊಂದಿಗೆ ಅತಿ ದೊಡ್ಡ ಬಿಡ್ದಾರನಾಗಿ ಹೊರಹೊಮ್ಮಿತ್ತು.
ಏಕನಾಥ್ ಶಿಂಧೆ ಸರ್ಕಾರವು 2018ರ ಟೆಂಡರ್ ಅನ್ನು ರದ್ದುಗೊಳಿಸಿತ್ತು ಮತ್ತು ಹೆಚ್ಚುವರಿ ಷರತ್ತುಗಳೊಂದಿಗೆ 2022ರಲ್ಲಿ ಹೊಸ ಟೆಂಡರ್ ಹೊರಡಿಸಿತ್ತು. ಕೊಳೆಗೇರಿ ಪುನರ್ವಸತಿಗಾಗಿ 45 ಎಕರೆ ರೈಲ್ವೆ ಭೂಮಿಯನ್ನು ಯೋಜನೆಯಲ್ಲಿ ಸೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಮೂಲ ಪ್ರಸ್ತಾವನೆಯಲ್ಲಿ ಈ ಅಂಶ ಸೇರ್ಪಡೆಯಾಗಿರಲಿಲ್ಲ.
ಬದಲಾವಣೆಗಳನ್ನು ಪ್ರತಿಬಿಂಬಿಸಲು ಮತ್ತು ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ವೆಚ್ಚದಂಥ ಅಂಶಗಳನ್ನು ಸೇರಿಸಲು ಸಾಧ್ಯವಾಗುವಂತೆ ರಾಜ್ಯ ಸರ್ಕಾರ ಹೊಸ ಟೆಂಡರ್ ಹೊರಡಿಸಬೇಕೆಂದು ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋನಿ ಶಿಫಾರಸು ಮಾಡಿದ್ದರು.
ರಾಜ್ಯ ಸರ್ಕಾರವು ಅರ್ಜಿದಾರರ ವಾದವನ್ನು ವಿರೋಧಿಸಿತ್ತು ಮತ್ತು ಪರಿಷ್ಕೃತ ಟೆಂಡರ್ ಷರತ್ತುಗಳು ನಿರಂಕುಶವಾಗಿಲ್ಲ ಎಂದು ಹೇಳಿತ್ತು. ಅಭಿವೃದ್ಧಿಯು ಆರ್ಥಿಕವಾಗಿ ಕಾರ್ಯಸಾಧ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಟೆಂಡರ್ ಪರಿಷ್ಕರಿಸುವುದು ಅಗತ್ಯವಾಗಿದೆ ಎಂದು ಸಮರ್ಥಿಸಿಕೊಂಡಿತ್ತು. 2019 ಮತ್ತು 2022ರ ನಡುವೆ ಬದಲಾದ ಆರ್ಥಿಕ ಭೂದೃಶ್ಯವನ್ನು ಉಲ್ಲೇಖಿಸಿ, ರಾಜ್ಯ ಸರ್ಕಾರವು 2018ರ ಟೆಂಡರ್ ಅನ್ನು ರದ್ದುಗೊಳಿಸುವ ಮತ್ತು 2022ರಲ್ಲಿ ಹೊಸ ಟೆಂಡರ್ ಕರೆಯುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
2018ರ ಟೆಂಡರ್ ರದ್ದತಿ ಮತ್ತು ನಂತರ 2022ರಲ್ಲಿ ಅದಾನಿ ಗ್ರೂಪ್‌ಗೆ ಟೆಂಡರ್ ನೀಡಿದ್ದನ್ನು ಸೆಕ್ಲಿಂಕ್ ಟೆಕ್ನಾಲಜೀಸ್ ಕಾರ್ಪೊರೇಷನ್ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.
ಬಾಂದ್ರಾ-ಕುರ್ಲಾ ಬಳಿ 2.8 ಚದರ ಕಿ.ಮೀ ಪ್ರದೇಶದಲ್ಲಿ ಹರಡಿರುವ ಧಾರಾವಿ ವಿಶ್ವದ ಅತಿದೊಡ್ಡ ಕೊಳೆಗೇರಿಗಳಲ್ಲಿ ಒಂದಾಗಿದೆ. ಬ್ರಿಟಿಷ್ ವಸಾಹತುಶಾಹಿ ಯುಗದಲ್ಲಿ 1884ರಲ್ಲಿ ಸ್ಥಾಪನೆಯಾದ ಇದು ಆರಂಭದಲ್ಲಿ ಮುಂಬೈನ ನಗರ ಕೇಂದ್ರದಿಂದ ಹೊರಹಾಕಲ್ಪಟ್ಟ ಕಾರ್ಖಾನೆಗಳು ಮತ್ತು ನಿವಾಸಿಗಳಿಗೆ ಆಶ್ರಯ ತಾಣವಾಯಿತು. ಇದರ ಅನೌಪಚಾರಿಕ ಚರ್ಮ ಮತ್ತು ಕುಂಬಾರಿಕೆ ಕೈಗಾರಿಕೆಗಳು 1,00,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ರಾಮ ಜನ್ಮಭೂಮಿ ಟ್ರಸ್ಟ್ 'ಸಾರ್ವಜನಿಕ ಪ್ರಾಧಿಕಾರ' ಘೋಷಿಸಬೇಕೆಂದು ಕೋರಿದ್ದ ಅರ್ಜಿ ವಜಾ - RAM JANMBHOOMI TRUST