ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಗೊಂಡಿರುವ 71 ಸಾವಿರ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ನಾಳೆ (ಸೋಮವಾರ) ಪ್ರಮಾಣಪತ್ರಗಳನ್ನು ವಿತರಣೆ ಮಾಡಲಿದ್ದಾರೆ. ಪ್ರಧಾನಿ ಕಚೇರಿಯಿಂದ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸರ್ಕಾರಿ ಉದ್ಯೋಗಗಳ ಸೃಷ್ಟಿ ಮತ್ತು ಯುವಕರಿಗೆ ಹುದ್ದೆಗಳನ್ನು ನೀಡಲು ಕೇಂದ್ರ ಸರ್ಕಾರ 'ರೋಜ್‌ಗಾರ್ ಮೇಳ'ವನ್ನು ನಡೆಸುತ್ತಿದೆ. ಇದರಡಿ, ಅರ್ಹರಿಗೆ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಹುದ್ದೆ ನೀಡಲಾಗುತ್ತಿದೆ.
ಬೆಳಗ್ಗೆ 10.30 ಕ್ಕೆ ಕಾರ್ಯಕ್ರಮ ನಡೆಯಲಿದ್ದು, ನೇಮಕಾತಿಗೆ ಆಯ್ಕೆಯಾದವರ ಕುರಿತು ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಉದ್ಯೋಗ ಮೇಳವು ದೇಶ ಕಟ್ಟುವ ಮತ್ತು ಸ್ವಯಂ ಸಬಲೀಕರಣಕ್ಕಾಗಿ ಯುವಜನತೆಗೆ ಅರ್ಥಪೂರ್ಣ ಅವಕಾಶ ಕಲ್ಪಿಸುತ್ತದೆ. ಇದರ ಜೊತೆಗೆ, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನ ಮಂತ್ರಿಯವರ ಬದ್ಧತೆ ಈಡೇರಿಸುವ ನಿಟ್ಟಿನಲ್ಲಿ ಈ ಮೇಳವು ಮಹತ್ವದ್ದಾಗಿದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶಾದ್ಯಂತ 45 ಸ್ಥಳಗಳಲ್ಲಿ ಉದ್ಯೋಗ ಮೇಳದ ಕಾರ್ಯಕ್ರಮ ನಡೆಯಲಿದೆ. ಗೃಹ ಸಚಿವಾಲಯ, ಅಂಚೆ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು/ಇಲಾಖೆಗಳಿಗೆ ಹೊಸ ನೇಮಕಾತಿಗಳು ನಡೆಯಲಿವೆ.
ಏನಿದು ರೋಜ್‌ಗಾರ್ ಮೇಳ? ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡಿಲ್ಲ. ಮೋದಿ ಸರ್ಕಾರ ಬಂದ ಬಳಿಕ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ವಿಪಕ್ಷಗಳು ಈಗಾಗಲೇ ಸಾಕಷ್ಟು ಟೀಕೆಗಳನ್ನು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರೋಜ್‌ಗಾರ್ ಮೇಳವನ್ನು ಪ್ರಾರಂಭಿಸಿದೆ. 2022 ರ ಅಕ್ಟೋಬರ್ 22 ರಂದು ಪ್ರಧಾನಿ ಮೋದಿ ಅವರು 'ರೋಜ್‌ಗಾರ್ ಮೇಳ'ಕ್ಕೆ ಚಾಲನೆ ನೀಡಿದ್ದರು.
ಇದನ್ನೂ ಓದಿ: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ: ಕಾಲ್ತುಳಿತದ ವಿಡಿಯೋ ಬಿಡುಗಡೆ ಮಾಡಿದ ಖಾಕಿ