ಕಲಬುರಗಿ: ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ದಶಕಗಳ ಕನಸಾಗಿದ್ದ ಜಯದೇವ ಹೃದ್ರೋಗ ಆಸ್ಪತ್ರೆ ಕೊನೆಗೂ ಲೋಕಾರ್ಪಣೆಯಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ವೈದ್ಯ ಶಿಕ್ಷಣ ಇಲಾಖೆ ಸೇರಿ ಒಟ್ಟು 377 ಕೋಟಿ ರೂ. ವೆಚ್ಚದಲ್ಲಿ 371 ಬೆಡ್ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆಯನ್ನ ಇಂದು ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆ ಮಾಡಿದ್ರು.
ಮಧ್ಯಾಹ್ನ 1 ಗಂಟೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಯ ಆಪರೇಶನ್ ಥಿಯೇಟರ್, ಕ್ಯಾಥ್‌ಲ್ಯಾಬ್, ಒಪಿಡಿ, ವಾರ್ಡ್ಗೆ ತೆರಳಿ ವೀಕ್ಷಿಸಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ದೀಪ ಬೆಳಗಿಸುವ ಮೂಲಕ ಹೈಟೆಕ್ ಜಯದೇವ ಹೃದ್ರೋಗ ಆಸ್ಪತ್ರೆಯನ್ನ ಜನಸೇವೆಗೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಯದೇವ ಆಸ್ಪತ್ರೆ ಇಡೀ ಏಷ್ಯಾ ಖಂಡದಲ್ಲೇ ದೊಡ್ಡ ಆಸ್ಪತ್ರೆಯಾಗಿದೆ. ಈ ಹೈಟೆಕ್ ಆಸ್ಪತ್ರೆಯನ್ನ ಸಾರ್ವಜನಿಕರು ಚೆನ್ನಾಗಿ ಕಾಪಾಡಿಕೊಂಡು ಹೋಗಬೇಕೆಂದು ಮನವಿ ಮಾಡಿದ್ರು. ಅಲ್ಲದೇ ಕಲಬುರಗಿಯಲ್ಲಿ ನಿಮ್ಹಾನ್ಸ್, ಡಯಾಬಿಟಾಲಾಜಿ ಘಟಕ, ಗುಲ್ಬರ್ಗಾ ವಿವಿಯ ಸಮಗ್ರ ಅಭಿವೃದ್ಧಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಇದೇ ವೇಳೆ ಮೂರು ಬೇಡಿಕೆ ಇಟ್ಟರು. ಜೊತೆಗೆ ಮೈಸೂರು ಮಾದರಿಯಲ್ಲಿ ಕಲಬುರಗಿ ಭಾಗವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕೆಂದು ತಿಳಿಸಿದರು.
![ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ](https://etvbharatimages.akamaized.net/etvbharat/prod-images/22-12-2024/kn-klb-jayadev-hospital-opening-by-cm-ka10050_22122024194117_2212f_1734876677_1082.jpg)
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದಿಂದ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ವಿಶೇಷ ಸ್ಥಾನಮಾನ ಸಿಕ್ಕಿದೆ. 2016 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆಗೆ ಮಂಜೂರಾತಿ ಕೊಟ್ಟಿದ್ದೆ. ಈ ಭಾಗದ ಜನ ಮೈಸೂರು, ಬೆಂಗಳೂರಿಗೆ ಹೋಗುವುದನ್ನ ತಪ್ಪಿಸಲು ಜಯದೇವ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಈ ಭಾಗಕ್ಕೆ 371 (ಜೆ) ಕಲಂ ಜಾರಿಯಾಗಿ 10 ವರ್ಷ ಕಳೆದ ಹಿನ್ನೆಲೆಯಲ್ಲಿ 371 (ಜೆ) ಸವಿನೆನಪಿಗಾಗಿ 371 ಬೆಡ್ ಸಾಮರ್ಥ್ಯದ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗಿದೆ ಎಂದರು. ಅಲ್ಲದೆ ಮಲ್ಲಿಕಾರ್ಜುನ ಖರ್ಗೆ ಅವರ ಮೂರು ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ಭರವಸೆ ನೀಡಿದ್ರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಈ ಭಾಗ ಎಲ್ಲಾ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಬಡವರಿಗೆ ಉಚಿತ ಚಿಕಿತ್ಸೆ ಸಿಗಲೆಂಬ ದೃಷ್ಟಿಯಿಂದ ಬೆಂಗಳೂರು, ಮೈಸೂರು ಬಳಿಕ ಕಲಬುರಗಿಯಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಆಸ್ಪತ್ರೆ ನಿರ್ಮಿಸಲಾಗಿದೆ. ಕಲಬುರಗಿಯನ್ನ ಹೆಲ್ತ್ ಹಬ್ ಮಾಡುವ ಸಂಕಲ್ಪ ಇದೆ ಅಂತಾ ತಿಳಿಸಿದರು.
ಕಾಂಗ್ರೆಸ್ ಶಾಸಕರ ಬೆಂಬಲಿಗರಿಂದ ಆಕ್ರೋಶ: ನೂತನ ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸ್ಥಳೀಯ ದಕ್ಷಿಣ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಭಾವಚಿತ್ರ ಹಾಕದೇ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದೆ ಅಂತಾ ಬೆಂಬಲಿಗರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು.
ಮತ್ತೊಂದೆಡೆ ನೆಟೆ ರೋಗದಿಂದ ಹಾಳಾದ ತೊಗರಿ ಬೆಳೆಗಾರರಿಗೆ ಕಲಬುರಗಿಯಲ್ಲೇ ಸಿಎಂ ಸಿದ್ದರಾಮಯ್ಯ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಯದೇವ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸ್ತಿದ್ದ ಹೋರಾಟಗಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಕಲಬುರಗಿಯಲ್ಲಿ 371 ಬೆಡ್ನ ಜಯದೇವ ಹೃದ್ರೋಗ ಆಸ್ಪತ್ರೆ: ವಿಶ್ವದರ್ಜೆಯ ಚಿಕಿತ್ಸಾ ಸೇವೆ ಲಭ್ಯ
ಇದನ್ನೂ ಓದಿ: ಆಸ್ಪತ್ರೆಯಲ್ಲೂ ಮಕ್ಕಳಿಗೆ ಆಟದ ಜೊತೆ ಪಾಠ; ಚಿಲ್ಡ್ರನ್ಸ್ ಫ್ರೆಂಡ್ಲಿ ವಾರ್ಡ್ ತೆರೆದ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ